ಸೋಮವಾರ, ಸೆಪ್ಟೆಂಬರ್ 23, 2019
27 °C
ಗಿರಿಜವ್ವ–ಸಹನಾ ನಡುವೆ ಪೈಪೋಟಿ * ಇಂದು ಚುನಾವಣೆ

ಜಿ.ಪಂ ಉಪಾಧ್ಯಕ್ಷರ ಸ್ಥಾನಕ್ಕೆ ಬಿರುಸಿನ ಸ್ಪರ್ಧೆ

Published:
Updated:
Prajavani

ಹಾವೇರಿ: ದೀಪಾ ಅತ್ತಿಗೇರಿ ಅವರ ರಾಜೀನಾಮೆಯಿಂದ ತೆರವಾಗಿರುವ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ನ ಮಹಿಳಾ ಸದಸ್ಯರು ತಮ್ಮ ಪತಿರಾಯರ ಮೂಲಕ ಪಕ್ಷದ ನಾಯಕರ ಮೇಲೆ ಒತ್ತಡ ಹೇರುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಇದೇ ಮೊದಲ ಬಾರಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದಲ್ಲಿರುವವರು 5 ವರ್ಷಗಳ ಕಾಲ ಅಧಿಕಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಅವಧಿಗೆ ಆಯ್ಕೆಯಾಗಿದ್ದ ಮಮ್ತಾಜಬಿ ತಡಸ ಪಕ್ಷದ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದರು. ಆ ನಂತರ 2ನೇ ಅವಧಿಗೆ ಉಪಾಧ್ಯಕ್ಷೆಯಾಗಿದ್ದ ದೀಪಾ ಅತ್ತಿಗೇರಿ ಕೂಡ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದಾರೆ.

ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿರುವ ಈ ಸ್ಥಾನಕ್ಕೆ, ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಎಲ್ಲ ಮಹಿಳಾ ಸದಸ್ಯರೂ ಅರ್ಹರಾಗಿದ್ದಾರೆ. ಹೀಗಾಗಿ ಬಿರುಸಿನ ಪೈಪೋಟಿ ಏರ್ಪಟ್ಟಿದ್ದು, ಉಪಾಧ್ಯಕ್ಷರ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮನೆ ಮಾಡಿದೆ.

ಆಕಾಂಕ್ಷಿಗಳು: ಕಬ್ಬೂರು ಕ್ಷೇತ್ರದ ಶಶಿಕಲಾ ಲಮಾಣಿ, ತುಮ್ಮಿನಕಟ್ಟಿ ಕ್ಷೇತ್ರದ ಗಿರಿಜವ್ವ ಬ್ಯಾಲದಹಳ್ಳಿ, ಯಲವಿಗಿ ಕ್ಷೇತ್ರದ ನೀಲವ್ವ ಚವ್ಹಾಣ, ಚಿಕ್ಕೇರೂರ ಕ್ಷೇತ್ರದ ಮಹಾದೇವಕ್ಕ ಗೋಪಕ್ಕಳಿ, ಹುರುಳಿಕುಪ್ಪಿ ಕ್ಷೇತ್ರದ ಸಹನಾ ದೊಡ್ಡಮನಿ, ಬೊಮ್ಮನಹಳ್ಳಿ ಕ್ಷೇತ್ರದ ಎಂ.ಪಠಾಣ, ತಿಳವಳ್ಳಿ ಕ್ಷೇತ್ರದ ರಾಜೇಶ್ವರಿ ಯಲ್ಲಪ್ಪ ಕಲ್ಲೇರ ಹಾಗೂ ಆಡೂರು ಕ್ಷೇತ್ರದ ಗೌರವ್ವ ಶೇತಸನದಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

‘ಸದ್ಯ ಹಿರೇಕೆರೂರು ತಾಲ್ಲೂಕಿನ ಎಸ್‌.ಕೆ.ಕರಿಯಣ್ಣನವರ ಅಧ್ಯಕ್ಷರಾಗಿದ್ದಾರೆ. ಹಿಂದೆ ಹಾವೇರಿ ತಾಲ್ಲೂಕಿನವರೂ ಅಧ್ಯಕ್ಷರಾಗಿದ್ದರು. ಹಾಗೆಯೇ, ಶಿಗ್ಗಾವಿ ತಾಲ್ಲೂಕಿನವರನ್ನು ಎರಡು ಅವಧಿಗೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಹೀಗಾಗಿ, ಈ ಮೂರು ತಾಲ್ಲೂಕಿನವರನ್ನು ಬಿಟ್ಟು ಬೇರೆ ತಾಲ್ಲೂಕಿನವರನ್ನು ಆಯ್ಕೆ ಮಾಡಬಹುದು. ಅದರಲ್ಲೂ ಎಸ್‍.ಟಿ ಸಮುದಾಯದ ಸದಸ್ಯರಿಗೆ ಅಧಿಕಾರ ಒಲಿಯುವ ಸಾಧ್ಯತೆ ಹೆಚ್ಚಿದೆ. ಗಿರಿಜವ್ವ ಬ್ಯಾಲದಹಳ್ಳಿ ಹಾಗೂ ಸಹನಾ ದೊಡ್ಡಮನಿ ನಡುವೆ ನೇರ ಸ್ಪರ್ಧೆ ಇದ್ದು, ಗಿರಿಜವ್ವ ಅವರನ್ನೇ ಆಯ್ಕೆ ಮಾಡಬಹುದು’ ಎಂದು ಜಿಲ್ಲಾ ಪಂಚಾಯ್ತಿ ಮೂಲಗಳು ಲೆಕ್ಕಾಚಾರ ಹಾಕಿವೆ.

ಮಧ್ಯಾಹ್ನ 1ಕ್ಕೆ ಚುನಾವಣೆ

ಶನಿವಾರ ಬೆಳಿಗ್ಗೆ 9 ರಿಂದ 11ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ನಂತರ ನಾಮಪತ್ರಗಳ ಪರಿಶೀಲನೆ, ಉಮೇದುವಾರಿಕೆಯನ್ನು ಹಿಂಪಡೆಯಲು ಅವಕಾಶ ಇರುತ್ತದೆ. ಮಧ್ಯಾಹ್ನ 1ಕ್ಕೆ ಚುನಾವಣೆ ನಡೆಯಲಿದೆ.

Post Comments (+)