ಶನಿವಾರ, ಡಿಸೆಂಬರ್ 5, 2020
24 °C

ಹಾವೇರಿ ರೈಲ್ವೆ ನಿಲ್ದಾಣಕ್ಕೆ ‘ಮಹದೇವಪ್ಪ ಮೈಲಾರ’ ಹೆಸರಿಡಲು ಕೇಂದ್ರದ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ರೈಲ್ವೆ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ‘ಮಹದೇವಪ್ಪ ಮೈಲಾರ’ ಹೆಸರಿಡಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಒಪ್ಪಿಗೆ ನೀಡಿದೆ.

ರಾಜ್ಯ ಸರ್ಕಾರ ‘ಮಹದೇವಪ್ಪ ಮೈಲಾರ’ ಹೆಸರು ಇಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಕುರಿತು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿ, ಹಿಂದಿ, ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. 

1911ರಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜನಿಸಿದ ಮಹದೇವಪ್ಪ ಮೈಲಾರ ಅವರು ಮಹಾತ್ಮ ಗಾಂಧಿ ಅವರ ಅನುಯಾಯಿಯಾಗಿದ್ದರು. ಹದಿನಾರನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. 1930ರಲ್ಲಿ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಆರಂಭಗೊಂಡಾಗ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಮಹದೇವಪ್ಪ ಮೈಲಾರ ಅವರು ಭಾಗವಹಿಸಿ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದರು.

‘2016ರಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ನಂತರ ರಾಜ್ಯ ಸರ್ಕಾರವೂ ಈ ಬಗ್ಗೆ ಪ್ರಸ್ತಾವ ಕಳುಹಿಸಿತ್ತು. ಸಂಸದ ಶಿವಕುಮಾರ ಉದಾಸಿ ಮತ್ತು ಸಚಿವ ಜಗದೀಶ ಶೆಟ್ಟರ್‌ ಅವರು ನೂತನ ಹೆಸರಿಡಲು ಶ್ರಮಿಸಿದ್ದಾರೆ. ಕೇಂದ್ರ ರೈಲ್ವೆ ಇಲಾಖೆ ಪರಿಶೀಲನೆ ನಡೆಸಿ, ಒಪ್ಪಿಗೆ ನೀಡಿದೆ. ಕೋವಿಡ್‌ ಮುಗಿದ ನಂತರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ’ ಎಂದು ‘ಹುತಾತ್ಮ ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌’ನ ಟ್ರಸ್ಟಿ ವಿ.ಎನ್‌.ತಿಪ್ಪನಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.