ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಲಕ್ಕಿ ಕಂಪಿನ ನಗರಿ ಖ್ಯಾತಿಯ ಹಾವೇರಿಯಲ್ಲಿ ವಿಪರೀತ ಹಂದಿ, ಮಿತಿ ಮೀರಿದ ಮಾಫಿಯಾ!

ಕಂಗಾಲಾದ ನಾಗರಿಕರು, ಭಯದಲ್ಲಿ ಅಧಿಕಾರಿಗಳು, ಸ್ಥಳಾಂತರಿಸಿದರೂ ಮತ್ತೆ ರಸ್ತೆಗೆ ಹಂದಿಗಳ ಹಿಂಡು 
Last Updated 17 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಹಾವೇರಿ:ಹಿಂಡು ಹಿಂಡಾಗಿ ರಸ್ತೆಗೆ ನುಗ್ಗುವ ಹಂದಿಗಳು. ಮರಿಗಳನ್ನು ಹಿಡಿಯಲು ಬೆನ್ನಟ್ಟುವ ಬೀದಿ ನಾಯಿಗಳು. ಅವುಗಳ ಚೀರಾಟ, ಕಾಳಗದ ಕೂಗಿಗೆ ಭಯ ಬಿದ್ದು ಓಡುವ ನಾಗರಿಕರು. ವೃದ್ಧಾಶ್ರಮದ ಪಕ್ಕದಲ್ಲೇ ಹಂದಿ ಸಾಕಣಿಕೆಯ ಶೆಡ್‌. ನಾಗೇಂದ್ರನಮಟ್ಟಿಯ ಬಹುತೇಕ ಕಡೆ ಮನೆಗಳಲ್ಲೇ ಹಂದಿಗಳ ಆರೈಕೆ...

ಏಲಕ್ಕಿ ಕಂಪಿನ ನಗರಿ ಖ್ಯಾತಿಯ ಹಾವೇರಿಯಲ್ಲಿ ಹಂದಿ ಮಾಫಿಯಾ ದಶಕದಿಂದಲೂ ಎಗ್ಗಿಲ್ಲದೆ ನಡೆಯುತ್ತಿದೆ.ಈ ಶಹರದ 76 ಸಾವಿರ ಜನರಿದ್ದರೆ, ಹಂದಿಗಳ ಸಂಖ್ಯೆ ಬರೋಬ್ಬರಿ 1,300 ದಾಟಿದೆ! ನಗರಸಭೆ ಆಗಾಗ್ಗೆ ಕಾರ್ಯಾಚರಣೆ ನಡೆಸಿ ಊರಾಚೆ ಸ್ಥಳಾಂತರಿಸುತ್ತಿದ್ದರೂ,ರಾತ್ರೋರಾತ್ರಿ ಪುನಃ ಲೋಡ್‌ಗಟ್ಟಲೇ ಹಂದಿಗಳನ್ನು ರಸ್ತೆಗೆ ಬಿಡಲಾಗುತ್ತಿದೆ. ಅವು ಮಾಡುತ್ತಿರುವ ಕಿರಿಕಿರಿ ನಾಗಕರಿಕರನ್ನು ಕಂಗಾಲಾಗುವಂತೆ ಮಾಡಿದೆ.

ವಾರದ ಹಿಂದೆ ಹಿರೇಬೆಂಡಿಗೇರಿ ಗ್ರಾಮದಲ್ಲಿ ಮನೆ ಹಿತ್ತಲಲ್ಲಿ ಆಟವಾಡುತ್ತಿದ್ದ 4 ವರ್ಷದ ಆಲ್ಫಿಯಾ ಶಾವಲಿ ಅಹಮದ್ ಎಂಬ ಮಗುವನ್ನು ಹಂದಿ ಕಡಿದು ಗಂಭೀರ ಗಾಯಗೊಳಿಸಿದೆ. ಪಿ.ಬಿ.ರಸ್ತೆಯಲ್ಲಿ ಹಂದಿಗಳು ಅಡ್ಡಬಂದಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದ್ದರೂ, ನಗರಸಭೆಯು ಕಾರ್ಯಚರಣೆಗೆ ಕ್ರಮ ಕೈಗೊಳ್ಳದೇ ಹಂದಿಗಳ ಮಾಲೀಕರ ಮಾತುಗಳನ್ನೇ ಕೇಳುತ್ತ ಕೂತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಆರು ತಿಂಗಳ ಹಿಂದೆ ಬೆಂಗಳೂರಿನಿಂದ ಹಂದಿ ಹಿಡಿಯುವ ತಂಡವನ್ನು ಕರೆಸಿ 250ಕ್ಕೂ ಹೆಚ್ಚು ಹಂದಿಗಳನ್ನು ಹಿಡಿಸಿದ್ದೆವು. ಅದಾದ ನಂತರ ಆಯುಕ್ತರು ಹಂದಿ ಸಾಕುವ ಜನಾಂಗದರ ಜತೆ ಸಭೆಯನ್ನೂ ನಡೆಸಿ ಎಚ್ಚರಿಕೆ ಕೊಟ್ಟಿದ್ದರು. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ಸಾವಿರಾರು ಹಂದಿಗಳು ಬೀದಿ ಬೀದಿಗಳಲ್ಲಿ ತಿರುಗುತ್ತಿವೆ’ ಎನ್ನುತ್ತಾರೆ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಪರಿಮಳಾ.

ಅಧ್ಯಕ್ಷರ ಮೇಲೆ ಹಲ್ಲೆ

‘ಹಾವೇರಿಯನ್ನು ಹಂದಿ ಮುಕ್ತ ನಗರ ಮಾಡಲು 2002ರಲ್ಲೇ ಠರಾವು ಪಾಸು ಮಾಡಲಾಗಿತ್ತು. ಆದರೆ, ಕಾರ್ಯರೂಪಕ್ಕೆ ಬಾರದೆ ಅದು ಹೆಸರಿಗೆ ಮಾತ್ರ ಸೀಮಿತವಾಗಿತ್ತು. 2016ರಲ್ಲಿ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ್ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ಹಂದಿ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಆಗ ಹಂದಿ ಮಾಲೀಕರು ಅವರ ಮೇಲೇ ದಾಳಿ ಮಾಡುವ ಮೂಲಕ ಇಡೀ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿದರು’ ಎಂದು ನಗರಸಭೆ ಸದಸ್ಯರೊಬ್ಬರು ಹೇಳುತ್ತಾರೆ.

‘ನಾಲ್ಕು ತಿಂಗಳು ಗೋಪ್ಯ ಕಾರ್ಯಾಚರಣೆ ನಡೆಸಿ ನೂರಾರು ಹಂದಿಗಳನ್ನು ಹಿಡಿಯಲಾಗಿತ್ತು. ಒಂದು ದಿನ ಬೆಳಿಗ್ಗೆ ಎಂ.ಜಿ.ರಸ್ತೆಯಲ್ಲಿ ಹಂದಿಗಳನ್ನು ಹಿಡಿಯುತ್ತಿದ್ದಾಗ ಮಹಿಳೆಯರು ಹಾಗೂ ಯುವಕರ 20ಕ್ಕೂ ಹೆಚ್ಚು ಮಂದಿಯ ಗುಂಪು ಬಡಿಗೆಗಳನ್ನು ತಂದು ಮನಸೋಇಚ್ಛೆ ಹಲ್ಲೆ ನಡೆಸಿತು. ಘಟನೆಯಲ್ಲಿ ಅಧ್ಯಕ್ಷರು ಹಾಗೂ ತಮಿಳುನಾಡಿನಿಂದ ಹಂದಿ ಹಿಡಿಯಲು ಬಂದಿದ್ದ ನಾಲ್ವರು ಗಾಯಗೊಂಡರು. ಆ ಕರಾಳ ದಿನವನ್ನು ನೆನೆದು ನಗರಸಭೆ ಅಧಿಕಾರಿಗಳು ಈಗಲೂ ಕಾರ್ಯಾಚರಣೆ ನಡೆಸಲು ಅಂಜುತ್ತಿದ್ದಾರೆ’ ಎನ್ನುತ್ತಾರೆ ಅವರು.

ಲಾಭ ಬೇಕು, ಕಷ್ಟ ಬೇಡ:

‘ನಗರದಲ್ಲಿ ಹಾಸ್ಟೆಲ್ ಹಾಗೂ ಹೋಟೆಲ್‌ಗಳಲ್ಲಿ ಉಳಿಯುವ ಆಹಾರವನ್ನು ನಿಮಗೇ ಕೊಡಿಸುವಂತೆ ವ್ಯವಸ್ಥೆ ಮಾಡಿಸುತ್ತೇನೆ. ಶೆಡ್‌ಗಳಲ್ಲೇ ಹಂದಿಗಳನ್ನು ಸಾಕಿ. ಊರಿಗೆ ಬಿಡಬೇಡಿ’ ಎಂದು ನಗರಸಭೆ ಆಯುಕ್ತರು ಹಂದಿಗಳ ಮಾಲೀಕರಿಗೆ ಸಭೆಯಲ್ಲಿ ಮನವಿ ಮಾಡಿದ್ದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಲೀಕರು, ‘ಶೆಡ್‌ಗಳಲ್ಲಿ ಸಾಕುವುದು ಕಷ್ಟ. ಅಲ್ಲಿನ ವಾತಾವರಣಕ್ಕೆ ಅವು ಹೊಂದಿಕೊಳ್ಳುತ್ತಿಲ್ಲ. ಶೆಡ್‌ನಲ್ಲಿ ಒಂದು ಸತ್ತರೂ ಉಳಿದ ಹಂದಿಗಳ ಬೆಳವಣಿಗೆಗೆ ತೊಂದರೆ ಆಗುತ್ತದೆ’ ಎಂದು ಸಬೂಬು ಹೇಳಿ ರಸ್ತೆಗೇ ಬಿಡಲಾರಂಭಿಸಿದರು. ಲಾಭ ಎಲ್ಲರಿಗೂ ಬೇಕು. ಆದರೆ, ಕಷ್ಟ ಮಾತ್ರ ಯಾರಿಗೂ ಬೇಡ ಎಂದರೆ ಹೇಗೆ ಎಂದು ನಗರಸಭೆ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಎಲ್ಲೆಲ್ಲಿ ಹಾವಳಿ?

ನಗರದೆಲ್ಲೆಡೆ ಸಂಚರಿಸುತ್ತಿರುವ ಹಂದಿಗಳ ಮೂಲ ವಾಸಸ್ಥಾನ ನಾಗೇಂದ್ರನಮಟ್ಟಿ. ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ, ಮಟನ್ ಮಾರ್ಕೆಟ್‌, ಸುಭಾಷ್ ವೃತ್ತ, ಶಿವಬಸವೇಶ್ವರ ನಗರ, ಮುಲ್ಲಾನಕೆರೆ, ಬಸವೇಶ್ವರ ನಗರ, ಸೂಲಮಟ್ಟಿ, ಶಿವಾಜಿನಗರ, ಅಶ್ವಿನಿ ನಗರ, ಅಕ್ಕಮಹಾದೇವಿ ಹೊಂಡ, ಇಜಾರಿ ಲಕ್ಮಾಪುರದಲ್ಲಿ ಅವುಗಳ ಹಾವಳಿ ವಿಪರೀತವಾಗಿದೆ.

‘ನಗರದ ಹೊರವಲಯಲದಲ್ಲಿ ನಗರಸಭೆ ವತಿಯಿಂದ ಹಂದಿ ಸಾಕಾಣಿಕೆ ಶೆಡ್ ನಿರ್ಮಿಸಲಾಗುತ್ತಿದೆ. ನಿರ್ಮಾಣ ಪೂರ್ಣಗೊಂಡ ಬಳಿಕ ಎಲ್ಲರೂ ಅಲ್ಲೇ ಸಾಕಣೆ ಮಾಡಬೇಕು. ಆ ನಂತರವೂ ಊರೊಳಗೆ ಬಿಟ್ಟರೆ, ಆದೇಶ ಉಲ್ಲಂಘಿಸಿದ ಆರೋಪದಡಿ ಹಂದಿ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಬಹುದು’ ಎಂದೂ ಅಧಿಕಾರಿಗಳು ಹೇಳಿದರು.

ಜನ ತಮ್ಮ ಮನೆಗಳ ಪಕ್ಕದ ಖಾಲಿ ನಿವೇಶನಗಳನ್ನೇ ಕಸದ ತೊಟ್ಟಿ ಮಾಡಿಕೊಂಡಿದ್ದಾರೆ. ಉಳಿದ ಆಹಾರವನ್ನು ಅಲ್ಲೇ ಬಿಸಾಡಿ ಹಂದಿ–ನಾಯಿಗಳನ್ನು ಅತಿಥಿಗಳಂತೆ ಆಹ್ವಾನಿಸುತ್ತಿದ್ದಾರೆ. ಕ್ರಮೇಣ ಆ ಪ್ರದೇಶಗಳೇ ಅವುಗಳ ಆವಾಸ ಸ್ಥಾನವಾಗಿಬಿಡುತ್ತಿವೆ. ಮಿಕ್ಕ ಆಹಾರವನ್ನೂ ಕಸದ ವಾಹನಕ್ಕೆ ಹಾಕುವಂತೆ ಎಷ್ಟೆಲ್ಲ ಜಾಗೃತಿ ಮೂಡಿಸಿದರೂ, ಜನ ಬುದ್ಧಿ ಕಲಿಯುತ್ತಿಲ್ಲ ಎಂಬುದೂ ಅಧಿಕಾರಿಗಳ ಅಸಹಾಯಕತೆಯ ಮಾತು.

ಸದ್ಯದಲ್ಲೇ ಕಾರ್ಯಾಚರಣೆ

ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆಗೆ ಸಮಯ ನಿಗದಿ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ವಿಪರೀತ ಮಳೆ ಹಾಗೂ ನೆರೆ ಆವರಿಸಿದ್ದರಿಂದ ರಸ್ತೆ ಹಾಗೂ ಚರಂಡಿ ದುರಸ್ತಿ ಕಾರ್ಯಗಳಲ್ಲಿ ನಿರತರಾಗಬೇಕಾಯಿತು. ಈಗ ಹಂದಿಗಳ ಮಾಲೀಕರಿಗೆಲ್ಲ ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿದ್ದೇವೆ. ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ಶುರುವಾಗಲಿದೆ.

–ಬಸವರಾಜ್ ಜಿದ್ದಿ,‌

ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT