ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಹಾಜರಾಗಿ ಸಹಿ ಮಾಡದೆ ಹೋದರು!

ಹಿಂದಿನ ಸಭೆ ಅಧಿಕೃತವೋ? ಅನಧಿಕೃವೂ? * ಜಿ.ಪಂ ಸಭೆಯಲ್ಲಿ ಗದ್ದಲ ಸೃಷ್ಟಿಸಿದ ಪ್ರಶ್ನೆ
Last Updated 6 ಸೆಪ್ಟೆಂಬರ್ 2019, 14:50 IST
ಅಕ್ಷರ ಗಾತ್ರ

ಹಾವೇರಿ: ‘ಆ.8ರಂದು ನಡೆದ ಜಿಲ್ಲಾ ಪಂಚಾಯ್ತಿ ಸಭೆಗೆ ಹಾಜರಾಗಿದ್ದ ಸದಸ್ಯರ‍್ಯಾರೂ ಹಾಜರಾತಿಗೆ ಸಹಿ ಹಾಕಿಲ್ಲ. ಹೀಗಾಗಿ, ಆ ಸಭೆ ಅಧಿಕೃತವೋ? ಅನಧಿಕೃತವೋ? ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಅಂದು ನಡೆದ ಚರ್ಚೆಗಳು ಹಾಗೂ ತೆಗೆದುಕೊಂಡ ತೀರ್ಮಾನಗಳು ಮಾನ್ಯವೋ? ಅಲ್ಲವೋ? ಎಂಬುದನ್ನೂ ತಿಳಿಸಿ ನಂತರ ಇಂದಿನ ಸಭೆ ಪ್ರಾರಂಭಿಸಿ...’

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿ.ಪಂ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಅವರ ಮುಂದೆ ಸದಸ್ಯರಿಟ್ಟ ಈ ಪ್ರಶ್ನೆಗಳು ಭಾರಿ ಕೋಲಾಹಲ ಸೃಷ್ಟಿಸಿದವು.

‘ಆ.8ರಂದು ಸಭೆ ಕರೆದಿದ್ದಾಗ ಮೂರೂವರೆ ತಾಸು ಎಲ್ಲರೂ ಚರ್ಚೆಯಲ್ಲಿ ಪಾಲ್ಗೊಂಡಿದ್ದಿರಿ. ನೀವು ಹಾಜರಾತಿಗೆ ಸಹಿ ಮಾಡದೆ ಹೋದ ಮಾತ್ರಕ್ಕೆ ಅದು ಸಭೆಯೇ ಅಲ್ಲ ಎಂದು ಹೇಗೆ ಹೇಳುತ್ತೀರಿ’ ಎಂದು ಕರಿಯಣ್ಣನವರ ಕೆಂಡಾಮಂಡಲರಾದರು.

‘ಅಂದು ನಡೆದ ಚರ್ಚೆಗಳೆಲ್ಲ ರೆಕಾರ್ಡ್ ಆಗಿವೆ. ಅನುಮಾನವೇ ಬೇಡ. ಆ ಸಭೆ ಅಧಿಕೃತವೇ’ ಎಂದೂ ಅಧ್ಯಕ್ಷರು ಹೇಳಿದರು. ಆಗ ಪ್ರತಿಕ್ರಿಯಿಸಿದ ಸದಸ್ಯ ಏಕನಾಥ ಬಾನುವಳ್ಳಿ, ‘ನೀವು ಇಷ್ಟಬಂದಂತೆ ರೆಕಾರ್ಡ್ ಬರೆಸುತ್ತೀರಾ. ಅದನ್ನೆಲ್ಲ ನಾವು ಒಪ್ಪ‍ಲ್ಲ. ಕಾನೂನಿನ ಪ್ರಕಾರ ನಡೆದುಕೊಳ್ಳಿ’ ಎಂದರು.

ಅದಕ್ಕೆ ಕೆಲವು ಸದಸ್ಯರೂ ಧ್ವನಿಗೂಡಿಸಿ, ‘ನಾವೂ ಠರಾವನ್ನು ನೋಡಿದ್ದೇವೆ. ಸಭೆಯಲ್ಲಿ ಚರ್ಚೆಯಾದ ವಿಷಯಗಳೇ ಅದರಲ್ಲಿಲ್ಲ. ಎಲ್ಲ ಉಲ್ಟಾ–ಪಲ್ಟಾ ಮಾಡಿ ತಮ್ಮಿಷ್ಟದಂತೆ ಬರೆಯಲಾಗಿದೆ’ ಎಂದು ಆರೋಪಿಸಿದರು.

‘ಪಿವಿಸಿ ಪೈಪ್‌ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಆ ದಿನ ಮಹತ್ವದ ಚರ್ಚೆಗಳು ನಡೆದಿದ್ದವು. ರೈತರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಕೈಬಿಡುವಂತೆಯೂ ತೀರ್ಮಾನಿಸಲಾಗಿತ್ತು. ಈಗ ಸಭೆಯೇ ನಡೆದಿಲ್ಲ ಎಂದರೆ, ರೈತ ವಿರೋಧಿ ನಿಯಮ ತಾಳಿದಂತೆ ಅಗುವುದಿಲ್ಲವೇ? ಬೇಕಿದ್ದರೆ ಆ ವಿಚಾರವಾಗಿ ಮತ್ತೊಮ್ಮೆ ಠರಾವು ಬರೆಸೋಣ’ ಎಂದು ಕರಿಯಣ್ಣನವರ ಹೇಳಿದರು. ಅದಕ್ಕೆ ಒಪ್ಪಿದ ಸದಸ್ಯರು, ಮತ್ತೊಮ್ಮೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಜಿ.ಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ‘ಪೈಪ್ ಕಳವು ಪ್ರಕರಣದಲ್ಲಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಂದ ಕರ್ತವ್ಯ ಲೋಪವಾಗಿದೆ. ಹೀಗಾಗಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಆಯುಕ್ತರೇ ಆದೇಶಿಸಿದ್ದಾರೆ. ಆದರೂ ಈವರೆಗೆ ಯಾವುದೇ ಕ್ರಮವಾಗಿಲ್ಲ’ ಎಂದು ಠರಾವು ಬರೆಸಿದರು.

ನಂತರ ಶಾಸಕ ನೆಹರು ಓಲೇಕಾರ, ‘ಪೈಪ್‌ಗಳು ಕಳವಾಗಿರುವ ಸಂಬಂಧ ಕನವಳ್ಳಿ ರೈತರ ವಿರುದ್ಧ ದೂರು ಕೊಡುವಂತೆಕೊಟ್ರೇಶಪ್ಪ ಬಸೇಗಣ್ಣಿ ಅವರೇ ತಮ್ಮ ಮೇಲೆ ಒತ್ತಡ ಹೇರಿದ್ದಾಗಿ ಪಂಚಾಯತ್ ರಾಜ್‌ ಇಲಾಖೆ ಎಂಜಿನಿಯರ್ ವಿನಾಯಕ ಹುಲ್ಲೂರ ಹೇಳಿದ್ದಾರೆ. ರೈತರ ಸಲುವಾಗಿ ಮಾಡಿದ್ದ ಯೋಜನೆಗೆ ಬೆಂಬಲ ನೀಡಬೇಕಿದ್ದ ಬಸೇಗಣ್ಣಿ, ರೈತರ ವಿರುದ್ಧವೇ ಪ್ರಕರಣ ದಾಖಲಿಸುವಂತೆ ಹೇಳಿದ್ದು ಸರಿಯಲ್ಲ ಎಂಬ ಬಗ್ಗೆಯೂ ಆ.8ರ ಸಭೆಯಲ್ಲಿ ಚರ್ಚೆ ನಡೆದಿತ್ತು’ ಎಂದು ಬರೆಸಿದರು.

ಸಹಿ ಮಾಡದೆ ಹೋಗಿದ್ದೇಕೆ?

‘ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿ ₹ 43 ಕೋಟಿ ಮಂಜೂರಾಗಿದೆ. ಈ ಕುರಿತು ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಂಡು ಕೆಲವು ಕಾಮಗಾರಿಗಳನ್ನು ಶಿಫಾರಸು ಮಾಡಿದ್ದೆವು. ಆದರೆ, ಸಿಇಒ ಅವರು ನಾವು ಹೇಳಿದ ಅಂಶಗಳನ್ನು ಪರಿಗಣಿಸದೆ, ಅಧಿಕಾರಿಗಳು ತಯಾರಿಸಿಕೊಟ್ಟ ಪಟ್ಟಿ ಅನ್ವಯ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ’ ಎಂದು ಆರೋಪಿಸಿ ಜಿ.ಪಂ ಸದಸ್ಯರು ಆ.8ರ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT