ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಹಾನಿ ₹ 1,490 ಕೋಟಿ, ಇರೋದು ₹ 71 ಕೋಟಿ!

ಸಂತ್ರಸ್ತರಿಗೆ ಕೊಡಲು ಖಜಾನೆಯಲ್ಲೇ ಹಣವೇ ಇಲ್ಲ
Last Updated 11 ಅಕ್ಟೋಬರ್ 2019, 7:37 IST
ಅಕ್ಷರ ಗಾತ್ರ

ಹಾವೇರಿ: ಆಗಸ್ಟ್ ತಿಂಗಳ ಪ್ರವಾಹದಿಂದ ಜಿಲ್ಲೆಯಲ್ಲಿ ಸಂಭವಿಸಿದ ನಷ್ಟದ ಪ್ರಮಾಣ ಬರೋಬ್ಬರಿ ₹ 1,490 ಕೋಟಿ. ಆದರೆ, ಪರಿಹಾರ ನೀಡಲು ಜಿಲ್ಲಾಡಳಿತದ ಖಜಾನೆಯಲ್ಲಿ ಉಳಿದಿರುವುದು ಕೇವಲ ₹ 71 ಕೋಟಿ!

ಪ್ರವಾಹಕ್ಕೂ ಮುನ್ನ ಜಿಲ್ಲಾಡಳಿತದ ನಿಧಿಯಲ್ಲಿ ₹ 18.5 ಕೋಟಿ ಇತ್ತು. ಪರಿಹಾರ ಕೇಂದ್ರಗಳ ಸ್ಥಾಪನೆಗೆ, ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ, ಆಹಾರದ ಕಿಟ್ ವಿತರಣೆಗೆಹಾಗೂ ಮನೆ ಕಳೆದುಕೊಂಡವರಿಗೆ ತುರ್ತು ಪರಿಹಾರವಾಗಿ ತಲಾ ₹ 10 ಸಾವಿರ ಕೊಡುವುದಕ್ಕಾಗಿ ಆ ಹಣವನ್ನು ಬಳಸಿಕೊಳ್ಳಲಾಗಿತ್ತು. ಆ ನಂತರ ಸರ್ಕಾರದಿಂದ ಮೂರು ಹಂತಗಳಲ್ಲಿ ₹ 125 ಕೋಟಿ ಬಿಡುಗಡೆ ಆಗಿತ್ತು.

ಆ ಹಣದಲ್ಲಿ ₹ 54 ಕೋಟಿಯನ್ನು ಮೊದಲ ಕಂತಿನ ಪರಿಹಾರವಾಗಿ 10,405 ಮನೆಗಳ ಮಾಲೀಕರಿಗೆ ನೀಡಲಾಗಿದೆ. ಹೀಗಾಗಿ ಖಾತೆಯಲ್ಲಿ ಸದ್ಯ ₹ 71 ಕೋಟಿ ಮಾತ್ರ ಉಳಿದಿದ್ದು, ಅಷ್ಟು ಹಣವನ್ನು ಎಲ್ಲ ಸಂತ್ರಸ್ತರಿಗೂ ಹಂಚಲು ಸಾಧ್ಯವಾಗದೆ ಅಧಿಕಾರಿಗಳೂ ಸಂಕಷ್ಟ ಎದುರಿಸುತ್ತಿದ್ದಾರೆ.

‘ಹಾನಿ ಕುರಿತು ವಸ್ತುನಿಷ್ಠವಾದ ವರದಿಯನ್ನು ಸರ್ಕಾರಕ್ಕೆ ಕಳುಹಿಸಿದರೆ, ‘ಅಂದಾಜು ನಷ್ಟ ಹೆಚ್ಚು ಉಲ್ಲೇಖಿಸಲಾಗಿದೆ’ ಎಂಬ ಕಾರಣದೊಂದಿಗೆ ವರದಿ ವಾಪಸ್ ಬರುತ್ತದೆ. ಮೇಲಿಂದ ಮೇಲೆ ಸಮೀಕ್ಷೆಗಳನ್ನೂ ಮಾಡಿಸುತ್ತಾರೆ. ಮರುಸಮೀಕ್ಷೆ ಮಾಡಿದಾಗ ನಷ್ಟದ ಪ್ರಮಾಣ ಇನ್ನೂ ಹೆಚ್ಚುತ್ತದೆಯೇ ಹೊರತು, ಕಡಿಮೆ ಅಂತೂ ಆಗುವುದಿಲ್ಲ. ಸಂತ್ರಸ್ತರಿಂದ ಹಿಡಿದು ನಮ್ಮನ್ನು ಆಳುವ ಜನಪ್ರತಿನಿಧಿಗಳವರೆಗೆ ಎಲ್ಲರೂ ನಮ್ಮನ್ನೇ ದೂಷಿಸುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಹೀಗೆ ಪರಿಹಾರ ಹಂಚಿಕೆ:‘ಪ್ರವಾಹಕ್ಕೆ ಜಿಲ್ಲೆಯಲ್ಲಿ 15,387 ಮನೆಗಳಿಗೆ ಹಾನಿಯಾಗಿತ್ತು. 4,489 ಕುಟುಂಬಗಳು ಬೀದಿ ಪಾಲಾಗಿದ್ದವು. ಹಾನಿಯ ಪ್ರಮಾಣ ಆಧರಿಸಿ ಮನೆಗಳನ್ನು ‘ಎ’ (ಶೇ75ಕ್ಕಿಂತ ಹೆಚ್ಚು ಹಾನಿ), ‘ಬಿ’ (ಶೇ 25 ರಿಂದ ಶೇ 75ರಷ್ಟು ಹಾನಿ) ಹಾಗೂ ‘ಸಿ’ (ಶೇ 15 ರಿಂದ ಶೇ 25ರಷ್ಟು ಹಾನಿ) ಎಂದು ವಿಂಗಡಿಸಿ ಪರಿಹಾರ ಹಂಚುತ್ತಿದ್ದೇವೆ’ ಎಂದುಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಹೇಳಿದರು.

‘ಮೊದಲ ಕಂತಿನಲ್ಲಿ ತಲಾ ₹ 25 ಸಾವಿರವನ್ನು (ಈಗಾಗಲೇ ಪಾವತಿಸಿರುವ ಮೊತ್ತವನ್ನು ಕಡಿತಗೊಳಿಸಿ) ಎಲ್ಲ ನಿರಾಶ್ರಿತರ ಖಾತೆಗಳಿಗೂ ಹಾಕಲಾಗಿದೆ. ಬೆಳೆ ಹಾನಿ ಹಾಗೂ ಕೃಷಿ ಭೂಮಿ ಹಾಳಾದ ಬಗ್ಗೆ ಸಮೀಕ್ಷೆ ಪೂರ್ಣಗೊಂಡಿದ್ದು, ‘ಪರಿಹಾರ’ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

550 ಕಾಮಗಾರಿ ಪ್ರಸ್ತಾವ:‘ಪ್ರವಾಹದಿಂದ ಹಾಳಾಗಿರುವ ಜಿಲ್ಲೆಯ ರಸ್ತೆ, ಸೇತುವೆ, ಶಾಲಾ ಕಟ್ಟಡ, ಅಂಗನವಾಡಿ, ಕಟ್ಟಡ, ಆಸ್ಪತ್ರೆ ಕಟ್ಟಡಗಳ ದುರಸ್ತಿಗಾಗಿ ಲೋಕೋಪಯೋಗಿ (130) ಹಾಗೂ ಪಂಚಾಯತ್ ರಾಜ್ (420) ಇಲಾಖೆಗಳಿಂದ 550 ಕಾಮಗಾರಿಗಳ ಪ್ರಸ್ತಾವ ಸಲ್ಲಿಕೆಯಾಗಿದೆ. ಆ ಕಾಮಗಾರಿಗಳ ಅಂದಾಜುಮೊತ್ತ ₹ 102 ಕೋಟಿ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಸಂತ್ರಸ್ತರಿಗೆ ಮತ್ತೆ ಸಂಕಷ್ಟ

ಪ್ರವಾಹದ ಪರಿಹಾರವೇ ಇನ್ನೂ ಸಂತ್ರಸ್ತರ ಕೈಸೇರಿಲ್ಲ. ಆದರೆ, ಮತ್ತೆ ಅಬ್ಬರಿಸುತ್ತಿರುವ ಮಳೆಗೆ ನಿತ್ಯ ಮನೆಗಳು ಬೀಳುತ್ತಲೇ ಇವೆ. ನಿರ್ಮಿತಿ ಕೇಂದ್ರದಿಂದ ನಾಗೇಂದ್ರನಮಟ್ಟಿ, ಮೇಲ್ಮುರಿ, ಕುಣಿಮೆಳ್ಳಿಹಳ್ಳಿ ಹಾಆಗೂ ಶೀಗಿಹಳ್ಳಿಯಲ್ಲಿ 81 ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಆಜಮೀನುಗಳೂ ಈಗ ಜಲಾವೃತವಾಗಿವೆ. ಇದರಿಂದ ಸಂತ್ರಸ್ತರ ಸ್ಥಿತಿ ಮತ್ತಷ್ಟು ಶೋಚನೀಯ ಸ್ಥಿತಿ ತಲುಪಿದೆ.

ಈಗ ಬಿದ್ದ ಮನೆಗಳಿಗೂ ಪರಿಹಾರ

‘ಪ್ರವಾಹದ ನಂತರ ಬಿದ್ದ ಹಾಗೂ ಈಗ ಬೀಳುತ್ತಿರುವಮನೆಗಳ ವಿವರವನ್ನೂ ಎಲ್ಲ ತಾಲ್ಲೂಕುಗಳಿಂದ ತರಿಸಿಕೊಳ್ಳಲಾಗುತ್ತಿದೆ. ಅವುಗಳಿಗೂ ಪರಿಹಾರ ಕೊಡಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಬುಧವಾರವಷ್ಟೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ವಿಡಿಯೊ ಸಂವಾದದ ಮೂಲಕ ಚರ್ಚೆ ನಡೆಸಿದ್ದಾರೆ’ ಎಂದು ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT