ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಪಿಇ ಕೊರತೆ: ಸಿಬ್ಬಂದಿ ಪರದಾಟ

ಹಾನಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಿಲ್ಲ; ಮಾಸ್ಕ್‌ಗಳಿಗೂ ಬೇಡಿಕೆ
Last Updated 8 ಏಪ್ರಿಲ್ 2020, 12:31 IST
ಅಕ್ಷರ ಗಾತ್ರ

ಹಾನಗಲ್: ಹಾನಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕೈದು ದಿನಗಳ ಅಂತರದಲ್ಲಿ 1358 ಜನರನ್ನುಕೊರೊನಾ ಸಂಬಂಧ ತಪಾಸಣೆ ಮಾಡಲಾಗಿದೆ. ಆಸ್ಪತ್ರೆ ಅಂಗಳದಲ್ಲಿ ಕೊರೊನಾ ಸ್ಕ್ರಿನಿಂಗ್‌ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗಿದೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಟ್ಟಡ ಹೊರಭಾಗದಲ್ಲಿ ಒಪಿಡಿ ಮತ್ತು ‘ಫೀವರ್‌ ಕ್ಲಿನಿಕ್‌’ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ 2 ವೆಂಟಿಲೇಟರ್‌ ಇವೆ. ಎರಡು ಕೋವಿಡ್ ವಾರ್ಡ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ, ಅರವಳಿಕೆ ತಜ್ಞರ ಕೊರತೆ ಕಾಡುತ್ತಿದೆ.

ಕ್ವಾರಂಟೈನ್‌ ಮತ್ತು ಐಸೋಲೇಷನ್‌ಗಾಗಿ ತಾಲ್ಲೂಕಿನ ಅಕ್ಕಿಆಲೂರಿನ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆಯನ್ನು ಪರಿವರ್ತಿಸಲಾಗಿದೆ. ಕೊರೊನಾ ಲಕ್ಷಣಗಳನ್ನು ಹೊಂದಿದ ರೋಗಿಯ ಪ್ರಾಥಮಿಕ ತಪಾಸಣೆ ನಡೆಸಿ, ಅಗತ್ಯವೆನ್ನಿಸಿದರೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಪ್ರಾಥಮಿಕ ತಪಾಸಣೆಗೆ ಒಳಗಾದವರ ಪೈಕಿ 5 ಜನರ ಗಂಟಲು ದ್ರವ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎಲ್ಲರ ವರದಿ ನೆಗೆಟಿವ್‌ ಬಂದಿದೆ. 20 ಜನರಿಗೆ ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಹಾನಗಲ್ ಆಸ್ಪತ್ರೆಯಲ್ಲಿ 6 ವೈದ್ಯರು, 19 ಸ್ಟಾಫ್‌ ನರ್ಸ್‌ ಸೇರಿದಂತೆ ಒಟ್ಟು 80 ಜನ ಸಿಬ್ಬಂದಿ ಸೇವೆಯಲ್ಲಿ ತೊಡಗಿದ್ದಾರೆ. ಇವರಿಗೆ ಸ್ವ ಸುರಕ್ಷಾ ಕವಚ (ಪಿಪಿಇ) ಕೊರತೆ ಕಾಡುತ್ತಿದೆ. ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಮತ್ತಷ್ಟು ಬೇಕಾಗಿದೆ. ಪಿಪಿಇ ಪೂರೈಕೆಯಾಗುವ ಭರವಸೆ ಇದೆ. ಆದರೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಬೇಡಿಕೆಯಷ್ಟು ಮಾಸ್ಕ್, ಸ್ಯಾನಿಟೈಸರ್‌ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ರವೀಂದ್ರಗೌಡ ಪಾಟೀಲ ಹೇಳುತ್ತಾರೆ.

ಕೊರೊನಾ ಶಂಕಿತ ವ್ಯಕ್ತಿಯ ಜೊತೆ ನೇರವಾಗಿ ಸಂಪರ್ಕಕ್ಕೆ ಬರುವ ವೈದ್ಯರಿಗೆ ನಿತ್ಯ 3 ಬಾರಿ ಬಳಸುವ ಎನ್‌–95 ಮಾಸ್ಕ್‌, ಸಿಬ್ಬಂದಿ ಬಳಸುವ ತ್ರಿಲೇಯರ್‌ ಮಾಸ್ಕ್‌ಗಳು ಅಗತ್ಯಕ್ಕೆ ತಕ್ಕಷ್ಟು ಹಾನಗಲ್ ಆಸ್ಪತ್ರೆಗೆ ಪೂರೈಕೆಯಾಗುತ್ತಿಲ್ಲ.

45 ಪಿಪಿಇ ಕಿಟ್‌, 150 ಎನ್‌–95 ಮಾಸ್ಕ್‌, 900 ತ್ರಿಲೇಯರ್‌ ಮಾಸ್ಕ್‌ ಸಂಗ್ರಹವಿದೆ. ಸ್ಯಾನಿಟೈಸರ್‌ 10 ಲೀಟರ್‌ ಸ್ಟಾಕ್‌ ಇದೆ. ನಿತ್ಯ ಆಸ್ಪತ್ರೆಯನ್ನು ಬ್ಲೀಚಿಂಗ್‌ ಪೌಡರ್‌ ಮಿಶ್ರಣದ ಕೀಟನಾಶಕದಿಂದ ಸ್ವಚ್ಛಗೊಳಿಸಲಾಗುತ್ತಿದೆ. ಹಾಸಿಗೆಗಳನ್ನು ಶುಚಿಗೊಳಿಸಲಾಗುತ್ತಿದೆ ಎಂದು ಹಾನಗಲ್‌ ವೈದ್ಯಾಧಿಕಾರಿ ಅನ್ನಪೂರ್ಣ ತಿಳಿಸಿದರು.

ಸದ್ಯದ ಕೆಲಸ ನಿರ್ವಹಿಸಲು ಪಿಪಿಇ ಮತ್ತು ಮಾಸ್ಕ್‌ಗಳ ಸಂಗ್ರಹವಿದೆ. ಹೆಚ್ಚಿನ ಬೇಡಿಕೆಯನ್ನು ಇಲಾಖೆಗೆ ಸಲ್ಲಿಸಲಾಗಿದೆ. ಕೊರೊನಾ ಶಂಕಿತರನ್ನು ಇಲ್ಲಿ ದಾಖಲಿಸಿಕೊಳ್ಳುವುದಿಲ್ಲ. ಪ್ರಯೋಗಾಲಯ ಪರೀಕ್ಷೆಗಾಗಿ ಹಾವೇರಿ ಆಸ್ಪತ್ರೆಗೆ ಕಳಿಸಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT