ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗ್ಗೇರಿ ಕೆರೆ ತುಂಬಿ ಹರಿದವು ನಾಲೆಗಳು

ಮಣ್ಣಿನ ಗುಡ್ಡ ಒಡೆದು ಅವಾಂತರ * ನೀರು ವ್ಯರ್ಥವಾಗಿ ಕೆರೆ ಬರಿದಾಗುವ ಭೀತಿ
Last Updated 15 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಹಾವೇರಿ: ಹೆಗ್ಗೇರಿ ಕೆರೆ ತುಂಬಿ ಯುಟಿಪಿ ಕಾಲುವೆಗಳಲ್ಲಿ ನೀರು ಹರಿಯುತ್ತಿರುವ ಸಂಭ್ರಮ ಗ್ರಾಮಸ್ಥರಿಗಾದರೆ, ಕೆರೆ ಅಂಚಿನಲ್ಲಿದ್ದ ಮಣ್ಣಿನ ಗುಡ್ಡ ಒಡೆದು ನೀರು ಜಮೀನುಗಳತ್ತ ನೀರು ನುಗ್ಗುತ್ತಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಯುಟಿಪಿ ಕಾಲುವೆ ನಿರ್ಮಾಣದ ವೇಳೆ ಅಗೆಯಲಾಗಿದ್ದ ಮಣ್ಣನ್ನು ಕೆರೆಯ ಅಂಚಿಗೆ ಗುಡ್ಡದಂತೆ ಹಾಕಿ, ನೀರು ಹೊರಗೆ ಬಾರದಂತೆ ಬಂದೋಬಸ್ತ್ ಮಾಡಲಾಗಿತ್ತು. ಆದರೀಗ ಕೆರೆಯಲ್ಲಿ ನೀರಿನ ಸಂಗ್ರಹ ಹೆಚ್ಚಾಗಿರುವ ಕಾರಣ ಆ ಗುಡ್ಡವೇ ಹೊಡೆದು ನೀರು ಹೊರಗೆ ಧುಮ್ಮಿಕ್ಕಿದೆ.

‘ಕೆರೆ ತುಂಬಿದ್ದರಿಂದ ಮುಂದಿನ 2–3 ವರ್ಷ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ಭಾವಿಸಿದ್ದೆವು. ಆದರೆ, ನೀರು ವ್ಯರ್ಥವಾಗಿ ಹೊರಗೆ ಹೋಗುತ್ತಿರುವುದನ್ನು ನೋಡಿದರೆ, ಕೆರೆ ಖಾಲಿಯಾಗುತ್ತದೆ ಎಂಬ ಭಯ ಕಾಡುತ್ತಿದೆ. ಅಧಿಕಾರಿಗಳು ನೀರನ್ನು ಸಂಗ್ರಹಿಸಿಡಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋಡಿಹಳ್ಳಿ ಗ್ರಾಮದ ಸಂಗಪ್ಪ ಹಾಗೂ ಪದ್ಮರಾಜ ಕಳಸೂರ ಮನವಿ ಮಾಡಿದರು.

‘ಹಿಂದೆ ಕೆರೆ ತುಂಬಿದಾಗ ಇಷ್ಟೆಲ್ಲ ತೊಂದರೆ ಆಗಿರಲಿಲ್ಲ.ಆದರೆ, ಅವೈಜ್ಞಾನಿಕ ಯುಟಿಪಿ ಕಾಲುವೆ ಮಾಡಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಕೆರೆಗೆ ನೀರು ತುಂಬಿಸಬೇಕೆಂಬ ಉದ್ದೇಶದಿಂದ ಆ ಕಾಲುವೆಗಳನ್ನು ನಿರ್ಮಿಸಲಾಯಿತು. ಆದರೆ ಕೆರೆ ನೀರೇ ಕಾಲುವೆಗಳ ಮೂಲಕ ಹರಿದು ಹೋಗುತ್ತಿದೆ. ಯೋಜನೆಯ ಉದ್ದೇಶವೇ ಉಲ್ಟಾ ಹೊಡೆದಂತಾಗಿದೆ’ ಎಂದುಬೇಸರ ವ್ಯಕ್ತಪಡಿಸಿದರು.

‘682 ಎಕರೆ ವಿಸ್ತಿರ್ಣದಲ್ಲಿದ್ದ ಕೆರೆ ಈಗಾಗಲೇ ಒತ್ತುವರಿಯಿಂದ 400 ಎಕರೆಗೆ ಇಳಿದಿದೆ. ಒತ್ತುವರಿ ತಡೆಯುವ ಉದ್ದೇಶದಿಂದ ಹಿಂದೆ ಅಧಿಕಾರಿಗಳು ಕೆರೆಯ ಜಾಗವನ್ನು ಗುರುತಿಸಿ ಸರಹದ್ದಿಗೆ ಬದು ಕಟ್ಟಿದ್ದರು. ಆದರೂ ಕೆಲವರು ಒತ್ತುವರಿ ಮುಂದುವರಿಸಿ ಕೆರೆ ಜಾಗದಲ್ಲೇ ಕೃಷಿ ಚಟುವಟಿಕೆ ಮುಂದುವರಿಸಿದ್ದಾರೆ. ಕೆರೆಯ ಜಾಗ ಕದ್ದವರೇ ಹೆಚ್ಚಾಗಿ ಈಗ ಜಲಾಕ್ರೋಶಕ್ಕೆ ಗುರಿಯಾಗಿದ್ದಾರೆ’ ಎಂದು ಗ್ರಾಮದ ರಾಜು ತಿಳಿಸಿದರು.

‌ಬೆಳೆ ಮಧ್ಯೆನೀರು:‘ಇರುವ ಕಡಿಮೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿದ್ದೆವು. ಕಳೆದ ಕೆಲವು ದಿನಗಳಿಂದ ಹೊಲಗಳಲ್ಲಿ ನೀರು ನಿಂತು ಬೆಳೆಗಳು ಹಾಳಾಗಿವೆ.ಯುಟಿಪಿ ಕಾಲುವೆಗಳೂ ತುಂಬಿ ಹರಿಯುತ್ತಿರುವ ಕಾರಣ ಅರ್ಧ ಜಮೀನೂ ಹಾಳಾಗಿದೆ. ಈ ಭೂಮಿಯಲ್ಲಿ ಮುಂದೆಯೂ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ’ ಎಂದುರೈತ ಮಹಿಳೆ ಮಂಜುಳಾ ಬೇಸರ ವ್ಯಕ್ತಪಡಿಸಿದರು.

ಇಷ್ಟು ದಿನ ಬರಿದಾಗಿದ್ದ ನಾಲೆಗಳಲ್ಲಿ ಈಗ ನೀರು ಹರಿಯುತ್ತಿರುವುದರಿಂದ ಕೋಡಿಹಳ್ಳಿ ಸುತ್ತಮುತ್ತಲ ಕೆಲವು ಗ್ರಾಮಗಳ ನಿವಾಸಿಗಳಿಗೆ ದಿನಬಳಕೆಯ ಉಪಯೋಗಕ್ಕೆಅನುಕೂಲವಾಗುತ್ತಿದೆ. ಮಹಿಳೆಯರು ಭಾನುವಾರ ಹಾಗೂ ಸೋಮವಾರಬಟ್ಟೆ–‍ಪಾತ್ರೆಗಳನ್ನು ಕಾಲುವೆಗಳಲ್ಲೇ ತೊಳೆದರೆ, ಮಕ್ಕಳು ನೀರಿನಲ್ಲಿ ಈಜಿ ಸಂಭ್ರಮಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT