ರಾಣೆಬೆನ್ನೂರು: ಅತೀ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಮಣ್ಣಿನಲ್ಲಿ ನೀರಿನ ಜೊತೆ ಪೋಷಕಾಂಶಗಳು ಕೊಚ್ಚಿಕೊಂಡು ಹೋಗುತ್ತವೆ. ಆಗ ಸಸ್ಯಗಳಲ್ಲಿ ಪೋಷಕಾಂಶಗಳ ಕೊರತೆ ಹೆಚ್ಚಾಗಿ ಬೆಳೆಗಳು ಕೀಟ ಹಾಗೂ ರೋಗಕ್ಕೆ ತುತ್ತಾಗುತ್ತದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ರಶ್ಮಿ ಸಿ.ಎಂ. ಹೇಳಿದರು.
ತಾಲ್ಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಿಂದ ನಿಕ್ರಾ ಯೋಜನೆ ಅಡಿಯಲ್ಲಿ ಗುರುವಾರ ಮಣ್ಣು ಹಾಗೂ ನೀರಿನ ಸಂರಕ್ಷಣಾ ಕ್ರಮಗಳ ಕುರಿತು ಹೊರ ಆವರಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖುಷ್ಕಿ ಭೂಮಿಯಲ್ಲಿ ನೀರು ನಿಲ್ಲಿಸಿ ಕೆಸರು ಗದ್ದೆ ಮಾಡಿ ಭತ್ತ ಬಿತ್ತನೆ ಮಾಡುವುದನ್ನು ನಿಲ್ಲಿಸಿ ಕೂರಿಗೆ ಅಥವಾ ನೇರ ಬಿತ್ತನೆಗೆ ಒತ್ತು ಕೊಡಬೇಕು ಎಂದರು.
ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮ ನಿಭಾಯಿಸಲು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಒಡ್ಡುಗಳನ್ನು ಹಾಕುವುದು ಅಥವಾ ಚೌಕು ಮಡಿಗಳನ್ನು ಮಾಡಿ ಮಳೆ ನೀರು ನಿಲ್ಲಿಸಿ ಇಳುಜಾರಿಗೆ ಅಡ್ಡಲಾಗಿ ಬೇಸಾಯ ಮಾಡಬೇಕು. ನೀರಾವರಿ ಪ್ರದೇಶದಲ್ಲಿ ಮೊದಲು ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ಏರ್ಪಾಡು ಮಾಡಬೇಕು. ಹೊಲದಲ್ಲಿ ಅಲ್ಲಲ್ಲಿ ಕಾಲುವೆಗಳನ್ನು ಮಾಡಿ ಹೆಚ್ಚಾದ ನೀರನ್ನು ಬಸಿದು ಹೋಗುವಂತೆ ಮಾಡಬೇಕು ಎಂದರು.
ಸತತ ಮಳೆಯಿಂದಾಗಿ ಬೆಳೆಗಳಲ್ಲಿ ನಿಂತ ನೀರನ್ನು ಹೊರ ಹಾಕಬೇಕು. ಇಲ್ಲವಾದಲ್ಲಿ ಬೆಳೆಗಳಲ್ಲಿ ನೀರು ನಿಲ್ಲುವುದರಿಂದ ಹೆಚ್ಚಿನ ತೇವಾಂಶ ಉಂಟಾಗಿ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಪೋಷಕಾಂಶಗಳ ಕೊರತೆಯಿಂದಾಗಿ ಎಲೆಗಳು ಹಳದಿ ವರ್ಣಕ್ಕೆ ತಿರುಗುತ್ತವೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ಬೆಳೆಗಳಿಗೆ ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 10:0:45 ಪೋಟ್ಯಾಶಿಯಂ ನೈಟ್ರೇಟ್ ಅಥವಾ 19:19:19 ಇವುಗಳಲ್ಲಿ ಯಾವುದಾದರೊಂದು ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಬೆಳೆಗಳ ಮೇಲೆ 15 ದಿನಗಳ ಅಂತರದಲ್ಲಿ 2 ರಿಂದ 3 ಬಾರಿ ಸಿಂಪರಣೆಯನ್ನು ನೀಡಬೇಕು. ಬೇಸಿಗೆ ಹಂಗಾಮಿನ ಬೆಳೆಗಳ ಕಟಾವಿನ ನಂತರ ಮಣ್ಣು ಹಾಗೂ ನೀರಿನ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದರು.
ಕೃಷಿಯಲ್ಲಿ ಬೆಳೆ ಅವಶೇಷಗಳ ಸುಡುವಿಕೆ ಸಂಪ್ರದಾಯ ಬಿಟ್ಟು ಮಣ್ಣಿನ ಮೇಲೆ ಹೊದಿಕೆ ಹಾಕುವುದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ಜೊತೆಗೆ ಮಣ್ಣಿಗೆ ಫಲವತ್ತತೆ ಹೆಚ್ಚಿಸಬಹುದು. ಅವೈಜ್ಞಾನಿಕ ರಸಾಯನಿಕ ಗೊಬ್ಬರಗಳ ಬಳಕೆಯಿಂದ ವಿಮುಖರಾಗಿ ಸಾವಯವ ಗೊಬ್ಬರದ ಬಳಕೆಯ ಕಡೆ ನಮ್ಮ ಚಿತ್ತವಿರಬೇಕು. ಕೇವಲ ಯೂರಿಯಾ ಗೊಬ್ಬರಕ್ಕೆ ದುಂಬಾಲು ಬೀಳದೇ ಬೇರೆ ಸಂಯುಕ್ತ ರಸಗೊಬ್ಬರಗಳನ್ನು ಬೆಳೆಗಳಿಗೆ ಒದಗಿಸಲು ಹಾಗೂ ನಿರ್ವಹಣೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ಕೇಂದ್ರದ (ನಿಕ್ರಾ ಯೋಜನೆ)ಯ ಹಿರಿಯ ಸಂಶೋಧಕಿ ಲಕ್ಷ್ಮೀ ಪಾಟೀಲ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಮೇಲಿಂದ ಮೇಲೆ ಅತಿವೃಷ್ಠಿ ಹಾಗೂ ಅನಾವೃಷ್ಠಿ ಸಂಭವಿಸುತ್ತಿರುವುದರಿಂದ ಬೆಳೆಗಳ ಇಳುವರಿಯು ಕುಂಠಿತವಾಗುತ್ತಿವೆ. ಹವಾಮಾನದ ಬದಲಾವಣೆಗೆ ತಕ್ಕಂತೆ ಹವಾಮಾನ ಮೂನ್ಸೂಚನೆಯನ್ನು ನೋಡಿಕೊಂಡು ಸೂಕ್ತ ಕೃಷಿ ಚಟುವಟಿಕೆಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಹೊನ್ನಪ್ಪ ಗೌಡ್ರ ಹಾಗೂ ಗ್ರಾಮದ 25 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.