ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲುಗಿದ ನಲವಾಗಲ; ಈ ಊರಲ್ಲಿ ಉಸಿರೇ ವಿಷ

ಬಗೆಹರಿಯದ ಗ್ರಾಮ ಸ್ಥಳಾಂತರ ವಿವಾದ; ಕಾರ್ಖಾನೆ ಹೊಗೆಗೆ ಗ್ರಾಮಸ್ಥರ ನರಳಾಟ
Last Updated 19 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಹಾವೇರಿ: ಸುಮಾರು 150 ವರ್ಷಗಳ ಇತಿಹಾಸವುಳ್ಳನಲವಾಗಲಗ್ರಾಮವೀಗ, ಆದಿತ್ಯ ಬಿರ್ಲಾ ಗ್ರೂಪ್‌ನ ‘ಹರಿಹರ ಪಾಲಿ ಫೈಬರ್ಸ್’ (ಗ್ರಾಸಿಂ) ಕಾರ್ಖಾನೆ ಚಿಮಣಿಗಳು ಉಗುಳುತ್ತಿರುವ ವಿಷಾನಿಲದಿಂದ ಅಕ್ಷರಶಃ ನಲುಗಿ ಹೋಗಿದೆ. ಗ್ರಾಮದಿಂದ ಕಾಲು ತೆಗೆದರೆ ಎಲ್ಲಿ ಶಾಶ್ವತವಾಗಿ ಭೂಮಿ ಕಳೆದುಕೊಳ್ಳುತ್ತೇವೋ ಎಂಬ ಆತಂಕದಲ್ಲಿರುವ 452 (3,100 ಜನ) ಕುಟುಂಬಗಳು, ಜೀವ ಪಣವಿಟ್ಟು ವಿಷದ ವಾತಾವರಣಕ್ಕೇ ತಮ್ಮ ದೇಹವನ್ನು ಅರ್ಪಿಸಿಕೊಂಡು ದಿನ ದೂಡುತ್ತಿವೆ.

ಹಾಗಂತ ಇಲ್ಲಿ ಕಂಪನಿಯ ತಪ್ಪಿಲ್ಲ. ಅದು ಕಾನೂನಿನ ಪ್ರಕಾರವೇ ನಡೆದುಕೊಳ್ಳುತ್ತಿದೆ. ಹೈಕೋರ್ಟ್ ಆದೇಶದ ಪ್ರಕಾರ ನಲವಾಗಲ ಗ್ರಾಮವನ್ನು ಸ್ಥಳಾಂತರಿಸಲು ಜಿಲ್ಲಾಡಳಿತಕ್ಕೆ ಕಂಪನಿ ₹ 10 ಕೋಟಿ ಕೊಟ್ಟಿದೆ. ಆ ಹಣ ಬಳಸಿಕೊಂಡು ಗ್ರಾಮಸ್ಥರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲೆ ಬಿದ್ದಿದೆ. ಆದರೆ, ಆ ಕೆಲಸ ವಿಳಂಬವಾಗುತ್ತಿರುವ ಕಾರಣ ಗ್ರಾಮಸ್ಥರು ವಿಷಾನಿಲದ ನಡುವೆಯೇ ನರಳುವಂತಾಗಿದೆ.

ರಾಣೆಬೆನ್ನೂರು ತಾಲ್ಲೂಕಿನಲ್ಲಿರುವನಲವಾಗಲಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೇ ವಿಷಾನಿಲದ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಊರೊಳಗೆ ಹೋದಂತೆ ಅದರ ಘಾಟು ಎದೆಯ ಆಳಕ್ಕೆ ಇಳಿಯುತ್ತದೆ. ‘ಆ ವಾಸನೆಯಿಂದ ಈಗಾಗಲೇ ನೂರಕ್ಕೂ ಹೆಚ್ಚು ಗ್ರಾಮಸ್ಥರು ಪಾರ್ಶ್ವವಾಯುವಿಗೆ ಗುರಿಯಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ರಕ್ತಚಲನೆ ಸ್ಥಗಿತಗೊಂಡು ದೇಹದ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ. ರಕ್ತ ಕ್ಯಾನ್ಸರ್‌ ಮಹಾಮಾರಿಗೂ ಸಿಲುಕಿದ್ದಾರೆ...’ ಎಂದು ಹೇಳುವ ಗ್ರಾಮಸ್ಥರು, ಆ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದಕ್ಕೆ ವೈದ್ಯಕೀಯ ದಾಖಲೆಗಳನ್ನೂ ತೋರಿಸುತ್ತಾರೆ.

ಮೊದಲು 500ಕ್ಕೂ ಹೆಚ್ಚು ಕುಟುಂಬಗಳು ಈ ಗ್ರಾಮದಲ್ಲಿದ್ದವು. 1962ರಲ್ಲಿ ಊರಿನ ನಡುವೆ ಕಾರ್ಖಾನೆ ತಲೆ ಎತ್ತಿತು. ತನ್ನ ವಿಸ್ತೀರ್ಣ ಹೆಚ್ಚಿಸಿಕೊಳ್ಳಲು 1968ರಲ್ಲಿ ಇಡೀ ಗ್ರಾಮದ ಭೂಮಿಯನ್ನೇ ಖರೀದಿ ಮಾಡಿದ ಕಂಪನಿ, ಗ್ರಾಮವನ್ನು ಸ್ಥಳಾಂತರಿಸಲು ಹೆದ್ದಾರಿ ಪಕ್ಕದ ಕೋಡಿಯಾಲ ಹೊಸಪೇಟೆ ಬಳಿ ‘ಹೊಸನಲವಾಗಲು’ ಎಂಬ ಬಡಾವಣೆ ನಿರ್ಮಿಸಿತು.

ಹುಟ್ಟಿದೂರನ್ನು ತೊರೆಯಲು ನಿರಾಕರಿಸಿ ಆರಂಭದಲ್ಲಿ ಗ್ರಾಮಸ್ಥರೆಲ್ಲ ಒಟ್ಟಾಗಿ ಪ್ರತಿಭಟನೆಗೆ ಇಳಿದರು. ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸಂಧಾನಕ್ಕೆ ಯತ್ನಿಸಿದರೂ ವಿವಾದ ಬಗೆಹರಿಯಲಿಲ್ಲ. ಆದರೆ, ದಿನಗಳು ಉರುಳಿದಂತೆ ನೂರೆಂಟು ಕಾಯಿಲೆಗಳು ಉಲ್ಬಣಗೊಂಡವು. ತಪಾಸಣೆ ನಡೆಸಿದ ವೈದ್ಯರೂ, ಕಾಯಿಲೆಗಳಿಗೆ ವಿಷಾನಿಲದ ಕಾರಣವನ್ನೇ ನೀಡಿದರು.ಕ್ರಮೇಣ ವಾಯು, ನೆಲ–ಜಲ ಎಲ್ಲವೂ ವಿಷಮಯ ಆಗುತ್ತಾ ಹೋಯಿತು ಎಂದು ಗ್ರಾಮದ ಮುಖಂಡರು ಹೇಳುತ್ತಾರೆ.

ಈ ಬದಲಾವಣೆ ಅರಿತ 52 ಸುಶಿಕ್ಷಿತ ಹಾಗೂ ಸ್ಥಿತಿವಂತ ಕುಟುಂಬಗಳು,ಪ್ರಾಣ ಉಳಿಸಿಕೊಳ್ಳಲು ಸಿಕ್ಕಷ್ಟು ಜಾಗ ಸಿಗಲೆಂದು ಕಂಪನಿ ನಿರ್ಮಿಸಿದ್ದ ಹೊಸ ಬಡಾವಣೆಗೆ ಸ್ಥಳಾಂತರಗೊಂಡವು. ಆದರೆ, ಇನ್ನುಳಿದ ಕುಟುಂಬಗಳು ಕೈಗಾರಿಕೆಗೆ ಭೂಮಿ ನೀಡಿದ ತಮ್ಮ ಪೂರ್ವಜರ ತಪ್ಪನ್ನೇ ಶಪಿಸುತ್ತ ಈಗಲೂ ಅಲ್ಲೇ ನರಳುತ್ತಿವೆ.‘ಜೀವ ಹೋದರೂ ಸರಿ. ಈ ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಪಟ್ಟು ಹಿಡಿದು, ವಿಷಾನಿಲ ಕುಡಿದುಕೊಂಡೇ ಬದುಕುತ್ತಿವೆ.

ಮನೆ ಲೆಕ್ಕಾಚಾರ: ‘ಹಳೆ ಗ್ರಾಮದಲ್ಲಿ ನಮ್ಮ ಮನೆ ಎಷ್ಟು ವಿಸ್ತೀರ್ಣದಲ್ಲಿತ್ತೋ ಅದರ ಆಧಾರದ ಮೇಲೆ ಹೊಸ ಬಡಾವಣೆಯಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ನಾಲ್ಕು ವಲಯಗಳನ್ನು ಮಾಡಿ ನಿವೇಶನ ನೀಡಲಾಗಿದೆ. ‘ಎ’ ವಲಯಕ್ಕೆ (ಮೂರೂಕಾಲು ಗುಂಟೆ) ₹ 12 ಲಕ್ಷ,‘ಬಿ’ ವಲಯಕ್ಕೆ (ಎರಡೂಕಾಲು ಗುಂಟೆ) ₹ 10 ಲಕ್ಷ, ‘ಸಿ’ ವಲಯಕ್ಕೆ (ಒಂದೂಕಾಲು ಗುಂಟೆ) ₹ 7 ಲಕ್ಷ ಹಾಗೂ ‘ಡಿ’ ವಲಯಕ್ಕೆ (ಒಂದು ಗುಂಟೆ) ₹ 5 ಲಕ್ಷ ಅಂದಾಜು ಮಾಡಿದ್ದಾರೆ’ ಎಂದು ಗ್ರಾಮಸ್ಥರು ವಿವರಿಸಿದರು.

‘ಮರಳು, ಇಟ್ಟಿಗೆ, ಸಿಮೆಂಟ್, ಜಲ್ಲಿಕಲ್ಲು ಕಬ್ಬಿಣದ ಬೆಲೆ ಗಗನಕ್ಕೇರಿರುವ ಪ್ರಸ್ತುತ ಸಂದರ್ಭದಲ್ಲಿ ಅಷ್ಟು ಹಣದಲ್ಲಿ ಮನೆಗಳನ್ನು ಕಟ್ಟುವುದು ಅಸಾಧ್ಯ. ಹೀಗಾಗಿ, ಮಾರುಕಟ್ಟೆಯ ಬೆಲೆಯಂತೆ ಎ ವಲಯಕ್ಕೆ ₹ 30 ಲಕ್ಷ, ಬಿ ವಲಯಕ್ಕೆ ₹ 25 ಲಕ್ಷ, ಸಿ ವಲಯಕ್ಕೆ ₹ 15 ಲಕ್ಷ ಹಾಗೂ ಡಿ ವಲಯಕ್ಕೆ ₹ 10 ಲಕ್ಷ ನೀಡಬೇಕು’ ಎಂದುಹೊಸ ನಲವಾಗಲ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮಪ್ಪ ಸಾಲಕಟ್ಟಿ ಹಾಗೂ ಉಪಾಧ್ಯಕ್ಷ ಕೃಷ್ಣಪ್ಪ ಹಳ್ಳೆಳ್ಳಪ್ಪನವರ ಮನವಿ ಮಾಡಿದರು.

ಕಣಗಳು ಲೆಕ್ಕಕ್ಕಿಲ್ಲವಂತೆ: ‘ಹೊಸ ಬಡಾವಣೆಯಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಎಲ್ಲ ಸೌಕರ್ಯ ಒದಗಿಸುವುದಾಗಿ ಮೊದಲು ಮೂಗಿಗೆ ತುಪ್ಪ ಸವರಿದ ಕಂಪನಿಯವರು, ಈಗ ನಮ್ಮ ಮನೆಯ ಜಾಗವನ್ನಷ್ಟೇ ಹೊಸ ಬಡಾವಣೆಯಲ್ಲಿ ನೀಡುತ್ತಿದ್ದಾರೆ. ಕಣ, ಬಯಲು ಪ್ರದೇಶ ಅವರಿಗೆ ಲೆಕ್ಕಕ್ಕಿಲ್ಲವಂತೆ. ನಾವೆಲ್ಲ ಈ ವಿಷಾನಿಲದಿಂದ ಸಾಯುವ ಮೊದಲು ಸರ್ಕಾರ ಮಧ್ಯಪ್ರವೇಶ ಮಾಡಿ, ನಮಗೆ ನ್ಯಾಯ ಕಲ್ಪಿಸಿಕೊಡಬೇಕು’ ಎಂಬುದು ಕೆಂಚಪ್ಪ ಓಲೇಕಾರ ಅವರ ಮನವಿ.

‘ನಮಗೆ ಹೆತ್ತ ತಾಯಿಯೂ ಒಂದೇ. ಉತ್ತ ಭೂಮಿಯೂ ಒಂದೇ. ಹೊಸ ಸೀರೆಯುಟ್ಟು ಸುಂದರವಾಗಿ ಕಂಡ ಮಾತ್ರಕ್ಕೆ ಯಾವುದೋ ಮಹಿಳೆಯನ್ನು ತಾಯಿ ಎಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ, ‘ಹೊಸನಲವಾಗಲ’ ಎಂದು ಹೆಸರಿಟ್ಟ ಮಾತ್ರಕ್ಕೆ ಅದು ನಮ್ಮ ಭೂಮಿ ಆಗುವುದಿಲ್ಲ. ನಾವು ಆಡಿ–ಬೆಳೆದ ಮಣ್ಣಲ್ಲೇ ಮಣ್ಣಾಗುತ್ತೇವೆ’ ಎನ್ನುತ್ತಾರೆ ಹಳೆನಲವಾಗಲಗ್ರಾಮದ ಶಾಂತಪ್ಪ.

ಅಂತರ್ಜಲವೂ ವಿಷಕಾರಿ

ಕಾರ್ಖಾನೆಯ ವಿಷಯುಕ್ತ, ಆ್ಯಸಿಡ್ ಮಿಶ್ರಿತ ನೀರನ್ನು ಫಿಲ್ಟರ್ ಸಹ ಮಾಡದೆ ಹೊಳೆಗೆ ಬಿಡಲಾಗುತ್ತಿದೆ. ಅದೇ ನೀರನ್ನು ಸ್ಥಳೀಯ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಕೊಟ್ಟು ವಿಶ್ವಾಸವನ್ನೂ ಗಿಟ್ಟಿಸಿಕೊಳ್ಳಲಾಗುತ್ತದೆ.ಇನ್ನು ಹತ್ತು ವರ್ಷ ಹೋದರೆ ಆ ಭೂಮಿ ಪೂರ್ತಿ ಹಾಳಾಗುತ್ತದೆ. ಅಂತರ್ಜಲವೂ ವಿಷಕಾರಿ ಆಗುತ್ತದೆ ಎನ್ನುತ್ತಾರೆ ಉತ್ತರ ಕರ್ನಾಟಕ ರೈತಸಂಘದ ಉಪಾಧ್ಯಕ್ಷ ಪರಮೇಶ್ ಚಿನ್ನಣ್ಣನವರ್.

ಐದು ಮನೆ ಬಿಟ್ಟು ಪಟ್ಟಣ ಸೇರಿದೆ

ಕಂಪನಿ ಈಗಾಗಲೇ ಬೆಳೆದು ಬಿಟ್ಟಿದೆ. ಅಲ್ಲದೇ, ಅದು ಕಾನೂನು ಪ್ರಕಾರವೇ ನಡೆದುಕೊಳ್ಳುತ್ತಿದೆ. ಹೀಗಾಗಿ, ಅದನ್ನು ಬಂದ್ ಮಾಡಿಸುವುದು ಅಸಾಧ್ಯ. ಊರಿನಲ್ಲಿ ನನ್ನ ಐದು ಮನೆಗಳಿವೆ. ಕಾರ್ಖಾನೆಯ ದುರ್ನಾತ ತಾಳಲಾರದೆ ಅವುಗಳನ್ನು ಖಾಲಿ ಬಿಟ್ಟು, ಬಾಡಿಗೆ ಮನೆಗೆ ಬಂದು ವಾಸವಿದ್ದೇನೆ ಎಂದು ನಲವಾಗಲದ ನಾಗರಾಜ್ ವಾಲ್ಮಿಕಿ ಹೇಳಿದರು.

ನೀತಿಸಂಹಿತೆ ಮುಗಿಯಲಿ

ನಲವಾಗಲದಲ್ಲಿ ಗಂಭೀರ ಸಮಸ್ಯೆ ಇದೆ. ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಈಗಾಗಲೇ ಶುರು ಮಾಡಿದ್ದೇವೆ. ಚುನಾವಣಾ ನೀತಿಸಂಹಿತೆ ಮುಗಿಯುತ್ತಿದ್ದಂತೆಯೇ ಜರೂರಾಗಿ ಕೆಲಸ ಆಗಲಿದೆ ಎಂದು ಭರವಸೆ ನೀಡುತ್ತಾರೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT