ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೇ ದಿನದಲ್ಲಿ ವರ್ಷದ ಮಳೆ; ಮತ್ತೊಂದು ಸಾವು

ಪತ್ತೆಯಾಗಲಿಲ್ಲ ಕೊಚ್ಚಿ ಹೋದ ರೈತ * ಕೊಚ್ಚಿ ಹೋದವು 300 ಕುರಿಗಳು
Last Updated 7 ಆಗಸ್ಟ್ 2019, 19:10 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಮಳೆಯ ಅರ್ಭಟ ಮುಂದುವರಿದಿದ್ದು, ನದಿ ಪಾತ್ರದ ಜನ ಪ್ರವಾಹದ ಭೀತಿಯಲ್ಲೇ ದಿನ ಕಳೆದರು. ಆಯತಪ್ಪಿ ಧರ್ಮಾ ನದಿಗೆ ಬಿದ್ದಿದ್ದ ರೈತನ ಪತ್ತೆಗೆ ಅಗ್ನಿಶಾಮಕ ಇಲಾಖೆ ಕಾರ್ಯಾಚರಣೆ ಮುಂದುವರಿಸಿದ್ದು, ಈ ನಡುವೆಯೇ ಕೊಂಡೋಜಿ ಗ್ರಾಮದಲ್ಲಿಸುರೇಶ ಯಲ್ಲಪ್ಪ ಕಾಡನವರ (38) ಎಂಬುವರು ಕೆರೆಯಲ್ಲಿ ಮುಳುಗಿ ಅಸುನೀಗಿದ್ದಾರೆ.ನರೇಗಲ್ ಭಾಗದಲ್ಲಿ ಬುಧವಾರ ಸುಮಾರು 300 ಕುರಿಗಳು ವರದಾ ನದಿಯಲ್ಲಿ ಕೊಚ್ಚಿ ಹೋಗಿವೆ.

‘ವಾಡಿಕೆ ಪ್ರಕಾರ ಜಿಲ್ಲೆಯ ವಾರ್ಷಿಕ ಮಳೆ 792.7 ಮಿ.ಮೀ. ಆದರೆ, ಎರಡು ದಿನಗಳಲ್ಲೇ 801 ಮಿ.ಮೀ (ಸೋಮವಾರ–477, ಮಂಗಳವಾರ–331) ವರುಣಧಾರೆ ಆಗಿದೆ. ಆಗಸ್ಟ್‌ ಮೊದಲ ವಾರದಲ್ಲೇ ಮಳೆ ಪ್ರಮಾಣ ಸಾವಿರ ಮಿ.ಮೀ ದಾಟಿದೆ. ಇನ್ನೂ ಎರಡು ದಿನ ಈ ಅಬ್ಬರ ಮುಂದುವರಿಯಲಿದ್ದು, ಪ್ರವಾಹ ಸೃಷ್ಟಿಯ ಆತಂಕ ಹೆಚ್ಚಿದೆ’ ಎಂದು ಜಿಲ್ಲಾಡಳಿದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

389 ಮನೆ ಕುಸಿತ: ‘ವಾರದಿಂದೀಚೆಗೆ ಸುರಿದ ಮಳೆಯಲ್ಲಿ ಹಾವೇರಿ ತಾಲ್ಲೂಕಿನಲ್ಲಿ 114, ರಾಣೇಬೆನ್ನೂರಿನಲ್ಲಿ 16, ಬ್ಯಾಡಗಿಯಲ್ಲಿ 38, ಹಿರೇಕೆರೂರಿನಲ್ಲಿ 15, ಸವಣೂರಿನಲ್ಲಿ 85, ಶಿಗ್ಗಾವಿಯಲ್ಲಿ 58, ಹಾನಗಲ್‍ನಲ್ಲಿ 63 ಸೇರಿ ಜಿಲ್ಲೆಯಲ್ಲಿ ಒಟ್ಟು 389 ಮನೆಗಳು ಹಾನಿಯಾಗಿವೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ ಸ್ವಲ್ಪ ಹೊತ್ತು ಬಿಡುವು ಕೊಟ್ಟಿದ್ದ ಮಳೆ, ಜನ ನಿಟ್ಟುಸಿರು ಬಿಡುವ ಮೊದಲೇ ಮತ್ತೆ ಧರೆಗೆ ಅಪ್ಪಳಿಸಿತು. ಹೊಲಗಳೆಲ್ಲ ಹೊಳೆಗಳಂತಾಗಿದ್ದು, ರೈತರು ಮಳೆಯ ನಡುವೆಯೇ ಕಾಲುವೆ ತೋಡಿ ನೀರು ಹೊರ ಹರಿಯುವಂತೆ ಮಾಡುತ್ತಿದ್ದರು. ಮೂರು ಗಂಜಿಕೇಂದ್ರಗಳನ್ನು ತೆರೆಯಲಾಗಿದ್ದು, ಮನೆ ಕಳೆದುಕೊಂಡ 200ಕ್ಕೂ ಹೆಚ್ಚು ಮಂದಿಗೆ ಅಲ್ಲಿ ಊಟ–ವಸತಿಯ ವ್ಯವಸ್ಥೆ ಮಾಡಲಾಗಿದೆ.

ಹಾನಗಲ್: ಧಾರಾಕಾರ ಮಳೆಯಿಂದ ಉಕ್ಕೇರಿ ಹರಿಯುತ್ತಿರುವ ಧರ್ಮಾ, ವರದಾ ನದಿಗಳು ನೆರೆಯ ಭೀತಿ ಸೃಷ್ಠಿಸುತ್ತಿವೆ. ಕೊಂಡೋಜಿ ಗ್ರಾಮದ ಸುರೇಶ ಯಲ್ಲಪ್ಪ, ಕಾಲು ಜಾರಿ ಮನೆ ಹಿಂದಿನ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.ಅಲ್ಲಾಪೂರಾ ಗ್ರಾಮದ ಇನಾಮ್ದಾರ್ ಕುಟುಂಬಕ್ಕೆ ಸೇರಿದ 300ಕ್ಕೂ ಹೆಚ್ಚು ಕುರಿ, ಮೇಕೆಗಳನ್ನು ವರದಾ ನದಿ ಆಪೋಷನ ಪಡೆಯಿತು.

ಬುಧವಾರ ಬೆಳಿಗ್ಗೆ ಶಿರಸಿ–ಹಾವೇರಿ ರಸ್ತೆಯಲ್ಲಿ ಬಸ್‌ ಮೇಲೆ ಮರ ಉರುಳಿ ಬಿದ್ದಿತು. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ತಾಲ್ಲೂಕಿನ ಮಂತಗಿ ಗ್ರಾಮದ ರಾಜ್ಯ ಪ್ರಶಸ್ತಿ ಕೃಷಿಕ ಮುತ್ತಣ್ಣ ಪೂಜಾರ ಅವರ ಅಡಿಕೆ ತೋಟ ಸಂಪೂರ್ಣ ಹಾನಿಯಾಗಿದೆ. ಸುಮಾರು 50 ಸಾವಿರ ಅಡಿಕೆ ಸಸಿಗಳು ಹಾಗೂ 5 ಸಾವಿರ ತೆಂಗು ಸಸಿಗಳುಕೊಚ್ಚಿ ಹೋಗಿವೆ. 8 ಎಕರೆಯಲ್ಲಿ ನಾಟಿ ಮಾಡಿದ್ದ 25 ದೇಸಿ ತಳಿಯ ಭತ್ತದ ಸಸಿಗಳೂ ಹಾನಿಯಾಗಿವೆ.

ಧರ್ಮಾ ಜಲಾಶಯ ಭರ್ತಿಯಾಗಿ, ಹೆಚ್ಚುವರಿ ನೀರು ನದಿಯನ್ನು ಸೇರಿಕೊಳ್ಳುತ್ತಿದೆ. ಹೀಗಾಗಿ ಧರ್ಮಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ವರದಾ ನದಿಯ ಒಳ ಹರಿವೂ ಹೆಚ್ಚಾಗಿದ್ದು, ಸುತ್ತಲಿನ ಕೃಷಿ ಭೂಮಿಯತ್ತ ನೀರು ನುಗ್ಗಿದೆ.ತಾಲ್ಲೂಕಿನ ಅಲ್ಲಾಪೂರ ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ವೈದ್ಯಕೀಯ ಶಿಬಿರ, ಊಟ, ಬಟ್ಟೆ, ಹಾಸಿಗೆ ಮತ್ತಿತರ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ಕೈಗೊಂಡಿದೆ.

ಶಿಗ್ಗಾವಿ:ಪಟ್ಟಣದ ಐತಿಹಾಸಿಕ ಕೆರೆಯಾದ ನಾಗನೂರ ಕರೆ ಕೊಡಿಬಿದ್ದು, ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿನ ವಾಹನಗಳ ಸಂಚಾರಕ್ಕೆ ಸ್ವಲ್ಪ ಸಮಯ ತಡೆತಡೆ ಉಂಟಾಯಿತು. ಅದರಿಂದ ನೂರಾರು ಎಕರೆ ಎಲೆ ಬಳ್ಳಿ ತೋಟ, ಭತ್ತ, ಶೇಂಗಾ, ಸೋಯಾ ಬೆಳೆಗಳಿಗೆ ನೀರು ನುಗ್ಗಿ ನಷ್ಟ ಉಂಟಾಯಿತು. ಮುಗಳಿ ಗ್ರಾಮದ ಕೆರೆಯೂ ಕೋಡಿ ಬಿದ್ದಿದೆ.

ತಾಲ್ಲೂಕಿನ ಅಂದಲಗಿ, ಕೋಣನಕೇರಿ ಗ್ರಾಮಗಳ ನಡುವಿನ ಸುಮಾರು 9 ಎಕರೆ ಬಾಳೆ ಬೆಳೆ ಜಲಾವೃತವಾಗಿದೆ. ಹೋತ್ನಹಳ್ಳಿ, ಮಾಸನಕಟ್ಟಿ ಮಾರ್ಗವಾಗಿ ಬಂಕಾಪುರ ಹಾಗೂ ಶಿಗ್ಗಾವಿಗೆ ಬರುವ ಮಾರ್ಗದಲ್ಲಿ ದೊಡ್ಡ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಯಿತು.

ರಾಣೆಬೆನ್ನೂರು:ಕುಪ್ಪೇಲೂರು ಗ್ರಾಮದ ಬಸವಂತಪ್ಪ ಎಂಬುವರಿಗೆ ಕೋಳಿ ಪಾರ್ಮ್‌ನಲ್ಲಿ ಇಡೀ ದಿನ ವಿದ್ಯುತ್ ಕಡಿತ ಉಂಟಾಗಿ 13 ದಿನದ 200 ಕೋಳಿ ಮರಿಗಳು ಹಾಗೂ 37 ದಿನಗಳ 300 ಕೋಳಿಗಳು ಸತ್ತು ಹೋಗಿವೆ.

ತುಂಗಭದ್ರಾ ನದಿ ತೀರದ ಪ್ರದೇಶಗಳ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ತಹಶೀಲ್ದಾರ ಸಿ.ಎಸ್‌. ಕುಲಕರ್ಣಿ ಹಾಗೂ ಸಿಬ್ಬಂದಿ, ಎತ್ತರದ ಪ್ರದೇಶಗಳಿಗೆ ಹೋಗಲು ಹಾಗೂ ಪಂಪ್‌ಸೆಟ್‌ಗಳನ್ನು ಮೇಲಕ್ಕೆ ಒಯ್ಯಲು ಗ್ರಾಮಸ್ಥರಿಗೆ ಸೂಚಿಸಿದರು. ಜಲಾವೃತವಾಗಿರುವಚೌಡಯ್ಯದಾನಪುರ ಮತ್ತು ಚಂದಾಪುರ ಗ್ರಾಮದಲ್ಲಿ ಜಮೀನುಗಳನ್ನು ಪರಿಶೀಲಿಸಿದರು.

ತಾಲ್ಲೂಕಿನ ಮೇಡ್ಲೇರಿ, ಹೀಲದಹಳ್ಳಿ, ಉದಗಟ್ಟಿ, ಕುದರಿಹಾಳ, ಹರನಗಿರಿ, ಚಿಕ್ಕಕುರುವತ್ತಿ, ಚಂದಾಪುರ, ಚೌಡಯ್ಯ ದಾನಪುರದ ಬಳಿ ತುಂಗ ಭದ್ರಾ ನದಿ ನೀರಿನ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಗುರುವಾರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಬ್ಯಾಡಗಿ: ತಾಲ್ಲೂಕಿನಲ್ಲಿ ಮಂಗಳವಾರ 27 ಹಾಗೂ ಬುಧವಾರ 63 ಮನೆಗಳು ಭಾಗಶಃ ಹಾನಿಯಾಗಿದ್ದು, ₹ 13.5 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ‘ಚಿಕ್ಕಬಾಸೂರ ಗ್ರಾಮದ ಕೆರೆ ತುಂಬಿದ ಪರಿಣಾಮ, 25 ಹೆಕ್ಟೇರ್ ಭತ್ತ, ಹತ್ತಿ ಹಾಗೂ ಗೋವಿನ ಜೋಳದ ಬೆಳೆಗೆ ನೀರು ನುಗ್ಗಿ ₹ 3 ಲಕ್ಷ ಮೌಲ್ಯದ ಬೆಳೆ ನಷ್ಟವಾಗಿದೆ’ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

‘ಪಟ್ಟಣದ ಗುಡ್ಡದ ಮಲ್ಲೇಶ್ವರ ಆಶ್ರಯ ಬಡಾವಣೆಗೆ ಹೋಗುವ ರಸ್ತೆಯಲ್ಲಿ ನೀರು ನಿಂತಿದ್ದು ಅದನ್ನು ಪುರಸಭೆ ತೆರವುಗೊಳಿಸಿದೆ. ಶಿವಪುರ ಬಡಾವಣೆಯಲ್ಲಿ ಚಿಕ್ಕನಕಟ್ಟಿ ಕೆರೆ ನೀರು ಮನೆಗಳಿಗೆ ನುಗ್ಗದಂತೆ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಹೇಳಿದರು.

ತಾಲ್ಲೂಕಿನಹಳೆಪೇಟೆ ಓಣಿಯಲ್ಲಿ ಕುಸಿದ ಮಲ್ಲಾಡದ ಅವರ ಮನೆಗೆ ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಹಾಗೂ ಸದಸ್ಯ ಮಂಜಣ್ಣ ಬಾರ್ಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರಾಶ್ರಿತರಿಗೆ ಸಮೀಪದಸ್ವಾತಂತ್ರ್ಯಯೋಧರ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಹಿರೇಕೆರೂರು: ಮಾಸೂರು ಮತ್ತು ಮಳಗಿ ಗ್ರಾಮಗಳ ಹದ್ದಿನಲ್ಲಿ ಹಾದು ಹೋಗುವ ಕುಮದ್ವತಿ ನದಿಗೆ ಮದಗ ಕೆರೆಯಿಂದ ನೀರಿನ ಹರಿವು ಹೆಚ್ಚಾಗಿದೆ. ‘ಮಳಗಿ ಗ್ರಾಮದ ಸೇತುವೆ ನಿರ್ಮಾಣ ಹಂತದಲ್ಲಿದೆ. ಹಿನ್ನೀರಿನ ಹರಿವು ಹೆಚ್ಚಾಗಿರುವುದರಿಂದ ದೋಣಿ ಬಳಕೆ ಸ್ಥಗಿತಗೊಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇನೆ. ಮುಂಜಾಗ್ರತಾ ಕ್ರಮವಾಗಿಆ ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿದೆ’ ಎಂದು ತಹಶೀಲ್ದಾರ್ ಆರ್.ಎಚ್.ಭಗವಾನ್ ಹೇಳಿದ್ದಾರೆ.

ಗುತ್ತಲ: ತುಂಗಭದ್ರ ಮತ್ತು ವರದಾ ನದಿಯ ಹಿನ್ನಿರಿನಿಂದ ಕಂಚಾರಗಟ್ಟಿ, ಹರಳಹಳ್ಳಿ, ಹಾವನೂರ, ಹಾಂವಶಿ, ಗಳಗನಾಥ, ಹುರಳಿಹಾಳ, ಮೇವುಂಡಿ, ತೇರದಹಳ್ಳಿ ಸೇರಿದಂತೆ ಸುಮಾರು 24 ಗ್ರಾಮಗಳ ಬೆಳೆಗಳು ನಾಶವಾಗಿವೆ.

ಹಾವೇರಿ–ಧಾರವಾಡ ಮಾರ್ಗ ಬದಲಿಸಿ

ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4 ನಿಪ್ಪಾಣಿ ಹತ್ತಿರ ಹೆದ್ದಾರಿ ಬಿರುಕು ಬಿಟ್ಟು ಸಂಚಾರ ಸ್ಥಗಿತಗೊಂಡಿದೆ. ಈ ಕಾರಣಕ್ಕೆ ಹಾವೇರಿಯಿಂದ ಧಾರವಾಡ ಕಡೆಗೆ ಹೋಗುವ ವಾಹನಗಳನ್ನು ಶಿಗ್ಗಾವಿ, ಲಕ್ಷ್ಮೇಶ್ವರ ಮುಖಾಂತರ ಗದಗ ಮಾರ್ಗವಾಗಿ ವಿಜಯಪುರ ಮುಂತಾದಕಡೆ ಸಂಚರಿಸಲು ಜಿಲ್ಲಾಧಿಕಾರಿ ಕೃಷ ಬಾಜಪೇಯಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರ-ಪೂನಾಕ್ಕೆ ಬರುವ ಹಾಗೂ ಹೋಗುವ ವಾಹನಗಳ ಸಂಚಾರ ಸಂಪೂರ್ಣ ನಿಲುಗಡೆಯಾಗಿದೆ. ಧಾರವಾಡ ಜಿಲ್ಲೆಯ ಸರಹದ್ದಿನಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 4ರ ಎರಡು ಬದಿಯಲ್ಲಿ ವಾಹನಗಳು ನಿಲುಗಡೆಯಾಗಿವೆ. ಮುಂದುವರೆದು ಬರುವ ವಾಹನಗಳಿಗೆ ಸ್ಥಳವಕಾಶವಿಲ್ಲದಾಗಿದೆ. ಕಾರಣ ಮೇಲಿನಂತೆ ಮಾರ್ಗ ಬದಲಾಯಿಸಿ ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 31ರಲ್ಲಿ ಅಧಿಕಾರದನ್ವಯ ಸಂಚರಿಸಲು ಅವಕಾಶ ಮಾಡಿಕೊಟ್ಟು ಆದೇಶ ಹೊರಡಿಸಲಾಗಿದೆ.

ಇಂದು, ನಾಳೆ ಶಾಲೆಗೆ ರಜೆ

ಮಳೆಯ ಕಾರಣದಿಂದ ಎಲ್ಲಾ ಅನುದಾನಿತ, ಅನುದಾನರಹಿತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಕಾಲೇಜುಗಳಿಗೆ ಆ.9ರವರೆಗೆ ರಜೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಎರಡು ದಿನದ ಮಳೆ ಪ್ರಮಾಣ

ತಾಲ್ಲೂಕು; ಸೋಮವಾರ; ಮಂಗಳವಾರ

ಹಾವೇರಿ;75.6;56.5

ರಾಣೆಬೆನ್ನೂರು;51.4;20

ಬ್ಯಾಡಗಿ;62.6;33

ಹಿರೇಕೆರೂರು;74.2;53.4

ಸವಣೂರು;55.2;45.59

ಶಿಗ್ಗಾವಿ;‌59.4;59

ಹಾನಗಲ್;99.2;64.4

ಒಟ್ಟು;477;331

––––––


08378-255044

ನಿಯಂತ್ರಣ ಕೊಠಡಿ ಸಂಖ್ಯೆ

**
08375-249102

ಜಿಲ್ಲೆಯ ಸಹಾಯವಾಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT