ಬ್ಯಾಡಗಿ: ತಾಲ್ಲೂಕಿನ ಸುಕ್ಷೇತ್ರ ಕದರಮಂಡಲಗಿ ಗ್ರಾಮವನ್ನು ಕರ್ನಾಟಕ ತಿರುಪತಿ ಎಂದು ಕರೆಯಲಾಗುತ್ತದೆ. ಭಕ್ತ ಕನಕದಾಸರು ಇಲ್ಲಿಯ ಕಾಂತೇಶ ಸ್ವಾಮಿಯ ದರ್ಶನ ಪಡೆದು ತಿರುಪತಿಗೆ ಹೋದಾಗ ತಿರುಪತಿ ತಿಮ್ಮಪ್ಪನ ದರ್ಶನವಾಯಿತಂತೆ.
ಇಂತಹ ಪುಣ್ಯ ಕ್ಷೇತ್ರದಲ್ಲಿ ನೆಲೆಯೂರಿರುವ ಆಂಜನೇಯ ಸ್ವಾಮಿಯ ದರ್ಶನಕ್ಕೆ ಅಧಿಕ ಮಾಸ ಮತ್ತು ಶ್ರಾವಣ ಮಾಸದಲ್ಲಿ ಲಕ್ಷಾಂತರ ಭಕ್ತರು ಬರುತ್ತಾರೆ. ಆದರೆ ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ತಗ್ಗು ಬಿದ್ದಿದ್ದು ಅವುಗಳ ಸುಧಾರಣೆ ಇನ್ನೂ ಸಾಧ್ಯವಾಗಿಲ್ಲ.
‘ಲೋಕೋಪಯೋಗಿ ಇಲಾಖೆ ಸುಮಾರು ₹ 14 ಕೋಟಿ ಅನುದಾನದಲ್ಲಿ 14 ಕಿ.ಮೀ ರಸ್ತೆ ನಿರ್ಮಿಸಿದ್ದು ಕದರಮಂಡಲಗಿ ಗ್ರಾಮವನ್ನು ಕೂಡುವ ಎರಡು ಕಿ.ಮೀ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಅಲ್ಲಲ್ಲಿ ತಗ್ಗುಗಳಿಂದ ಕೂಡಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ವ್ಯತ್ಯಯವಾಗಿದೆ’ ಎನ್ನುತ್ತಾರೆ ಗ್ರಾಮದ ಶಿವರಾಜ ಉಜನಿ.
‘ಈ ಕುರಿತು ಹಲವಾರು ಬಾರಿ ಲೋಕೋಪಯೋಗಿ ಇಲಾಖೆಯನ್ನು ಸಂಪರ್ಕಿಸಿದರೆ ಸೆಕ್ಷನ್ ಎಂಜಿನಿಯರ್ ಹಾರಿಕೆಯ ಉತ್ತರ ನೀಡುತ್ತಾರೆ’ ಎಂದು ಆರೋಪಿಸಿದರು.
ಬ್ಯಾಡಗಿಯಿಂದ ಎರಡು ಮೂರು ಕಿ.ಮೀ ರಸ್ತೆ ನಿರ್ಮಿಸಿದ್ದು ಎರಡು ಬದಿಗೂ ಮಣ್ಣು ಹೇರಿಲ್ಲ. ಎದುರು ಬದರು ವಾಹನಗಳು ಬಂದಾಗ ರಸ್ತೆ ಬದಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಎಲ್ಲಿಂದ ಎಲ್ಲಿಯವರೆಗೆ 14 ಕಿ.ಮೀ ರಸ್ತೆ ನಿರ್ಮಿಸಲಾಗಿದೆ ಎನ್ನುವ ಮಾಹಿತಿ ಕೂಡಾ ಲೋಕೋಪಯೋಗಿ ಇಲಾಖೆ ಒದಗಿಸುತ್ತಿಲ್ಲ’ ಎಂದು ಅವರು ದೂರಿದರು.
‘ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕಾಗಿದ್ದು, ಬ್ಯಾಡಗಿ ಕಡೆಗೆ ಹೋಗುವ ರಸ್ತೆಯ ಎರಡೂ ಬದಿಗೂ ಪಕ್ಕಾ ಚರಂಡಿ ನಿರ್ಮಿಸಲು ಮುಂದಾಗಬೇಕು. ಮಳೆಗಾಲದಲ್ಲಿ ಇಲ್ಲಿಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ’ ಎಂದು ಅವರು ಹೇಳಿದರು.
‘ಗ್ರಾಮಕ್ಕೆ ನದಿಯಿಂದ ನೀರು ಪೂರೈಕೆಯಾಗುತ್ತಿದ್ದು ಜಲಮಂಡಳಿಯಿಂದ ₹ 35 ಲಕ್ಷ ಅನುದಾನದಲ್ಲಿ ನಿರ್ಮಿಸಿದ ನೀರು ಶುದ್ಧೀಕರಿಸುವ ಘಟಕ ಕಳೆದ ಎರಡು ವರ್ಷಗಳಿಂದ ಆರಂಭಗೊಳ್ಳದೆ ಜನರು ಅನಾರೋಗ್ಯಕ್ಕೆ ತುತ್ತಾಗಬೇಕಾಗಿದೆ. ನೀರು ಶುದ್ಧೀಕರಿಸುವ ಘಟಕದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಅದು ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಹೀಗಾಗಿ ಶುದ್ಧೀಕರಣವಾಗದ ಹಾಗೂ ಕೊಳವೆ ಬಾವಿಗಳ ನೀರು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಗ್ರಾಮದ ಗುರುರಾಜ ಹಿತ್ತಲಮನಿ.
ಜಲ ಜೀವನ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಮನೆ ಮನೆಗೆ ಗಂಗೆ ನಿಧಾನ ಗತಿಯಲ್ಲಿ ಸಾಗಿದೆ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಆರಂಭದಲ್ಲಿ ತೋರಿದ ಉತ್ಸಾಹ ಈಗ ತೋರುತ್ತಿಲ್ಲ. ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದು ಯಾವಾಗ ಪೂರ್ಣಗೊಳ್ಳುವುದೋ ಎನ್ನುವ ಆತಂಕ ಮನೆ ಮಾಡಿದೆ’ ಎಂದು ರಾಮಣ್ಣ ನಾಯ್ಕರ ದೂರಿದರು.
‘ಗ್ರಾಮದಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಿಸುವ ಘಟಕವನ್ನು ಜಲಮಂಡಳಿಯಿಂದ ಗ್ರಾಮ ಪಂಚಾಯ್ತಿಗೆ ವರ್ಗಾಯಿಸಬೇಕಾಗಿದೆ. ಆದರೆ ಮೇಲ್ಮಟ್ಟದ ಟ್ಯಾಂಕ್ ಲಭ್ಯವಿಲ್ಲ ಎಂದು ಗ್ರಾಮ ಪಂಚಾಯ್ತಿ ಅದನ್ನು ವಹಿಸಿಕೊಳ್ಳು ಹಿಂದೇಟು ಹಾಕುತ್ತಿದೆ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗ ಎಇಇ ಸುರೇಶ ಬೇಡರ.
ಜೆಜೆಎಂ ಕಾಮಗಾರಿ ಸ್ಥಗಿತಗೊಳಿಸಿದ ಗುತ್ತಿಗೆದಾರ ಈಗ ಕೆಲಸವನ್ನು ಆರಂಭಿಸಿದ್ದಾರೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆಸುರೇಶ ಜಾಡರ ಎಇಇ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ
₹14 ಕೋಟಿ ವೆಚ್ಚದಲ್ಲಿ 14 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಅಲ್ಲಲ್ಲಿ ಕಿತ್ತು ಹೋಗಿದೆ. ರಸ್ತೆ ಎರಡು ಬದಿ ಮಣ್ಣು ಹಾಕಿಲ್ಲ. ಎದುರು ವಾಹನ ಬಂದರೆ ತುಂಬಾ ತೊಂಬಾ ತೊಂದರೆಯಾಗಿದೆಶಿವರಾಜ ಉಜನಿ ಗ್ರಾಮಸ್ಥ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.