ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‌ನಲ್ಲಿ ಪ್ರಗತಿಯ ಪಾಠ ಹೇಳಿಕೊಟ್ಟ ಎಚ್‌ಡಿಕೆ

‘ಬದುಕು ಹಸನುಗೊಳಿಸುವ ಶಾಶ್ವತ ಯೋಜನೆಗಳೇ ಅಭಿವೃದ್ಧಿಯ ಅರ್ಥ’
Last Updated 23 ಅಕ್ಟೋಬರ್ 2021, 15:40 IST
ಅಕ್ಷರ ಗಾತ್ರ

ಹಾನಗಲ್: ಹಾನಗಲ್ ಉಪ ಚುನಾವಣಾ ಕಣದಲ್ಲಿ ಎದ್ದಿರುವ ಬಿಜೆಪಿ–ಕಾಂಗ್ರೆಸ್ ನಾಯಕರ ಮಾತಿನ ಸಮರಕ್ಕೆ ಠಕ್ಕರ್‌ ಕೊಟ್ಟಿರುವ ಮಾಜಿ ಮುಖ್ಯಮಂತ್ರಿ, ಎಚ್‌.ಡಿ.ಕುಮಾರಸ್ವಾಮಿ, ಅಭಿವೃದ್ಧಿಯ ನಿಜ ಅರ್ಥದ ಪಾಠ ಹೇಳಿಕೊಟ್ಟರು.

ಶನಿವಾರ ಇಲ್ಲಿನ ಸಾದಾತ್‌ ದರ್ಗಾ ಮೈದಾನದಲ್ಲಿ ನಡೆದ ಜೆಡಿಎಸ್‌ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಅವರ ಮೇಲೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿವೃದ್ಧಿಯ ಪರಿಕಲ್ಪನೆಯೇ ಗೊತ್ತಿಲ್ಲ. ಹಾನಗಲ್‌ ಕ್ಷೇತ್ರದ ಅಭಿವೃದ್ಧಿ ಬಗ್ಗೆ ದೊಡ್ಡ ದೊಡ್ಡ ಸವಾಲುಹಾಕುತ್ತಿದ್ದಾರೆ. ಕೆಲವು ಕಟ್ಟಡಗಳ ನಿರ್ಮಾಣ, ರಸ್ತೆಗಳ ಸುಧಾರಣೆ ಅಭಿವೃದ್ಧಿ ಅಲ್ಲ. ಜನರ ಬದುಕು ಹಸನುಗೊಳಿಸುವ ಶಾಶ್ವತ ಯೋಜನೆಗಳು ಕ್ಷೇತ್ರದಲ್ಲಿ ನಡೆಯಬೇಕಾಗಿದೆ’ ಎಂದರು.

ಬಿಜೆಪಿ-ಕಾಂಗ್ರೆಸ್ ನಾಯಕರು ರಾಜಕೀಯವಾಗಿ ಲಾಭದ ಮಾತುಗಳನ್ನಾಡುತ್ತಿದ್ದಾರೆ. ಸದ್ಯ ಕೋವಿಡ್ ಸಂಕಷ್ಟದಿಂದ ಹೊರಬಂದ ಜನರ ನೆರವಿಗೆ ನಿಲ್ಲಬೇಕಾಗಿದೆ ಎಂದರು.

ನಾಯಕತ್ವ ಕೊರತೆ

‘ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಸಂಘಟನೆ ಕುಸಿಯುತ್ತಿದೆ. ಆದರೆ ಈ ಭಾಗದ ಜನ ನನ್ನನ್ನು ಪ್ರೀತಿಸುತ್ತಾರೆ ಎಂಬುದೂ ಅರಿವಿನಲ್ಲಿದೆ. ಜನತಾ ಪರಿವಾರದ ನಾಯಕರು ಬಿಜೆಪಿ ಮತ್ತು ಕಾಂಗ್ರೆಸ್ ಸೇರಿಕೊಂಡಿದ್ದ ಕಾರಣಕ್ಕಾಗಿ ಈ ಭಾಗದಲ್ಲಿ ಪಕ್ಷ ಸಾಧನೆ ತೋರುತ್ತಿಲ್ಲ’ ಎಂದರು.

‘ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಕಾಂಗ್ರೆಸ್‌ನವರು ನೋವು ಕೊಟ್ಟಿದ್ದಾರೆ. ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದೇನೆ. ಈಗ ಸಿದ್ದರಾಮಯ್ಯ ನಮ್ಮ ಪಕ್ಷದ ಬಗ್ಗೆ ಸಣ್ಣತನದ ಮಾತುಗಳನ್ನಾಡುತ್ತಿದ್ದಾರೆ’ ಎಂದರು.

ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಮಾತನಾಡಿ, ‘ಡಬಲ್‌ ಎಂಜಿನ್‌ ಸರ್ಕಾರ ಎಂದು ಬಿಜೆಪಿಗರು ಬೀಗುತ್ತಿದ್ದಾರೆ. ಬಿಜೆಪಿ ಸರ್ಕಾರ ಹೆಸರಿಗೆ ಮಾತ್ರ ಡಬಲ್ ಎಂಜಿನ್. ನಿಜವಾಗಿ ಡಬಲ್‌ ಅಲ್ಲ; ಡಕೋಟಾ’ ಎಂದರು.

ಅಭ್ಯರ್ಥಿ ನಿಯಾಜ್ ಶೇಖ್ ಮಾತನಾಡಿ, ‘ಅಭ್ಯರ್ಥಿ ಆಯ್ಕೆ ಎಲ್ಲರಿಗಿಂತ ಮುಂಚಿತವಾಗಿ ಘೋಷಣೆಯಾಗಿದ್ದರಿಂದ ಕ್ಷೇತ್ರದಲ್ಲಿ ಮತದಾರರನ್ನು ತಲುಪಲು ಸಾಧ್ಯವಾಗಿದೆ. ಕ್ಷೇತ್ರದಲ್ಲಿ ರೈತರು ಕೃತಜ್ಞತಾ ಭಾವದಿಂದ ಸ್ಪಂದನೆ ನೀಡುತ್ತಿದ್ದಾರೆ’ ಎಂದರು.

ಮುಖಂಡರಾದ ಎನ್.ಎಚ್.ಕೋನರೆಡ್ಡಿ, ಡಾ.ಸಯ್ಯದ್ ಮೊಹೀದ್ ಅಲ್ತಾಫ್, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಲಗೇರಿ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT