ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗ್ಗೇರಿ ಕೆರೆಗೆ ಕೋಡಿ; ಡಿಎಆರ್ ಸಮುಚ್ಚಯ ರಾಡಿ

ನಡುಗಡ್ಡೆಯಾದ 14 ಕಟ್ಟಡಗಳು, ಪ್ಯಾಂಟ್ ಕಳಚಿ ಕಚೇರಿಗೆ ಹೋಗುವ ದುಃಸ್ಥಿತಿ
Last Updated 14 ಅಕ್ಟೋಬರ್ 2019, 9:15 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯದ 2ನೇ ಅತಿ ದೊಡ್ಡ ಕೆರೆ ಎಂಬ ಗರಿಮೆ ಹೆಗ್ಗೇರಿ ಕೆರೆಯದ್ದು. ವ್ಯವಸ್ಥಿತ ಮಾಸ್ಟರ್‌ ಪ್ಲಾನ್ ಇಲ್ಲದೆ ಅದರ ತೀರದಲ್ಲೇ ಡಿಎಆರ್ ಕಚೇರಿ ಹಾಗೂ 14 ವಸತಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ದಶಕದ ನಂತರ ಇದೀಗ ಆ ಕೆರೆಗೆ ಕೋಡಿ ಬಿದ್ದಿದ್ದು, ನೀರು ಸಮುಚ್ಚಯದ ಆವರಣಕ್ಕೆ ನುಗ್ಗಿದೆ. ಇಡೀ ಜಿಲ್ಲೆಗೇ ಭದ್ರತೆ ಕೊಡುವ ಪೊಲೀಸರೇ, ನೀರಿಗೆ ಅಂಜಿ ಸಮುಚ್ಚಯ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾವೇರಿ ನಗರದಿಂದ 7 ಕಿ.ಮೀ ದೂರದಲ್ಲಿರುವ ಕೆರೆಮತ್ತಿಹಳ್ಳಿಯಲ್ಲಿಜಿಲ್ಲಾ ಸಶಸ್ತ್ರ ಪಡೆ (ಡಿಎಆರ್) ಸಿಬ್ಬಂದಿಗೆ 2004ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಅಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ, 14 ವಸತಿ ಕಟ್ಟಡಗಳೂ ನಡುಗಡ್ಡೆ ಯಂತಾಗಿವೆ.ಸಮುಚ್ಚಯದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಸದ್ಯ 150 ಪೊಲೀಸ್ ಕುಟುಂಬಗಳು ನೆಲೆಸಿವೆ.

ಒಂದೂವರೆ ದಶಕದಿಂದ ಅದೇ ಪ್ರದೇಶದಲ್ಲಿದ್ದ ಡಿಎಆರ್ ಕಚೇರಿಯನ್ನು 2 ತಿಂಗಳ ಹಿಂದಷ್ಟೇ ನಗರದ ಹೃದಯ ಭಾಗದಲ್ಲಿರುವ ನಗರಸಭೆ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆದರೆ,ಶಸ್ತ್ರಾಸ್ತ್ರಗಳು, ಕಡತಗಳು ಇನ್ನೂ ಹಳೆ ಕಚೇರಿಯಲ್ಲೇ ಇರುವುದರಿಂದ, ಐವರು ಹವಾಲ್ದಾರರನ್ನು ಅಲ್ಲಿ ಕಾವಲು ಕೆಲಸಕ್ಕೆ ನಿಯೋಜಿಸಲಾಗಿದೆ.

ತಲೆ ಮೇಲೆ ಪ್ಯಾಂಟ್: ‘ಸೊಂಟದ ಮಟ್ಟಕ್ಕೆ ನೀರು ನಿಂತಿದೆ. ಹೀಗಾಗಿ ದೂರದಲ್ಲೇ ವಾಹನ ನಿಲ್ಲಿಸಿ, ಪ್ಯಾಂಟ್ ತೆಗೆದು ತಲೆ ಮೇಲೆ ಇಟ್ಟುಕೊಂಡು ನೀರಿನಲ್ಲಿ ಹೋಗುತ್ತಿದ್ದೇವೆ. ಕಚೇರಿ ತಲುಪಿದ ಬಳಿಕ ಪ್ಯಾಂಟ್ ಹಾಕಿಕೊಳ್ಳುತ್ತೇವೆ. ನಮ್ಮ ಪಾಡನ್ನು ಹೇಳಿಕೊಳ್ಳುವುದಕ್ಕೂ ಬೇಸರವಾಗುತ್ತದೆ. ಟ್ರಾನ್ಸ್‌ಫಾರ್ಮರ್‌ಗಳೂ ಮುಳುಗಿರುವ ಕಾರಣ ಕಚೇರಿಗೆ ವಿದ್ಯುತ್ ಸಂಪರ್ಕವೂ ಇಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಹವಾಲ್ದಾರ್‌ ಒಬ್ಬರು ನೋವು ತೋಡಿಕೊಂಡರು.

‘ಇಲ್ಲಿನ ಮಕ್ಕಳೆಲ್ಲ ನಗರದ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ತಿರುವಿನಿಂದ ಕೂಡಿದ ಕಿರಿದಾದದ ರಸ್ತೆ ಇರುವ ಕಾರಣ ವಸತಿ ಸಮುಚ್ಚಯಕ್ಕೆ ಆಟೊಗಳೂ ಬಾಡಿಗೆ ಬರುವುದಿಲ್ಲ. ನಿತ್ಯ ನಾವೇ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದೊಯ್ದು ಶಾಲೆಗೆ ಬಿಡಬೇಕು. ಸಂಜೆ ಮತ್ತೆ ವಾಪಸ್ ಕರೆದುಕೊಂಡು ಬರಬೇಕು. ಈಗ ಪ್ರತಿದಿನ ಸಂಜೆ ಹೊತ್ತಿನಲ್ಲೇ ಮಳೆ ಸುರಿಯುತ್ತಿರುವುದರಿಂದ ನಮ್ಮ ಸಮಸ್ಯೆ ಹೇಳತೀರದಂತಾಗಿದೆ’ ಎಂದು ಪರಿಸ್ಥಿತಿಯನ್ನು ಬಿಚ್ಚಿಟ್ಟರು.

50 ಮನೆಗಳು ಖಾಲಿ: ಗಂಗಾ, ತುಂಗಾ, ಕಾವೇರಿ, ವರದಾ, ಧರ್ಮಾ, ಕುಮಧ್ವತಿ, ವರದಾ, ಘಟಪ್ರಭಾ, ಮಲಪ್ರಭಾ... ಹೀಗೆ, 14 ಕಟ್ಟಡಗಳಿಗೂ ಒಂದೊಂದು ನದಿಯ ಹೆಸರುಗಳನ್ನು ಇಡಲಾಗಿದೆ. ಆದರೆ, ಇಲ್ಲಿರುವ 700ಕ್ಕೂ ಹೆಚ್ಚು ವಾಸಿಗಳು, ಆ ನದಿಗಳಷ್ಟು ಪ್ರಶಾಂತವಾಗಿ ಜೀವಿಸುತ್ತಿಲ್ಲ.ಹಾವು, ಚೇಳು, ಹುಳು, ವಿಷಜಂತುಗಳ ಭಯದಲ್ಲೇ ಪ್ರತಿ ಕ್ಷಣವನ್ನು ಕಳೆಯುತ್ತಿದ್ದಾರೆ. ಮನೆಯೊಳಗೆ ನುಗ್ಗುತ್ತಿರುವ ಒಳಚರಂಡಿ ನೀರಿನಿಂದ ಕಂಗಾಲಾಗಿದ್ದಾರೆ. ಮಳೆಗಾಲ ಬಂತೆಂದರೆ ಮಕ್ಕಳು ಸಂಬಂಧಿಕರ ಮನೆಗಳಲ್ಲಿ ಉಳಿಯುವಂತಾಗಿದೆ.

‘ಆಗಸ್ಟ್ ತಿಂಗಳಲ್ಲಿ ಮಳೆ ಸುರಿದಾಗಲೂ ಇದೇ ಪರಿಸ್ಥಿತಿ ಇತ್ತು. ಆಗ ಸುಮಾರು 50 ಕುಟುಂಬಗಳು ಸಮುಚ್ಚಯ ತೊರೆದವು. ಅವರಲ್ಲಿ ಕೆಲವರು ನಗರದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರೆ, ಇನ್ನೂ ಕೆಲವರು ತಮ್ಮ ಊರುಗಳಿಂದಲೇ ಕಚೇರಿಗೆ ಓಡಾಡುತ್ತಿದ್ದಾರೆ. ಮಕ್ಕಳ ಶಿಕ್ಷಣ ಪ್ರಗತಿಗೂ ದೊಡ್ಡ ಪೆಟ್ಟು ಬಿದ್ದಿದೆ’ ಎಂದು ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ನಾವು ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ‘ಶಿಸ್ತಿನ ಇಲಾಖೆ’ ಎಂಬ ಬಿರುದು ಅಡ್ಡಬರುತ್ತದೆ. ಹಾಗಂತ ಯಾರಿಗೂ ಹೇಳಿಕೊಳ್ಳದೆ ಇಷ್ಟೊಂದು ನೋವುಗಳನ್ನು ಅನುಭವಿಸುವುದು ಹೇಗೆ? ಇಲ್ಲಿ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ, ವಸತಿ ಸಮುಚ್ಚಯವನ್ನು ಸ್ಥಳಾಂತರ ಮಾಡುವ ಬದಲು ಕಳೆದ ವರ್ಷ ಮತ್ತೆ ಇದೇ ಸ್ಥಳದಲ್ಲಿ ಮತ್ತೊಂದು ಹೊಸ ಸಮುಚ್ಚಯ ನಿರ್ಮಿಸಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

‘ಇಲ್ಲಿನ ಮನೆಗಳಿಂದ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಲು ಪೌರಕಾರ್ಮಿಕರು ಬರುವುದಿಲ್ಲ. ಹೀಗಾಗಿ, ವರ್ಷವಿಡೀ ಕಟ್ಟಡಗಳ ಪಕ್ಕದಲ್ಲೇ ಕಸದ ರಾಶಿ ಬಿದ್ದಿರುತ್ತದೆ. ಈಗ ಆ ಕಸವೆಲ್ಲ ನೀರಿನೊಂದಿಗೆ ಕೆರೆ ಸೇರುತ್ತಿದೆ. ಅದೇ ನೀರನ್ನು ಮತ್ತೆ ನಾವೇ ಬಳಸುತ್ತಿದ್ದೇವೆ. ಬೋರ್‌ವೆಲ್‌ಗಳೂ ಮುಳುಗಿದ್ದು, ನೀರಿನ ಸಮಸ್ಯೆಯೂ ಶುರುವಾಗಿದೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಸಾರ್ವಜನಿಕರಿಗೂ ವನವಾಸ: ಧಾರವಾಡ ಜಿಲ್ಲೆಯ ಉಪವಿಭಾಗವಾಗಿದ್ದ ಹಾವೇರಿ, 1997ರ ಆಗಸ್ಟ್ 24ರಂದು ಪ್ರತ್ಯೇಕ ಜಿಲ್ಲೆಯಾಯಿತು. ಆಗ ನಗರದ ಮುನ್ಸಿಪಲ್ ಹೈಸ್ಕೂಲ್ ಆವರಣ ದಲ್ಲಿ ಜಿಲ್ಲಾಧಿಕಾರಿ (ಡಿ.ಸಿ) ಮತ್ತು ಎಸ್ಪಿ ಕಚೇರಿಗಳನ್ನು ಪ್ರಾರಂಭಿಸಲಾಗಿತ್ತು. ಜನಸ್ಪಂದನೆ, ಆಡಳಿತ, ಅಭಿವೃದ್ಧಿಗೂ ಆ ಪ್ರದೇಶ ಪೂರಕವಾಗಿತ್ತು.ಆದರೆ, 2004ರಲ್ಲಿ ಎಸ್ಪಿ ಕಚೇರಿಯನ್ನುಕೆರೆ ಮತ್ತಿಹಳ್ಳಿಯ ‘ಪೊಲೀಸ್ ಭವನ’ಕ್ಕೆ ಸ್ಥಳಾಂತರಿಸಲಾಯಿತು.

ಇದರಿಂದ ನಗರದ ಜನ ದೂರು ಕೊಡಲು ದೂರದ ಊರಿಗೆ ಕ್ರಮಿಸಬೇಕಿತ್ತು. ಅಲ್ಲಿಗೆ ಬಸ್ ಸಂಪರ್ಕವೂ ಇಲ್ಲದ ಕಾರಣ ಸಾರ್ವಜನಿಕರು 14 ವರ್ಷಗಳ ವನವಾಸ ಅನುಭವಿಸಿದರು. ಕೊನೆಗೂ ವರ್ಷದ ಹಿಂದೆ ಎಸ್ಪಿ ಕಚೇರಿಯನ್ನು ನಗರ ಪ್ರದೇಶಕ್ಕೆ ಸ್ಥಳಾಂತರಿಸಿ, ಕೆರೆಮತ್ತಿಹಳ್ಳಿಯ ಹಳೇ ಕಚೇರಿಯನ್ನು ಪೊಲೀಸ್ ತರಬೇತಿ ಕೇಂದ್ರವನ್ನಾಗಿ ಮಾಡಲಾಯಿತು.

‘ನಾವೂ ಗುಡ್ಡ ಹಿಡಿಯಬೇಕಿತ್ತು’ ‘ಎಲ್ಲ ಇಲಾಖೆಗಳು ತಮ್ಮಿಷ್ಟದಂತೆ ಸೌಲಭ್ಯಗಳನ್ನು ಪಡೆದ ಬಳಿಕ,
ಕೊನೆಯ ಆಯ್ಕೆ ಪೊಲೀಸರಿಗೆ ಬಿಡುತ್ತವೆ. ಮೊದಲಿನಿಂದಲೂ ಇದೇ ತಾರತಮ್ಯ ನಡೆದುಕೊಂಡು ಬಂದಿದೆ. ಜಿಲ್ಲಾಧಿಕಾರಿ ಕಚೇರಿಯನ್ನು ಗುಡ್ಡದ ಪ್ರದೇಶದಲ್ಲಿ ನಿರ್ಮಿಸಿದ ಸರ್ಕಾರ, ಹಲವು ಆಕ್ಷೇಪಗಳ ನಡುವೆಯೂ ಪೊಲೀಸ್ ಕಚೇರಿಗಳನ್ನು ಕೆರೆ ಅಂಗಳದಲ್ಲಿ ಕಟ್ಟಿಸಿತು. ನಾವೂ ಆಗಲೇ ಗುಡ್ಡ ಹಿಡಿಯಬೇಕಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

ಮನೆ ಬಾಡಿಗೆ ಭತ್ಯೆ ಸಿಗುತ್ತೆ

ಪ್ರತಿ ಸಲ ಮಳೆ ಬಂದಾಗಲೂ ಸಿಬ್ಬಂದಿ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂದು ಶೈಕ್ಷಣಿಕ ವರ್ಷ ಮುಗಿಯಲೆಂದು ಅವರು ಕಾಯುತ್ತಿದ್ದಾರೆ. ಆ ನಂತರ ಪರ್ಯಾಯ ವ್ಯವಸ್ಥೆಗಳನ್ನು ಅವರೇ ಕಲ್ಪಿಸಿಕೊಳ್ಳಲಿದ್ದಾರೆ. ಮನೆ ಬಾಡಿಗೆ ಭತ್ಯೆಯೂ ಆ ಸಿಬ್ಬಂದಿಗೆ ಸಿಗಲಿದೆ ಎನ್ನುತ್ತಾರೆ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು.

ಹಾಲಿನ ಪ್ಯಾಕೆಟ್‌ ಸಹ ಸಿಗಲ್ಲ

ಅಲೆಮಾರಿಗಳು, ವಲಸಿಗರು ಊರ ಹೊರಗೆ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ವಾಸಿಸುತ್ತಾರೆ. ಅವರಿಗೂ ನಮಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಒಂದು ಹಾಲಿನ ಪ್ಯಾಕೇಟ್ ಸಹ ಸಿಗದ ಪ್ರದೇಶದಲ್ಲಿದ್ದೇವೆ. ಸಣ್ಣ ವಸ್ತು ಬೇಕೆಂದರೂ ಹಾವೇರಿ ನಗರಕ್ಕೆ ಹೋಗಿ ಬರಬೇಕು. ಮಳೆಗಾಲದಲ್ಲಂತೂ ಹೊರಗೆ ಕಾಲಿಡುವುದಕ್ಕೂ ಆಗದಷ್ಟು ನೀರು ನಿಂತಿರುತ್ತದೆ ಎಂದು ಡಿಎಆರ್ ಹೆಡ್‌ ಕಾನ್‌ಸ್ಟೆಬಲ್ ಒಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT