ಮಂಗಳವಾರ, ಆಗಸ್ಟ್ 20, 2019
24 °C
4 ದಿನಗಳಲ್ಲಿ ಮೂವರು ರೈತರ ಸಾವು

ನೆರೆ ಹೊಡೆತಕ್ಕೆ ಜಮೀನಿನಲ್ಲೇ ಜೀವಬಿಟ್ಟ ಅನ್ನದಾತರು!

Published:
Updated:
Prajavani

ಹಾವೇರಿ: ನೆರೆಗೆ ತತ್ತರಿಸಿರುವ ಜಿಲ್ಲೆ ಹಂತ ಹಂತವಾಗಿ ಸುಧಾರಿಸಿಕೊಳ್ಳುತ್ತಿದೆ. ಜಲಾವೃತವಾಗಿದ್ದ ಗ್ರಾಮಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದರೂ, ಗ್ರಾಮಸ್ಥರ ಕಣ್ಣೀರು ಮಾತ್ರ ಇಂಗುತ್ತಿಲ್ಲ. ಬೆಳೆಗಳು ಮುಳುಗಿದ್ದರಿಂದ 4 ದಿನಗಳಲ್ಲಿ ಮೂವರು ರೈತರು ಜಮೀನಿನಲ್ಲೇ ಸಾವಿನ ಹಾದಿ ತುಳಿದಿದ್ದರೆ, ಧರ್ಮಾ ನದಿಯಲ್ಲಿ ಕೊಚ್ಚಿ ಹೋದವನ ಸುಳಿವು ಇನ್ನೂ ಸಿಕ್ಕಿಲ್ಲ. ಈ ಕೃಷಿಕರ ಮನೆಗಳಲ್ಲೀಗ ಸ್ಮಶಾನ ಮೌನ...‌

‘ಊರ್ ಮುಳ್ಗಿದ್ರೆ ನೀರು ಇಂಗಿದ ಮ್ಯಾಲ ಸರಿ ಆಗ್ತತಿ. ಆದ್ರ, ನಮ್ಮ ಬದುಕೇ ಮುಳ್ಗೋಗೇತಿ. ಮನೆ ಮಗನ್ನಾ ಕಳ್ಕೊಂಡು ಬೀದಿಗೆ ಬಿದ್ದೀವಿ. ನೆರೆ ಸಂಕಟದ ನಡುವಿ, ಮಗನೂ ಹೋದ ಅನ್ನೋ ನೋವನ್ನ ಹೆಂಗ್ ತಡ್ಕೋಳೋದು’ ಎಂದು ಗುತ್ತಲದ ಹಾವನೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಮಲ್ಲಪ್ಪನ (20) ಪೋಷಕರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

‘ಇಷ್ಟ್ ವರ್ಷ ಬರಗಾಲದಾಗ ಬೆಂದೀವಿ. ಬೇರೆ ದಿಕ್ಕಿಲ್ಲ ಅಂತ ಸಂಬಂಧಿಕ್ರ ಹತ್ರ ₹ 2 ಲಕ್ಷ ಸಾಲ ಮಾಡ್ಕೊಂಡು ಹೆಂಗೋ ಮತ್ತೆ ನಾಟಿ ಮಾಡಿದ್ವಿ. ಸಾಲ ತೀರಿಸೋ ಜವಾಬ್ದಾರಿನಾ ಮಗನೇ ವಹಿಸಿಕೊಂಡಿದ್ದ. ಆದ್ರ, ಹೊಲ ಹೊಳೆ ಹಂಗ ಆಗಿದ್ದನ್ನ ನೋಡಿ ಅವ್ನು ಜಮೀನಿನಾಗ ಕೀಟದ ಔಷಧಿ ಕುಡಿದು ಸತ್ತೋಗಾನಾ. ಈಗ ನಮ್ಗೆ ದಿಕ್ಕೇ ಕಾಣ್ತಿಲ್ಲ’ ಎಂದು ಅವರು ನೋವು ತೋಡಿಕೊಂಡರು.

ಇನ್ನು ಹಾನಗಲ್ ತಾಲ್ಲೂಕಿನ ಹೋತನಹಳ್ಳಿ ಗ್ರಾಮದ ರೈತ ಶಿವಪ್ಪ (55) ಕೂಡ ತಮ್ಮ ಕೃಷಿ ಭೂಮಿಯಲ್ಲೇ ಶನಿವಾರ ಸಾವಿಗೀಡಾಗಿದ್ದಾರೆ. ‘ಜಮೀನು ಮುಳುಗಿದ್ರಿಂದ ಗಂಡ ಸತ್ತಾನ ಅಂದ್ರ, ಪರಿಹಾರ ಪಡಿಯಾಕ ಸುಳ್ ಹೇಳ್ತಾಳ ಅಂತಾರ್ರೀ. ಅದಕ್ಕ ಯಾರಿಗೂ ಹೇಳೋಕ್ ಹೋಗಿಲ್ರಿ. ಪೊಲೀಸ್ರು ಬಂದು ರಿಪೋರ್ಟ್ ಮಾಡ್ಕೊಂಡ್ ಹೋಗೇರ್ರಿ’ ಎಂದು ಶಿವಪ್ಪನ ಪತ್ನಿ ಪಾರವ್ವ ಹೇಳುವಾಗ ಅವರ ಕಣ್ಣಾಲಿಗಳು ತುಂಬಿದ್ದವು.

‘1 ಎಕರೆ ಜಮೀನಿನಾಗ ಗೋವಿನ್‌ಜೋಳ ಹಾಕಿದ್ವಿ. ಆದ್ರ ನೆರೆ ಬಂದು ಪೀಕಿನಾಗ ನೀರು ನಿಂತ್ಕೊತು. ಅದನ್ನ ನೋಡಿ ಗಂಡ ಕಣ್ಣೀರು ಹಾಕಿದ್ರು. ಬೆಳೆ ಲುಕ್ಸಾನ್ ಆಗಿದ್ರಿಂದ ಬೇಸರ ಮಾಡ್ಕೊಂಡು ಅಲ್ಲೇ ಜೀವ ಬಿಟ್ರು. ಪ್ರವಾಹ ಕಡಿಮಿ ಆಗಿ, ಊರು ಸಹಜ ಆಗಕತ್ತೈತ್ರಿ. ಆದ್ರ, ನಮ್ಮ ಜೀವ್ನನ ಯಾರ್ರೀ ಕೇಳ್ತಾರ’ ಎಂಬುದು ಪಾರವ್ವರ ನೋವಿನ ಪ್ರಶ್ನೆ.

ಹೃದಯಕ್ಕೇ ಆಘಾತ: ಜಮೀನಿನಲ್ಲಿ ನೀರು ನಿಂತಿರುವುದನ್ನು ನೋಡಿ ಕದರಮಂಡಲಗಿ ಗ್ರಾಮದ ರೈತ ಹನುಮಂತಪ್ಪ (70) ಹೊಲದಲ್ಲೇ ಜೀವ ಬಿಟ್ಟಿದ್ದಾರೆ. ‘4 ಎಕರೆ ಜಮೀನಿನಲ್ಲಿ ಹತ್ತಿ ಹಾಗೂ ಗೋವಿನ ಜೋಳ ಬೆಳೆದಿದ್ದೆವು. ಹಾನಿಯಾದ ಬೆಳೆ ನೋಡಿ ಅಜ್ಜ ಗೋಳಾಡಿದ್ದರು. ಭಾನುವಾರ ಬೆಳಿಗ್ಗೆ 6 ಗಂಟೆಗೇ ಹೊಲಕ್ಕೆ ಹೋದವರು ವಾಪಸ್ ಬರಲೇ ಇಲ್ಲ. ಹೋಗಿ ನೋಡಿದರೆ ಅವರು ಸತ್ತು ಬಿದ್ದಿದ್ದರು’ ಎಂದು ಹನುಮಂತಪ್ಪ ಅವರ ಮೊಮ್ಮಕ್ಕಳು ಹೇಳಿದರು.

ಜಿಲ್ಲಾಡಳಿತದ ಮನವಿ: ‘ಹಾನಿ ನಷ್ಟಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಒಬ್ಬರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಹೀಗಾಗಿ, ಯಾರೂ ಆತಂಕಕ್ಕೆ ಒಳಗಾಗಬಾರದು’ ಎಂದು ಜಿಲ್ಲಾಡಳಿತ ಕೂಡ ಮನವಿ ಮಾಡಿದೆ.

ತುಂಗಾಭದ್ರ, ಕುಮದ್ವತಿಯ ಆತಂಕ

ಜಿಲ್ಲೆಯಲ್ಲಿ ಕಳೆದ 12 ದಿನಗಳಲ್ಲಿ ಬರೋಬ್ಬರಿ 247 ಸೆ.ಮೀ ಮಳೆಯಾಗಿದ್ದು,‌ ಜಿಲ್ಲಾಡಳಿತದ ಸಮೀಕ್ಷೆ ಪ್ರಕಾರ 42,665 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಧರ್ಮಾ, ವರದಾ ನದಿಗಳಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ ಆಗಿದೆಯಾದರೂ, ತುಂಗಾಭದ್ರಾ ಹಾಗೂ ಕುಮದ್ವತಿ ನದಿಗಳ ನೀರು ಏರುತ್ತಲೇ ಇರುವುದು ಗ್ರಾಮಸ್ಥರ ಆತಂಕವನ್ನು ದುಪ್ಪಟ್ಟು ಮಾಡಿದೆ. ಮತ್ತೆ ನೆರೆ ಹೊಡೆತ ತಡೆದುಕೊಳ್ಳುವಷ್ಟು ಶಕ್ತಿ ಯಾರಲ್ಲೂ ಉಳಿದಿಲ್ಲ.

ಇನ್ನೂ ಕಾಣದ ಶಿವಪ್ಪ!

ಆ.5ರಂದು ಧರ್ಮಾ ನದಿಯ ಸೆಳೆತಕ್ಕೆ ಕೊಚ್ಚಿ ಹೋಗಿದ್ದ ಹಾನಗಲ್ ತಾಲ್ಲೂಕು ಶೃಂಗೇರಿ ಗ್ರಾಮದ ರೈತ ಶಿವಪ್ಪ ಸೊಟ್ಟಪ್ಪನವರ (50) ಅವರು ಇನ್ನೂ ಪತ್ತೆಯಾಗಿಲ್ಲ. ‘ನೀರಿನ ಹರಿಯುವಿಕೆ ಹೆಚ್ಚಿದೆ. ಎರಡು ದಿನ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ‘‍ಪ್ರಜಾವಾಣಿ’ಗೆ ತಿಳಿಸಿದರು. ಆದರೆ, ಅವರಿಗೆ ಏನೂ ಆಗಿಲ್ಲ. ಜೀವಂತವಾಗಿ ಬರುತ್ತಾರೆ ಎಂಬ ಆಶಾಭಾವನೆಯಲ್ಲೇ ಕುಟುಂಬ ಸದಸ್ಯರು ಕಾಯುತ್ತಿದ್ದಾರೆ. 

Post Comments (+)