ಹಾವೇರಿ: ‘ರಾಜ್ಯದಲ್ಲಿ ಹಾವೇರಿ ಸೇರಿದಂತೆ ನೂತನವಾಗಿ 9 ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ಮುಂದಿನ ಭವಿಷ್ಯ ಬರೆಯುವ ಕೇಂದ್ರಗಳು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಾವೇರಿ ವಿಶ್ವವಿದ್ಯಾಲಯ ಸೇರಿದಂತೆ 9 ನೂತನ ವಿಶ್ವವಿದ್ಯಾಲಯಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ. ಶಿಕ್ಷಣ ಬೆಳವಣಿಗೆ ಆಗಬೇಕು.
ಈ ರೀತಿಯ ವಿಶ್ವವಿದ್ಯಾಲಯಗಳು ದೇಶದಲ್ಲಿಯೇ ಪ್ರಥಮವಾಗಿ ಪ್ರಾರಂಭವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲರೂ ಕರ್ನಾಟಕದ ಮಾದರಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ದೇಶದಲ್ಲಿ ಉನ್ನತ ಶಿಕ್ಷಣ ಅಂದರೆ ಐಐಟಿ. ಅದಕ್ಕೆ ಸಿಇಟಿ ಮೂಲಕ ಆಯ್ಕೆ ಆಗಬೇಕು. ನಮ್ಮ ಮಕ್ಕಳೂ ಐಐಟಿ ಮಾದರಿಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಕೆಐಟಿ ಸ್ಥಾಪನೆ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಸಂಸ್ಥೆಗಳು ಐಐಟಿ ಮಾದರಿಯಲ್ಲಿ ಇರಲಿವೆ. ಐಐಟಿ ಹುಡುಕಿಕೊಂಡು ಹೋಗುವ ಬದಲು ಇಲ್ಲಿಯೇ ಐಐಟಿ ಸೃಷ್ಟಿಸುತ್ತಿದ್ದೇವೆ. ಜಗತ್ತಿನ ಉನ್ನತ ವಿವಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ನಾಡಿನ ಭವಿಷ್ಯ:
ವಿದ್ಯಾರ್ಥಿಗಳು ನಾಡಿನ ಭವಿಷ್ಯ, ಈಗ 21ನೇ ಶತಮಾನ ಜ್ಞಾನದ ಶತಮಾನ .ಮುಂದಿನ ದಿನಗಳಲ್ಲಿ ಭಾರತ ವಿಶ್ವ ಗುರುವಾಗಲಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಪಾಕಿಸ್ತಾನದ ಪ್ರಜೆಗಳು ಮೋದಿಯಂಥ ಪ್ರಧಾನಿ ಬೇಕು ಅಂತ ಹೇಳುತ್ತಿದ್ದಾರೆ. ಚೀನಾ ಕೂಡ ಭಾರತ ಕೊರೊನಾ ನಿಯಂತ್ರಣ ಮಾಡಿದ್ದನ್ನು ಮೆಚ್ಚಿಕೊಂಡಿದೆ ಎಂದರು.
ಶಿಕ್ಷಣ ಸಂಸ್ಥೆ ಅಂದರೆ ಪಾವಿತ್ರ್ಯತೆ. ಸಂಸ್ಥೆಗಳು ಸರಸ್ವತಿಯ ವಾಹನ ಪರಮಹಂಸ ಕೂಡ ಪವಿತ್ರವಾಗಿದ್ದು ವಿದ್ಯಾರ್ಥಿಗಳು ಅಷ್ಟೇ ಎತ್ತರಕ್ಕೆ ಬೆಳೆಯಬೇಕು ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ಸಚಿವ ಮುರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಇದ್ದರು.
ವರ್ಚುವಲ್ ವೀಕ್ಷಣೆ:
ನೂತನ ಹಾವೇರಿ ವಿ.ವಿ. ಉದ್ಘಾಟನೆ ವೀಕ್ಷಣೆಗಾಗಿ ಕೆರಿಮತ್ತಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಮಾತನಾಡಿ, ಸಾಮಾನ್ಯ ವ್ಯಕ್ತಿಯನ್ನು ವಿಶ್ವದ ಪ್ರತಿನಿಧಿಯಾಗಿಸುವ ಶಕ್ತಿ ಶಿಕ್ಷಣಕ್ಕಿದೆ. ಜಗತ್ತಿನ ಸಮಸ್ಯೆಗಳನ್ನು ಶಿಕ್ಷಣ ಮೂಲಕ ಸರಿಪಡಿಸಲು ಮಾತ್ರ ಸಾಧ್ಯ. ದೇಶದ 138 ಕೋಟಿ ಜನಸಂಖ್ಯೆ ಇದ್ದು, ವಿದ್ಯಾರ್ಥಿಗಳು ಸರ್ಕಾದರ ಸೌಲಭ್ಯ ಪಡೆದು ಸಮಾಜದ ಕೈಗನ್ನಡಿಯಾಗಿ, ತಮ್ಮ ಬದುಕನ್ನು ವಿದ್ಯೆ ಮೂಲಕ ಪರಿವರ್ತಿಸಿಕೊಳ್ಳಬೇಕು ಎಂದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಎಚ್.ಜಂಗಮಶೆಟ್ಟಿ ಅವರು ಮಾತನಾಡಿದರು. ಸಮಾರಂಭದಲ್ಲಿ ಹೊಸಳ್ಳಿ ಗ್ರಾ.ಪಂ. ಅಧ್ಯಕ್ಷೆ ರೇಷ್ಮಾಬಾನು, ಗ್ರಾ.ಪಂ.ಸದಸ್ಯ ನಿಂಗಪ್ಪ ನಿಂಬಣ್ಣನವರ, ಆಡಳಿತಾಧಿಕಾರಿ ಡಾ. ಪ್ರಶಾಂತ್ ಎಚ್.ವೈ, ಸುರೇಶ ಯತ್ನಳ್ಳಿ, ರುದ್ರಪ್ಪ, ಎ.ಎನ್ ಮಲ್ಲಣ್ಣನವರ ಭೋದಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.