ಭಾನುವಾರ, ಸೆಪ್ಟೆಂಬರ್ 22, 2019
27 °C
ನೆರೆ ಇಳಿದ ಮೇಲೆ ಹೆದ್ದಾರಿ ಸಂಚಾರವೂ ದುಸ್ತರ * ಕಿರುದಾರಿಗಳ ನಿವಾಸಿಗಳಿಗೆ ತಪ್ಪದ ಕಿರಿಕಿರಿ

ಕಿತ್ತು ಹೋದ ರಸ್ತೆಗಳಲ್ಲಿ ಸವಾರರಿಗೆ ನಿತ್ಯ ನರಕ...

Published:
Updated:
Prajavani

ಹಾವೇರಿ: ಸ್ವಲ್ಪ ಮಳೆಯಾದರೂ ಜಲಾವೃತವಾಗುವ ರಸ್ತೆಗಳು. ವಾರ ಕಳೆದರೂ ರಸ್ತೆಯಿಂದಿಳಿಯದ ನೀರು. ಅಪಾಯಕ್ಕೆ ಆಹ್ವಾನಿಸುತ್ತ ಬಾಯ್ತೆರೆದು ಮಲಗಿರುವ ದೊಡ್ಡ ದೊಡ್ಡ ಗುಂಡಿಗಳು. ಅವೈಜ್ಞಾನಿಕ ರಸ್ತೆ ಉಬ್ಬುಗಳು. ಇಷ್ಟೆಲ್ಲ ಸವಾಲುಗಳ ನಡುವೆಯೇ ತಮ್ಮ ನರನಾಡಿಗಳನ್ನೂ ಕಾಪಾಡಿಕೊಂಡು ಸಂಚರಿಸಬೇಕಾದ ಅನಿವಾರ್ಯತೆಯಲ್ಲಿ ವಾಹನ ಸವಾರರು...

ಯಾಲಕ್ಕಿ ಕಂಪಿನ ನಾಡಿನಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ನೆರೆ ಇಳಿದ ಮೇಲೆ ರಸ್ತೆಗಳ ಅಸಲಿ ಬಣ್ಣವೂ ಬಯಲಾಗುತ್ತಿದೆ. ಊರ ಒಳಗಿನ ರಸ್ತೆಗಳು ಮಾತ್ರವಲ್ಲದೇ, ಹೆದ್ದಾರಿಯಲ್ಲೂ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ಜತೆಗೆ ಅಲ್ಲಲ್ಲಿ ನಡೆಯುತ್ತಿರುವ ಕಾಮಗಾರಿಗಳು, ರಸ್ತೆಯನ್ನು ಹಾಳುಗೆಡವಿ ಸವಾರರಿಗೆ ಕಿರಿಕಿರಿ ತಂದೊಡ್ಡಿವೆ.    

‘ಹಾವೇರಿ ನಗರಕ್ಕೆ ವ್ಯವಸ್ಥಿತ ‘ಮಾಸ್ಟರ್‌ ಪ್ಲಾನ್’ ಇಲ್ಲ. ಎಲ್ಲವನ್ನೂ ಅವೈಜ್ಞಾನಿಕವಾಗಿ ಮಾಡಲಾಗಿದೆ. ಹೆಗ್ಗೇರಿ ಕೆರೆ ತುಂಬಿದರೆ, ಕೆರೆಮತ್ತಿಹಳ್ಳಿ ಮಾರ್ಗವಾಗಿ ರಸ್ತೆಗಳಿಗೆ ನೀರು ಬರುತ್ತದೆ. ಆಗಸ್ಟ್‌ ತಿಂಗಳಲ್ಲಿ ಆಗಿದ್ದೂ ಅದೇ. ಕನಿಷ್ಠ ಅಲ್ಲಿಗೆ ಒಂದು ತಡೆಗೋಡೆ ಕಟ್ಟುವ ಕೆಲಸವೂ ಆಗಿಲ್ಲ. ರಸ್ತೆಗಳ ಮೇಲೆ ಹರಿಯುವ ನೀರು ಚರಂಡಿ ಸೇರುವುದಕ್ಕೂ ವ್ಯವಸ್ಥೆ ಇಲ್ಲ. ಹೀಗಾಗಿಯೇ ಒಮ್ಮೆ ಮಳೆ ಸುರಿದರೂ ರಸ್ತೆಗಳು ವಾರಗಟ್ಟಲೇ ಕೆಸರು ಗದ್ದೆಯಂತಾಗಿರುತ್ತವೆ’ ಎಂದು ನಗರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಯಾವ್ಯಾವ ರಸ್ತೆಗಳು: ಬಸವೇಶ್ವರ ನಗರ ‘ಬಿ’ ಬ್ಲಾಕ್‌, ಶಿವಾಜಿ ನಗರ 4ನೇ ಅಡ್ಡರಸ್ತೆ, ಜೆ.ಪಿ.ರಸ್ತೆ, ಕಮಲ ಕಲ್ಯಾಣ ಮಂಟಪ ರಸ್ತೆ, ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ, ಗುತ್ತಲ ರಸ್ತೆ, ವಿದ್ಯಾನಗರ, ಅಶ್ವಿನಿ ನಗರ, ಕಲ್ಲುಮಂಟಪ ರಸ್ತೆ,  ಶಾಂತಿನಗರ, ಕೊರವರ ಓಣಿ, ರೈಲ್ವೆ ಕೆಳಸೇತುವೆ, ಎಂ.ಜಿ.ರಸ್ತೆ, ಶಿವಯೋಗೇಶ್ವರ ನಗರ, ನಾಗೇಂದ್ರನಮಟ್ಟಿ, ಅಗ್ರಹಾರ ರಸ್ತೆಗಳು ಸಂಪೂರ್ಣ ಹಾಳಾಗಿವೆ.

ಯುಜಿಡಿ, ಪೈಪ್‌ಲೈನ್‌ ದುರಸ್ತಿ ಸೇರಿದಂತೆ ನಗರದಲ್ಲಿ ಪ್ರತಿ ರಸ್ತೆಯಲ್ಲಿಯೂ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ, ಅಗೆದ ರಸ್ತೆಗಳನ್ನು ಸರಿಯಾಗಿ ಸರಿಪಡಿಸದೆ ಹಾಗೆಯೇ ಬಿಡುತ್ತಿರುವುದೂ ಸವಾರರಿಗೆ ಕಂಟಕವಾಗಿದೆ.

‘ಹೆದ್ದಾರಿಯಲ್ಲಿ ಪ್ರತಿ ನಿಮಿಷಕ್ಕೆ ಕನಿಷ್ಠ 80 ವಾಹನಗಳು ಸಂಚರಿಸುತ್ತವೆ. ಅಲ್ಲಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಸವಾರರು ಸರ್ವಿಸ್ ರಸ್ತೆಗೆ ಹೊರಳುತ್ತಾರೆ. ಆ ರಸ್ತೆಗಳ ಸ್ಥಿತಿಯಂತೂ ಹೇಳತೀರದು. ಡಾಂಬರ್ ಕಿತ್ತು, ಜಲ್ಲಿ ಮೇಲೆದ್ದಿದ್ದರೂ ಅತ್ತ ನೋಡುವವರೇ ಇಲ್ಲ. ಹೆದ್ದಾರಿ ಎಂದು ವೇಗವಾಗಿ ವಾಹನ ಓಡಿಸಿಕೊಂಡು ಬರುವ ಸವಾರರು, ಒಮ್ಮೆಲೆ ಸರ್ವಿಸ್ ರಸ್ತೆಗಳಿಗೆ ಇಳಿದಾಗ ವೇಗ ಕಡಿಮೆ ಮಾಡಲಾಗದೆ ಅಪಾಯಕ್ಕೀಡಾಗುತ್ತಿದ್ದಾರೆ. ನಿತ್ಯ ಇಂತಹ 2–3 ಪ್ರಕರಣಗಳು ವರದಿಯಾಗುತ್ತಿವೆ’ ಎಂದು ಹಾವೇರಿ ಸಂಚಾರ ಠಾಣೆಯ ಪೊಲೀಸರು ಹೇಳುತ್ತಾರೆ.‌

ಕಿರುರಸ್ತೆಗಳಲ್ಲಿ ದೊಡ್ಡ ಬವಣೆ:  ಒಳರಸ್ತೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ಮಳೆಗಾಲದಲ್ಲಿ ಕೊಳಚೆ ನೀರೆಲ್ಲ ರಸ್ತೆ ಮೇಲೇ ಹರಿಯುತ್ತದೆ. ಸತತವಾಗಿ ಸುರಿಯುತ್ತಿರುವ ಮಳೆಯು ಇಂತಹ ಕಿಷ್ಕಿಂಧೆ ಪ್ರದೇಶಗಳಿಗೆ ಭಾರೀ ಹೊಡೆತ ನೀಡಿದೆ. ರಸ್ತೆಗಳು ಜಲಾವೃತವಾಗಿ ದಾರಿ ಯಾವುದು? ಗುಂಡಿ ಯಾವುದು? ಎಂಬುದೂ ಗೊತ್ತಾಗದಷ್ಟು ಭಯಾನಕ ಸನ್ನಿವೇಶ ಸೃಷ್ಟಿಯಾಗಿದೆ. ರಸ್ತೆಯ ಅಗಲ ಕಡಿಮೆ ಇರುವುದರಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸಿ ಸವಾರರು ಪರಸ್ಪರ ಕಿತ್ತಾಡುವುದು ಸಾಮಾನ್ಯವಾಗಿದೆ.

ಪರಿಣಿತರ ಸಭೆ ಕರೆಯುತ್ತೇನೆ

ಹಾವೇರಿಯ ಸಮಗ್ರ ಅಭಿವೃದ್ಧಿಗಾಗಿ ಸದ್ಯದಲ್ಲೇ ಜಿಲ್ಲೆಯ ಎಲ್ಲ ಪರಿಣಿತರು ಹಾಗೂ ಜನಪ್ರತಿನಿಧಿಗಳನ್ನು ಕರೆದು ಚರ್ಚೆ ನಡೆಸುತ್ತೇನೆ. ಆ ಯೋಜನೆಯಲ್ಲಿ ರಸ್ತೆಗಳ ದುರಸ್ತಿ, ಸೇತುವೆಗಳ ನಿರ್ಮಾಣವೂ ಸೇರಿರುತ್ತದೆ. ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ, ಮುಂದಿನ ನಾಲ್ಕು ವರ್ಷಗಳಲ್ಲಿ ಇಲ್ಲಿನ ಚಿತ್ರಣವನ್ನು ಬದಲಾಯಿಸುವ ಗುರಿ ಇದೆ.  ಸದ್ಯದ ಸಮಸ್ಯೆಗಳಿಗೆ ತ್ವರಿತವಾಗಿ ತಾತ್ಕಾಲಿಕ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಬಸವರಾಜ ಬೊಮ್ಮಾಯಿ,‌

ಜಿಲ್ಲಾ ಉಸ್ತುವಾರಿ ಸಚಿವ, ಹಾವೇರಿ  

***

ವರ್ಷವಿಡೀ ನರಳಾಟ

ನಗರದಲ್ಲಿ ವಹಿವಾಟು ಹೆಚ್ಚಿರುವ 30ಕ್ಕೂ ಹೆಚ್ಚು ರಸ್ತೆಗಳು ಇನ್ನೂ ಸಿಮೆಂಟ್ ಹಾಗೂ ಡಾಂಬರನ್ನೇ ಕಂಡಿಲ್ಲ. ರಾಡಿ ಉಂಟಾಗುವ ಕಾರಣದಿಂದಲೇ ಮಳೆಗಾಲದಲ್ಲಿ ವ್ಯಾಪಾರ ಪಾತಾಳಕ್ಕೆ ಇಳಿದಿರುತ್ತದೆ. ಬೇಸಿಗೆ ಶುರುವಾಗುತ್ತಿದ್ದಂತೆಯೇ ದೂಳಿನ ಮಜ್ಜನವಾಗುತ್ತದೆ. ಹೀಗೆ, ವರ್ಷದ 365 ದಿನವೂ ನಾವು ಒಂದಿಲ್ಲೊಂದು ಸಮಸ್ಯೆಗಳಿಂದ ಸಾಯುತ್ತಲೇ ಇದ್ದೇವೆ. ವರ್ತಕರ ಸಂಘದಿಂದ ನಗರಸಭೆಗೆ ಹತ್ತರು ಮನವಿಪತ್ರ ಕೊಟ್ಟರೂ ಪ್ರಯೋಜನವಾಗಿಲ್ಲ.

ಖಲೀಲ್ ಅಹ್ಮದ್ ಹುಲಗೂರು, ಅಂಗಡಿ ಮಾಲೀಕ, ಹಾವೇರಿ

***

ಟೆಂಡರ್ ಆದ್ರೂ, ಕೆಲ್ಸ ಶುರುವಾಗಿಲ್ಲ

ನಮ್ ಬಡಾವಣೇಲಿ ರಸ್ತೆ ನಿರ್ಮಿಸೋಕೆ ₹75 ಲಕ್ಷದ ಟೆಂಡರ್ ಆಗಿ ವರ್ಷ ಆಗೇತ್ರಿ. ಇನ್ನುವರೆಗೂ ಕೆಲ್ಸ ಶುರುವಾಗಿಲ್ಲ. ಅಧಿಕಾರಿಗಳು ಕೇಳಿದರೆ, ‘ಅದು ನೋಂದಣಿರಹಿತ ಪ್ರದೇಶ. ಅಭಿವೃದ್ಧಿ ಮಾಡೋಕೆ ಬರಲ್ಲ’ ಅಂತ ಉತ್ರ ಕೊಡ್ತಾರ. ಟೆಂಡರ್ ಮಾಡೋವಾಗ ಅವರ ಲಕ್ಷ್ಯ ಎಲ್ಲಿತ್ತೋ ಗೊತ್ತಿಲ್ಲ. ಮಳೆಗಾಲದಾಗ ಈ ಬಡಾವಣೆ ಪೂರ್ತಿ ರಾಡಿ ಆಗ್ತದ. ಆಟೊ‌ದವ್ರು ಇಲ್ಲಿಗೆ ಬಾಡಿಗೇನೂ ಬರಲ್ರೀ.

ಅಮಿರ್ ಅಮ್ಜಾದ್, ಮೆಹಬೂಬ್‌ನಗರ

Post Comments (+)