ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಯಾದ ರಸ್ತೆ; ಕೊಚ್ಚಿ ಹೋದ ಕುರಿಗಳು

ಹಾವೇರಿ ನಗರದಲ್ಲಿ ಮತ್ತೆ ಮಳೆ ಅಬ್ಬರ; ವಾಹನ ಸವಾರರ ಪಡಿಪಾಟಲು
Last Updated 9 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಹಾವೇರಿ: ನಗರದ ವಿವಿಧೆಡೆ ಬುಧವಾರ ಸಂಜೆಯೂ ಭಾರೀ ಮಳೆ ಸುರಿಯಿತು. ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ತೊಂದರೆ ಅನುಭವಿಸಿದರೆ, ಹಾನಗಲ್ ರಸ್ತೆಯ ಸರಸ್ವತಿ ಚಿತ್ರಮಂದಿರದ ಬಳಿ ಹತ್ತಕ್ಕೂ ಹೆಚ್ಚು ಕುರಿಗಳುನೀರಿನಲ್ಲಿ ಕೊಚ್ಚಿ ಹೋಗಿ ಅಸುನೀಗಿದವು.

ಸಂಜೆ 5.30ರ ಸುಮಾರಿಗೆ ಶುರುವಾದ ಮಳೆ, ಗುಡುಗಿನ ಅಬ್ಬರದ ಜತೆ ಸುಮಾರು ಎರಡು ತಾಸು ಆರ್ಭಟಿಸಿತು. ಜೋರು ಗಾಳಿ ಬೀಸಿದ್ದರಿಂದ ಕೆಲವಡೆ ಮರದ ಕೊಂಬೆಗಳು ನೆಲಕ್ಕುರುಳಿದವು. ಪಿ.ಬಿ.ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿತ್ತು.

ಬಸ್ ನಿಲ್ದಾಣದ ಒಳಗೆ ಹಾಗೂ ಹೊರಗಿನ ಪ್ರದೇಶ ಹೊಳೆಯ ಸ್ವರೂಪ ತಾಳಿದ್ದರಿಂದ, ವಾಹನಗಳು ಆಮೆಗತಿಯಲ್ಲಿ ಸಂಚರಿಸುತ್ತಿದ್ದವು. ಇದರಿಂದ ದಟ್ಟಣೆ ಉಂಟಾಗಿ, ಸವಾರರ ಜತೆ ಪೊಲೀಸರೂ ಪಡಿಪಾಟಲು ಅನುಭವಿಸಿದರು.

‘ದೇವಗಿರಿ ಹೊರಗಿನ ಕೆರೆಯ ಕೋಡಿ ಒಡೆದು, ನೀರು ಗ್ರಾಮಕ್ಕೆ ನುಗ್ಗಿದೆ. ಇದರಿಂದಾಗಿ ಕೆಲವರನ್ನು ದೇವಸ್ಥಾನಗಳಿಗೆ ಹಾಗೂ ಎತ್ತರದ ಪ್ರದೇಶದಲ್ಲಿರುವ ಮನೆಗಳಿಗೆ ಸ್ಥಳಾಂತರ ಮಾಡಿದ್ದೇವೆ. ಆದಷ್ಟು ಬೇಗ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ದೇವಗಿರಿಯ ಮಾಲತೇಶ್ ತಿರಕಣ್ಣನವರ ಮನವಿ ಮಾಡಿದರು.

ನೆಹರೂನಗರ, ಬಸವೇಶ್ವರನಗರ, ಶಿವಾಜಿನಗರ, ಅಶ್ವಿನಿನಗರ, ಶಾಂತಿನಗರ, ಶಿವಬಸವೇಶ್ವರನಗರ ಸೇರಿದಂತೆ ನಗರದ ಪ್ರಮುಖ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.

‘ನಮ್ಮ ಬಡಾವಣೆಯಲ್ಲಿ ತಿಂಗಳಿನಿಂದ ಬೀದಿ ದೀಪಗಳು ಉರಿಯುತ್ತಿಲ್ಲ. ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೊಳಚೆ ನೀರು ರಸ್ತೆ ಮೇಲೆ ಹರಿದು, ಈಗ ಹಾವು–ಚೇಳುಗಳ ಕಾಟ ಶುರುವಾಗಿದೆ. ಕಗ್ಗತ್ತಲಲ್ಲಿ ಓಡಾಡುವುದಕ್ಕೂ ಭಯವಾಗುತ್ತಿದೆ’ ಎಂದು ನೆಹರೂನಗರದ ನಿವಾಸಿಯಾದ ರೈಲ್ವೆ ಇಲಾಖೆ ನಿವೃತ್ತ ನೌಕರ ಶಿವಪ್ಪ ಅಳಲು ತೋಡಿಕೊಂಡರು.

ಡೇಂಜರಸ್ ಸ್ಪಾಟ್:‘ವಾರದ ಹಿಂದೆ ಸರಸ್ವತಿ ಚಿತ್ರಮಂದಿರದ ಬಳಿ ಶಾಲಾ ಬಾಲಕಿಯರು ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಅವರನ್ನು ದಾರಿಹೋಕರು ರಕ್ಷಿಸಿದ್ದರು. ಈಗ ಅದೇ ಜಾಗದಲ್ಲಿ ಕುರಿಗಳು ಕೊಚ್ಚಿ ಹೋಗಿವೆ. ತಗ್ಗು ಪ್ರದೇಶದಲ್ಲಿ ಚರಂಡಿ ನಿರ್ಮಿಸಿರುವ ಕಾರಣ ಇದು ಮಳೆಗಾಲದ ‘ಡೇಂಜರಸ್ ಸ್ಪಾಟ್’ ಆಗಿ ಬದಲಾಗಿದೆ. ಹೀಗಾಗಿ, ಇಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಹಾನಗಲ್ ರಸ್ತೆ ನಿವಾಸಿ ಮರ್ದಾನ್ ಸಾಬ್ ನದಾಫ್ ಮನವಿ ಮಾಡಿದರು.

ಜಿಲ್ಲೆಯಲ್ಲಿ ವಾರದಿಂದೀಚಿಗೆ ಸುರಿದ ಮಳೆ ವಿವರ

ತಾಲ್ಲೂಕು;ಮಳೆ ಪ್ರಮಾಣ (ಮಿ.ಮೀ)

ಹಾವೇರಿ;151.4

ರಾಣೆಬೆನ್ನೂರು;155.6

ಬ್ಯಾಡಗಿ;76

ಹಿರೇಕೆರೂರು;63

ಸವಣೂರು;80.8

ಶಿಗ್ಗಾವಿ;134.4

ಹಾನಗಲ್;217.4

ಒಟ್ಟು; 878.6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT