ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಹಾವೇರಿ ಪೊಲೀಸ್‌ ಸಿಬ್ಬಂದಿಗೆ ಮಾಸ್ಕ್‌, ಮಜ್ಜಿಗೆ ವಿತರಣೆ

ದಣಿದ ಜೀವಗಳಿಗೆ ಮಿಡಿದ ಹೃದಯ
Last Updated 1 ಏಪ್ರಿಲ್ 2020, 12:50 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಬೆಳಿಗ್ಗೆಯಿಂದ ರಾತ್ರಿವರೆಗೆ ಬಿಸಿಲಿನಲ್ಲೇ ನಿಂತು ಕೆಲಸ ಮಾಡುವ ಪೊಲೀಸ್‌ ಮತ್ತು ಹೋಂ ಗಾರ್ಡ್ಸ್‌ ಸಿಬ್ಬಂದಿಗೆ ಉಚಿತವಾಗಿ ತಂಪು ಪಾನೀಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ನಗರದ ಚಂದ್ರಪ್ಪ ಕಮ್ಮಾರ ಮತ್ತು ದಾದಾ ಕಲಂದರ್‌ ಹಬ್ಬುಸಾಬನವರ್.

ಭಾರತ್‌ ವೆಲ್ಡಿಂಗ್‌ ವರ್ಕ್ಸ್‌ ಎಂಬ ಪುಟ್ಟ ಮಳಿಗೆಯ ಮಾಲೀಕರಾದ ಚಂದ್ರಪ್ಪ ಮತ್ತು ಬಾಬುಸಾಬ್‌ ಟೀ ಅಂಗಡಿಯನ್ನು ಇಟ್ಟುಕೊಂಡಿರುವ ದಾದಾ ಅವರು ಶ್ರಮಜೀವಿಗಳು. ಅನೇಕ ಕಷ್ಟ ಕಾರ್ಪಣ್ಯಗಳ ನಡುವೆಯೇ ಜೀವನ ನಡೆಸುತ್ತಿದ್ದರೂ, ಮತ್ತೊಬ್ಬರ ಕಷ್ಟಕ್ಕೆ ಮಿಡಿಯುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ಜನರ ಸೇವೆ ಮಾಡುವ ಪೊಲೀಸರಿಗೆ, ಇಂಥ ಸಂಕಷ್ಟದ ಸಮಯದಲ್ಲಿ ಏನಾದರೂ ಸಹಾಯ ಮಾಡಬೇಕು ಎಂಬ ಮನೋಭಾವದಿಂದ ನಿತ್ಯ ಮಜ್ಜಿಗೆ, ನಿಂಬೆ ಶರಬತ್ತು, ಮಾವಿನ ಶರಬತ್ತು ಸೇರಿದಂತೆ ಇತರೆ ತಂಪು ಪಾನೀಯಗಳನ್ನು ಕಳೆದ 8 ದಿನಗಳಿಂದ ಕೊಡುತ್ತಿದ್ದೇವೆ. ನಿತ್ಯ 150 ಸಿಬ್ಬಂದಿಗೆ 30 ಲೀಟರ್‌ ತಂಪು ಪಾನೀಯವನ್ನು ಕೊಡುತ್ತಿದ್ದೇವೆ’ ಎಂದು ಚಂದ್ರಪ್ಪ ಕಮ್ಮಾರ ಹೇಳಿದರು.

‘ಮಳೆಗಾಲದಲ್ಲಿ ಮರಬಿದ್ದು, ಮನೆ ಗೋಡೆ ಕುಸಿದು ಬಿದ್ದಿತ್ತು. ತಹಶೀಲ್ದಾರ್‌ ಅವರು ನಮ್ಮ ಅಕೌಂಟ್‌ಗೆ ₹30 ಸಾವಿರ ಪರಿಹಾರಧನ ಹಾಕಿದ್ದರು. ಅಷ್ಟು ಕಡಿಮೆ ಹಣದಲ್ಲಿ ಮನೆ ದುರಸ್ತಿ ಕಾರ್ಯ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಶಿಥಿಲ ಮನೆಯಲ್ಲೇ ಇಂದಿಗೂ ಜೀವನ ನಡೆಸುತ್ತಿದ್ದೇವೆ. ಆದರೆ, ₹ 30 ಸಾವಿರ ಹಣವನ್ನು ಸಮಾಜ ಸೇವೆಗೆ ಬಳಸಬೇಕು ಎಂಬ ಉದ್ದೇಶ ಹೊಂದಿದ್ದೇನೆ. ಅದೇ ಹಣದಲ್ಲಿ ನಿತ್ಯ ಪೊಲೀಸ್‌ ಸಿಬ್ಬಂದಿಗೆ ಉಚಿತವಾಗಿ ತಂಪು ಪಾನೀಯ ನೀಡುತ್ತಿದ್ದೇನೆ’ ಎಂದರು ಚಂದ್ರಪ್ಪ.

ಒಂದು ಸಾವಿರ ಮಾಸ್ಕ್ ವಿತರಣೆ

ಕೊರೊನಾ ಸೋಂಕು ತಡೆಗಟ್ಟಲು ನಿತ್ಯ ಬಿಸಿಲು ಮತ್ತು ದೂಳಿನಲ್ಲಿ ನಿಂತು ಪೊಲೀಸ್‌ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ತಮ್ಮ ಕುಟುಂಬದ ರಕ್ಷಣೆಗಾಗಿ ಸಮಾಜದ ರಕ್ಷಣೆಗಾಗಿ ಮಿಡಿಯುವ ಪೊಲೀಸ್ ಸಿಬ್ಬಂದಿಯಆರೋಗ್ಯದ ದೃಷ್ಟಿಯಿಂದ ಹಾವೇರಿ ರೋಟರಿ ಕ್ಲಬ್‌ ವತಿಯಿಂದ ಒಂದು ಸಾವಿರ ಮಾಸ್ಕ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಅವರಿಗೆ ನೀಡಿದ್ದೇವೆ ಎಂದು ರೋಟರಿ ಕ್ಲಬ್‌ ಸದಸ್ಯ ಡಾ.ರವಿ ಹಿಂಚಿಗೇರಿ ತಿಳಿಸಿದರು.

ಹಾವೇರಿ ರೋಟರಿ ಕ್ಲಬ್‌ ಅಧ್ಯಕ್ಷ ಡಾ.ಶ್ರವಣ ಪಂಡಿತ್, ಕಾರ್ಯದರ್ಶಿ ಸುಜಿತ್‌ ಜೈನ್‌, ಸೋಮನಗೌಡ ಪಾಟೀಲ, ಆನಂದ ನೇರಲಗಿ, ಮಲ್ಲಿಕಾರ್ಜುನ ಕೋಟೂರ, ಮಹದೇವ ಪಾಟೀಲ, ಡಾ.ಜಿ.ಎಸ್‌. ಗೊಟ್ಟೆಮ್ಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT