ಬಂದ್‌ಗೆ ನೀರಸ ಪ್ರತಿಕ್ರಿಯೆ: ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಲು ಆಗ್ರಹ

7

ಬಂದ್‌ಗೆ ನೀರಸ ಪ್ರತಿಕ್ರಿಯೆ: ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಲು ಆಗ್ರಹ

Published:
Updated:
Deccan Herald

ಹಾವೇರಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘ ಕರೆ ನೀಡಿದ್ದ ಗುರುವಾರದ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಎಂದಿನಂತೆ ಸಹಜವಾಗಿತ್ತು. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು. ‌

ಶಾಲಾ–ಕಾಲೇಜುಗಳು, ಕಚೇರಿಗಳು ಕಾರ್ಯನಿರ್ವಹಿಸಿದರೆ, ಅಂಗಡಿ–ಮುಂಗಟ್ಟುಗಳು, ವ್ಯಾಪಾರ– ವಹಿವಾಟು, ವಾಹನ ಸಂಚಾರವು ಎಂದಿನಂತೆ ಇತ್ತು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು.

ಪ್ರತ್ಯೇಕ ರಾಜ್ಯಕ್ಕೆ ಆಗ್ರಹ: ಭಾರತೀಯ ಕೃಷಿ ಕಾರ್ಮಿಕ ಸಂಘಟನೆ ಮತ್ತು ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟ ಸಮಿತಿ ಜಿಲ್ಲಾ ಘಟಕದ ವಿ ಎಫ್‌ ಕಟ್ಟೆಗೌಡ್ರ, ಉತ್ತರ ಕರ್ನಾಟಕಕ್ಕೆ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ನಿರಂತರ ಅನ್ಯಾಯವಾಗಿದೆ. ಹೀಗಾಗಿ ಪ್ರತ್ಯೇಕ ರಾಜ್ಯ ರಚನೆ ತನಕ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು. ಹನುಮಂತಪ್ಪ ದೀವಿಗಿಹಳ್ಳಿ, ಫಕ್ಕೀರೇಶ ಕಾಳಿ ಇದ್ದರು.

ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಕಾರ್ಯಾಧ್ಯಕ್ಷ ಮಹೇಶಗೌಡ ಪಾಟೀಲ ಮಾತನಾಡಿ, ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 371 ಜೆ ಕಲಂ ಅನ್ನು ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೂ ಅನ್ವಯಿಸಬೇಕು ಎಂದು ಆಗ್ರಹಿಸಿದರು. ಸಂಘದ ಎಂ.ಎಸ್‌ ಪಾಟೀಲ ಇದ್ದರು.

ಇವರಿಗೆ ವಕೀಲರ ಸಂಘದ ಕೆಲವು ಪದಾಧಿಕಾರಿಗಳು ಸಾಥ್ ನೀಡಿದರು. ವಕೀಲರಾದ ದೇವರಾಜ ನಾಯ್ಡು, ಎ.ವಿ. ಕಾಳಪ್ಪನವರ, ಸಿ.ಸಿ. ಬಾಗವಾರ್, ವಿ.ಎಂ‌.ಅರ್ಕಾಚಾರಿ, ಮೋಹನ ಮಾತಣ್ಣವರ, ರಾಮನಗೌಡ ತರ್ಲಘಟ್ಟ ಇದ್ದರು. ಹಾವೇರಿ, ರಾಣೆಬೆನ್ನೂರು ಮತ್ತು ಬ್ಯಾಡಗಿಯಲ್ಲಿ ನ್ಯಾಯಾಲಯದಲ್ಲಿ ವಕೀಲರು ಕಲಾಪದಿಂದ ಹೊರಗುಳಿದರು. 

ಅನ್ಯಾಯ ಸರಿಪಡಿಸಿ: ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, 70 ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದರೂ, ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ದಕ್ಷಿಣ ಕರ್ನಾಟಕ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು. ಸಾಧ್ಯವಾಗದೇ ಇದ್ದರೆ, ಪ್ರತ್ಯೇಕ ರಾಜ್ಯ ಮಾಡಿ ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ 2002ರಲ್ಲಿ ವೈಜನಾಥ ಪಾಟಿಲ ಮೊದಲಬಾರಿಗೆ ಪ್ರತಿಭಟನೆ ಮಾಡಿದ್ದರು. ಆದರೆ, ಈ ತನಕವೂ ಸ್ಪಂದನೆ ಸಿಕ್ಕಿಲ್ಲ ಎಂದ ಅವರು, ರೈತರ ಸಂಪೂರ್ಣ ಸಾಲ ಮನ್ನಾ ವಿಚಾರದಲ್ಲಿನ ಗೊಂದಲಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಘಟಕ ಸಂಚಾಲಕ ಮಾಲತೇಶ ಎಚ್.ಪೂಜಾರ, ಕಾರ್ಯದರ್ಶಿ ಸೈಯದ್‌ ಹಾಷಿಂ ಜಿಗಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಬಳಿಗಾರ, ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಸಾಬ ತರ್ಲಘಟ್ಟ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !