ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್ ಕಾರ್ಡ್‌’ ಕೊಡುವವರೇ ಇಲ್ಲ!

ಖಾಲಿ ಕುರ್ಚಿ ನೋಡಿ ಬರಿಗೈಲಿ ಹಿಂದಿರುಗುವ ಕಾರ್ಮಿಕರು
Last Updated 19 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಹಾವೇರಿ: ಕಾರ್ಮಿಕ ನಿರೀಕ್ಷಕ, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕ, ಕಚೇರಿ ಸಹಾಯಕ ಸೇರಿದಂತೆ ಜಿಲ್ಲಾ ಕಚೇರಿಯಲ್ಲಿ ಎಲ್ಲ ಹುದ್ದೆಗಳೂ ಖಾಲಿ ಇವೆ. ಸದ್ಯ ದಾವಣಗೆರೆಯಿಂದ ಒಬ್ಬರು ಹೆಚ್ಚುವರಿ ಕಾರ್ಮಿಕ ಅಧಿಕಾರಿ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ. ಆದರೆ, ಕಾರ್ಮಿಕರು ಸಮಸ್ಯೆ ಹೊತ್ತು ತಂದಾಗ ಆ ಅಧಿಕಾರಿಯೂ ಕೈಗೆ ಸಿಗುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿದೆ.

‘ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಾರ್ಮಿಕರನ್ನು ಗುರುತಿಸಲು ಕಾರ್ಮಿಕ ಮಂಡಳಿಯ ವತಿಯಿಂದ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತಿದೆ. ಆದರೆ, ಈ ಜಿಲ್ಲೆಯಲ್ಲಿ ಮಾತ್ರ ಸ್ಮಾರ್ಟ್‌ ಕಾರ್ಡ್‌ಗೆ ಅರ್ಜಿ ತೆಗೆದುಕೊಂಡು ಹೋದರೆ, ಅದನ್ನು ಸ್ವೀಕರಿಸುವುದಕ್ಕೂ ನೌಕರರಿಲ್ಲ’ ಎನ್ನುತ್ತಾರೆ ಕಾರ್ಮಿಕರು.

‘ಕಾರ್ಡ್‌ ಪಡೆದವರಿಗೆ 60 ವರ್ಷ ದಾಟಿದ ಬಳಿಕ ಮಾಸಿಕ ಪಿಂಚಣಿ, ತರಬೇತಿ ಮತ್ತು ಉಪಕರಣಗಳ ಸೌಲಭ್ಯ, ಅಂತ್ಯಕ್ರಿಯೆಗೆ ಸಹಾಯಧನ, ಮಹಿಳಾ ಫಲಾನುಭವಿಗಳಿಗೆ ಹೆರಿಗೆ ಭತ್ಯೆ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಸೇರಿದಂತೆ ಹಲವು ಸೌಲಭ್ಯಗಳು ಸಿಗುತ್ತವೆ. ಹೀಗಾಗಿ, ಪ್ರತಿಯೊಬ್ಬರಿಗೂ ಸ್ಮಾರ್ಟ್‌ ಕಾರ್ಡ್‌ನ ಅಗತ್ಯವಿದೆ. ಹೀಗಾಗಿ, ಕಾರ್ಮಿಕರ ಅನುಕೂಲಕ್ಕಾಗಿ ತುರ್ತಾಗಿ ಅಧಿಕಾರಿಗಳ ನೇಮಕವಾಗಬೇಕು. ನಾನು ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿಮೂರು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಈವರೆಗೂ ಹಣ ಬಂದಿಲ್ಲ’ ಎಂದು ಚಿಕ್ಕಲಿಂಗದಹಳ್ಳಿಯ ಕಾರ್ಮಿಕ ರಾಜೇಸಾಬ್‌ ಬೇಸರ ವ್ಯಕ್ತಪಡಿಸಿದರು.

ಆನ್‌ಲೈನ್‌ ಸೆಂಟರ್‌ಗಳಲ್ಲೂ ಲೂಟಿ: ‘ಹೊಸದಾಗಿ ಕಾರ್ಮಿಕರ ಕಾರ್ಡ್‌ಗೆ ನೋಂದಣಿ ಮಾಡಿಸಲು ಕಂಪ್ಯೂಟರ್‌ ಸೆಂಟರ್‌ಗಳಿಗೆ ಹೋದರೆ ₹500 ರಿಂದ ₹1 ಸಾವಿರದವರೆಗೆ ನಮ್ಮಿಂದ ಹಣ ಕೀಳುತ್ತಾರೆ. ಅಷ್ಟು ಹಣ ಕೊಟ್ಟರೂ ದಾಖಲೆಯಲ್ಲಿ ತಪ್ಪು ಮಾಡುತ್ತಾರೆ. ಅದನ್ನು ಸರಿಪಡಿಸಲು ಮತ್ತಷ್ಟು ಹಣ ಕೇಳುತ್ತಾರೆ’ ಎಂದು ಹಾವೇರಿಯ ಎಚ್‌. ಪ್ರಕಾಶ ಬೇಸರ ವ್ಯಕ್ತಪಡಿಸಿದರು.

ಕಾರ್ಡ್‌ ನವೀಕರಣವಾಗುತ್ತಿಲ್ಲ: ಕಾರ್ಮಿಕರ ಗುರುತಿನ ಚೀಟಿಯನ್ನು ನವೀಕರಿಸುವುದಕ್ಕಾಗಿ ಕೊಟ್ಟು ಮೂರು ತಿಂಗಳಾಗಿದೆ. ಈವರೆಗೂ ಅದರ ಮಾಹಿತಿ ಇಲ್ಲ. ವಿದ್ಯಾರ್ಥಿ ವೇತನ, ಮಕ್ಕಳ ವಿದ್ಯಾರ್ಥಿ ವೇತನ ಕೇಳಲು ಹೋದರೆ ಮೂರು ವರ್ಷದಿಂದಲೂ ನೀತಿ ಸಂಹಿತೆ ಸೇರಿದಂತೆ ವಿವಿಧ ನೆಪ ಹೇಳುತ್ತಾರೆ ಎನ್ನುತ್ತಾರೆ ಶ್ರಮಶಕ್ತಿ ಕಟ್ಟಡ ಕಾರ್ಮಿಕರ ಯೂನಿಯನ್‌ನ ಎಂ.ಕರಿಬಸಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT