ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಅರಿವು ಮೂಡಿಸುತ್ತಿರುವ ಆರೋಗ್ಯ ಕೇಂದ್ರ 

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನ
Last Updated 8 ಜೂನ್ 2019, 16:33 IST
ಅಕ್ಷರ ಗಾತ್ರ

ಮಾಕನೂರು (ಕುಮಾರಪಟ್ಟಣ): ನಾಲ್ಕು ಗ್ರಾಮ ಪಂಚಾಯ್ತಿ ಸೇರಿ 30 ಸಾವಿರ ಜನಸಂಖ್ಯೆ ಇರುವ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಆರೋಗ್ಯ ಸುಧಾರಣೆಗೆ ಮುಂದಾಗಿದೆ.

ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ವಿವಿಧ ಗ್ರಾಮಗಳಿಂದ ಸಣ್ಣಪುಟ್ಟ ಕಾಯಿಲೆಗಳೊಂದಿಗೆ 60–70ಕ್ಕೂ ಹೆಚ್ಚು ಹೊರರೋಗಿಗಳು, 4–5 ಒಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್ಎಚ್ಎಂ)ದ ಅಡಿಯಲ್ಲಿ ಕಾಲ ಕಾಲಕ್ಕೆ ಮನೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸಿ ಜನರಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಅರಿವು ಮೂಡಿಸಲಾಗುತ್ತಿದೆ.

ಕ್ಷೇತ್ರ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಶಿಕ್ಷಣ ನೀಡುವುದರಿಂದ ಸಾಂಕ್ರಾಮಿಕ ರೋಗ, ಮಲೇರಿಯಾ, ಎಚ್1ಎನ್1, ಡೆಂಗಿ, ಚಿಕನ್‌ಗುನ್ಯ, ಕ್ಷಯ, ಅಸ್ತಮ, ಕುಷ್ಠರೋಗ, ಆನೆಕಾಲು ಜ್ವರ, ಸಾಮಾನ್ಯ ಜ್ವರ ಹರಡುವ ಪ್ರಮಾಣ ತಗ್ಗಿದೆ. ಈ ಮೊದಲು ಕ್ಷಯ ಹೆಚ್ಚಾಗಿ ಕಂಡು ಬರುತ್ತಿತ್ತು ಇದೀಗ ಕಡಿಮೆಯಾಗಿದೆ. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಜಾಂಡೀಸ್, ಧನುರ್ವಾಯು ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ವೈದ್ಯಾಧಿಕಾರಿ ಡಾ. ಎಂ.ರುಬಿಯಾ ಹೇಳುತ್ತಾರೆ.

ಗರ್ಭಿಣಿಯರಿಗಾಗಿ ಪ್ರಸವ ಪೂರ್ವಚಿಕಿತ್ಸೆ ಹಾಗೂ ಬಾಣಂತಿಯರಿಗೆ ಪ್ರಸವಾನಂತರ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಸಮಯಕ್ಕೆ ಸರಿಯಾಗಿ ದೇಹದ ತೂಕ, ರಕ್ತ ತಪಾಸಣೆ, ಕಬ್ಬಿಣಾಂಶದ ಮಾತ್ರೆ ನೀಡಿ ತಾಯಿ ಮಗುವಿನ ಆರೋಗ್ಯ ವೃದ್ಧಿಸುವಂತೆ ಮಾಡಲಾಗಿದೆ. ಮಾತೃ ವಂದನೆ ಕಾರ್ಯಕ್ರಮಗಳ ಮೂಲಕ ಪೌಷ್ಟಿಕಆಹಾರ ಸೇವಿಸುವಂತೆ ಮಾರ್ಗದರ್ಶನ ನೀಡಲಾಗುತ್ತಿದೆ’ ಎಂದು ಅವರು ವಿವರಿಸುತ್ತಾರೆ.

ನಮ್ಮಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ 1000ಕ್ಕೆ ಒಬ್ಬರಂತೆ ಪ್ರತಿ ಹಳ್ಳಿಯಲ್ಲೂ ಪ್ರಸ್ತುತ 26 ಮಂದಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಾರೆ. ಆಸ್ಪತ್ರೆಯ ವ್ಯಾಪ್ತಿಯಲ್ಲಿ ಬರುವ 32 ಅಂಗನವಾಡಿ ಕೇಂದ್ರಗಳ ಸಿಬ್ಬಂದಿಯ ಸಹಕಾರ ಪಡೆದು ಬೆಳವಣಿಗೆ ಕುಂಠಿತಗೊಂಡ (ಸ್ಯಾಮ್) ಮಕ್ಕಳನ್ನು ಗುರುತಿಸಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಪೌಡರ್ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ರಕ್ತ, ಮೂತ್ರ ಪರೀಕ್ಷೆ, ಬಿಪಿ, ಶುಗರ್ ಪರೀಕ್ಷೆ ಮಾಡುವ ಸೌಲಭ್ಯ ಇರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಚಿಕನ್‌ಗುನ್ಯ ಪ್ರಕರಣ ಮಾತ್ರ ದಾಖಲಾಗಿತ್ತು. ಅದು ಬಿಟ್ಟರೆ ಗಂಭೀರವಾದ ಪ್ರಕರಣ ಕಂಡು ಬಂದಿಲ್ಲ. ಪಿ. ಎಲ್. ಎಸ್ ನಮೂನೆಯಲ್ಲಿ ಹಾವೇರಿ ಜಿಲ್ಲೆಯ ಸಮಗ್ರ ರೋಗಗಳ ಕಣ್ಗಾವಲು ಕೇಂದ್ರಕ್ಕೆ ವಾರಕ್ಕೊಮ್ಮೆ ಮಾಹಿತಿ ಕಳುಹಿಸುತ್ತೇವೆ’ ಎಂದು ಔಷಧತಜ್ಞ ಬಸವರಾಜ ಎನ್.ಎ. ಹೇಳುತ್ತಾರೆ.

ಜನಸಂಖ್ಯೆ ಆಧಾರದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಿ ಸೌಲಭ್ಯ ಕಲ್ಪಿಸಿದರೆ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಿದೆ. ಹೆಚ್ಚು ಜನರುಆರೋಗ್ಯ ಕೇಂದ್ರದ ಕಡೆಗೆ ಮುಖ ಮಾಡಿದ್ದಾರೆ ಎಂದು ಗ್ರಾಮಸ್ಥರಾದ ರಾಜು ಬಣಕಾರ ಹಾಗೂ ಮಾಲತೇಶ್ಕಮ್ಮಾರ ತಿಳಿಸಿದರು.

ಆರೋಗ್ಯ ಕೇಂದ್ರದ ಮಾಹಿತಿ
‘1983ರಲ್ಲಿ ಆರಂಭಗೊಂಡ ಚಿಕ್ಕ ಘಟಕ ಸುಸಜ್ಜಿತ ಕಟ್ಟಡ, ಲ್ಯಾಬ್, 11 ಹಾಸಿಗೆ, 1 ವೀಲ್ ಚೇರ್, ನೀರಿನ ಸೌಲಭ್ಯ ಹಾಗೂ 4 ಪುರುಷ, 7ಮಹಿಳಾ ಕಿರಿಯ ಆರೋಗ್ಯ ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ಮಾಕನೂರು-2, ಕೊಡಿಯಾಲ-2, ಹುಲಿಕಟ್ಟಿ-1, ಕವಲೆತ್ತು-1, ಮುದೇನೂರು ಗ್ರಾಮದಲ್ಲಿ 1 ಉಪ ಆರೋಗ್ಯ ಕೇಂದ್ರವಿದೆ’ ಎಂದು ಆರೋಗ್ಯ ಕೇಂದ್ರದ ರಾಘವೇಂದ್ರ.ಪಿ ಮತ್ತು ಶಿವರಾಜ ಹರಪನಹಳ್ಳಿ ಮಾಹಿತಿ ನೀಡಿದರು.

*
ಸೇವೆ ಮಾಡುವುದಕ್ಕೆ ಹಳ್ಳಿ, ನಗರ ಎಂಬ ವ್ಯತ್ಯಾಸ ಇಲ್ಲ, ರೋಗಿಗಳಿಗೆ ಉಪಚರಿಸುವುದರ ಜೊತೆಗೆ ಮಾನಸಿಕವಾಗಿ ಗಟ್ಟಿಗೊಳಿಸಬೇಕು. ಜೀವ ಉಳಿಸಿ ವೃತ್ತಿಯಲ್ಲಿ ತೃಪ್ತಿ ಕಾಣಬೇಕಿದೆ.
- ಡಾ.ಎಂ.ರುಬಿಯಾ, ವೈದ್ಯಾಧಿಕಾರಿ, ಮಾಕನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT