ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತ್ತಿವೆ– ಸೊರಗುತ್ತಿವೆ ಐತಿಹಾಸಿಕ ದೇಗುಲಗಳು

ಪ್ರವಾಸಿಗರಿಗೆ ಮೂಲಸೌಕರ್ಯ ಮರೀಚಿಕೆ: ಪುರಾತತ್ವ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
Last Updated 6 ಡಿಸೆಂಬರ್ 2021, 5:28 IST
ಅಕ್ಷರ ಗಾತ್ರ

ಹಾವೇರಿ: ‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಎನಿಸಿರುವ ಹಾವೇರಿ ಜಿಲ್ಲೆ ಐತಿಹಾಸಿಕ ಸ್ಥಳ ಮತ್ತು ಪ್ರಾಚೀನ ಸ್ಮಾರಕಗಳಿಂದ ಕೂಡಿದ ಸಂಪದ್ಭರಿತ ಪ್ರದೇಶವಾಗಿದೆ. ಇತಿಹಾಸದ ಹೆಜ್ಜೆ ಗುರುತುಗಳನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುವ ಈ ನೆಲದಲ್ಲಿ ಮೊಗೆದಷ್ಟೂ ಅಚ್ಚರಿಗಳು ಹೊರಬರುತ್ತವೆ.

ಹಾವೇರಿ ನಗರದ ಪುರಸಿದ್ಧೇಶ್ವರ, ಗಳಗನಾಥದ ಗಳಗೇಶ್ವರ, ಹರಳಹಳ್ಳಿಯ ಸೋಮೇಶ್ವರ, ಚೌಡದಾನಪುರದ ಮುಕ್ತೇಶ್ವರ, ರಟ್ಟೀಹಳ್ಳಿಯ ಕದಂಬೇಶ್ವರ, ಬಾಳಂಬೀಡದ ಕಲ್ಮೇಶ್ವರ, ನರೇಗಲ್‌ನ ಸರ್ವೇಶ್ವರ, ಹಾನಗಲ್‌ನ ತಾರಕೇಶ್ವರ, ಬಿಲ್ಲೇಶ್ವರ, ವೀರಭದ್ರೇಶ್ವರ ಹಾಗೂ ಬಂಕಾಪುರದ ನಗರೇಶ್ವರ ದೇವಸ್ಥಾನಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುವ ಐತಿಹಾಸಿಕ ಸ್ಮಾರಕಗಳಾಗಿವೆ. ಈ ದೇಗುಲಗಳ ಸುತ್ತಲಿನ 300 ಮೀಟರ್‌ ಪ್ರದೇಶ ನಿರ್ಬಂಧಿತ ಪ್ರದೇಶವಾಗಿದೆ.

ಕಿಡಿಗೇಡಿಗಳ ವಿಕೃತಿ:

ಅಪರೂಪದ ಶಿಲ್ಪಕಲೆ, ಶಾಸನಗಳು, ಸ್ಮಾರಕಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೂ ಉಳಿಸಿಕೊಡುವ ಗುರುತರವಾದ ಜವಾಬ್ದಾರಿ ಇಲಾಖೆಯದ್ದಾಗಿದೆ. ಸಾರ್ವಜನಿಕರ ಸಹಕಾರ ಮತ್ತು ಕಾಳಜಿಯೂ ಅತ್ಯಗತ್ಯವಾಗಿದೆ. ಆದರೆ, ಸ್ಮಾರಕಗಳ ಮೇಲೆ ಕಲ್ಲಿನಿಂದ ಕೆತ್ತುವುದು, ವಿಕೃತಿ ಬರಹಗಳನ್ನು ಬರೆಯುವುದು, ಶಿಲ್ಪಕಲೆಗಳನ್ನು ಹಾಳುಗೆಡಹುವ ಕೃತ್ಯಗಳನ್ನು ಕಿಡಿಗೇಡಿಗಳು ಮಾಡಿರುವುದಕ್ಕೆ ಅಲ್ಲಲ್ಲಿ ಸಾಕ್ಷ್ಯಗಳು ಸಿಗುತ್ತವೆ.

ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ದೇಗುಲದ ಒಳಗೆ ಬೆಳಕು, ಕಾಂಪೌಂಡ್‌, ದೇಗುಲದ ಮಹತ್ವ ತಿಳಿಸುವ ನಾಮಫಲಕಗಳು ಮುಂತಾದ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಇಲಾಖೆ ಕಲ್ಪಿಸದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವಲ್ಲಿ ಜಿಲ್ಲೆಯ ಐತಿಹಾಸಿಕ ಸ್ಥಳಗಳು ವಿಫಲವಾಗಿವೆ.

ಸಿಬ್ಬಂದಿ ಕೊರತೆ:

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಹೊಸ ನೇಮಕಾತಿಯಾಗದ ಕಾರಣ ಕೆಲವು ದೇಗುಲಗಳ ಸಂರಕ್ಷಣೆಗೆ ಸಿಬ್ಬಂದಿಯೇ ಇಲ್ಲದಂತಾಗಿದೆ. ಗುತ್ತಿಗೆ ಆಧಾರಿತ ಸಿಬ್ಬಂದಿ ಅಲ್ಲಲ್ಲಿ ಕಾಣಸಿಗುತ್ತಾರೆ. ಅಲ್ಲಲ್ಲಿ ಸೋರುವ ಗುಡಿಗಳು, ಶಿಥಿಲಾವಸ್ಥೆ ತಲುಪಿದ ಸ್ಮಾರಕಗಳ ದುರಸ್ತಿಗೆ ಕೇಂದ್ರ ಕಚೇರಿಯಿಂದ ಅನುಮೋದನೆ ಮತ್ತು ಅನುದಾನ ಬಿಡುಗಡೆ ವಿಳಂಬವಾಗುತ್ತಿರುವುದರಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಕೆಲವು ಕಡೆ ಪಾಳುಬಿದ್ದ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಇಲಾಖೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂಬ ವ್ಯಾಪಕ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಜೀರ್ಣೋದ್ಧಾರಕ್ಕೆ ಅನುದಾನದ ಕೊರತೆ

ಸವಣೂರ: ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ತಾಲ್ಲೂಕಿನಾದ್ಯಂತ ಸುಮಾರು 55 ದೇವಸ್ಥಾನಗಳಿದ್ದು ಅವುಗಳ ಸ್ವಚ್ಛತೆಮತ್ತು ದೇವರ ಪೂಜಾ ಕೈಂಕರ್ಯಕ್ಕಾಗಿ ವಾರ್ಷಿಕ ಪ್ರತಿ ದೇವಸ್ಥಾನಕ್ಕೆ ₹41 ಸಾವಿರ ಹಣವನ್ನು ಸರ್ಕಾರ ನೀಡುತ್ತಿದೆ. ಅವುಗಳ ಜೀರ್ಣೋದ್ಧಾರಕ್ಕಾಗಿ ಯಾವುದೇ ರೀತಿಯ ಅನುದಾನ ಸರ್ಕಾರದಿಂದ ಜಮಾವಣೆಯಾಗದೆ ಇರುವುದರಿಂದ ಇಲಾಖೆಯಿಂದ ಬಿಡುಗಡೆ ಮಾಡಿಲ್ಲ. ಪೂಜಾರಿಗಳ ಜೀವನ ನಿರ್ವಹಣೆಗೆ ಮಾತ್ರ ಪ್ರತಿವರ್ಷ ಬಿಡುಗಡೆ ಮಾಡಲಾಗುತ್ತದೆ ಎಂದು ಸವಣೂರ ತಹಶೀಲ್ದಾರ್‌ ಅರುಣಕುಮಾರ ತಿಳಿಸಿದರು.

ಪಾಳುಬಿದ್ದ ಗುಡಿಗಳು

ರಾಣೆಬೆನ್ನೂರು: ತಾಲ್ಲೂಕಿನ ಐತಿಹಾಸಿಕ ಸ್ಥಳಗಳು ವಿಭಿನ್ನ ಹಾಗೂ ವಿಶಿಷ್ಟ. ಚೌಡಯ್ಯದಾನಪುರ, ನರಸೀಪುರ, ಹಳೇ ಹೊನ್ನತ್ತಿ, ಹೊಳೆ ಆನ್ವೇರಿ, ಅಂತರವಳ್ಳಿ, ಗುಡಗೂರ, ಮೈದೂರ ಗ್ರಾಮಗಳಲ್ಲಿ ಪುರಾತನ ಇತಿಹಾಸ ಹೊಂದಿದ ದೇವಸ್ಥಾನಗಳಿವೆ.

ಈಗಿನ ಹಳೇ ಹೊನ್ನತ್ತಿಯು 13ನೇ ಶತಮಾನದ ಇತಿಹಾಸ ಹೊಂದಿದೆ. ಇಲ್ಲಿ ಸೂರ್ಯ ನಾರಾಯಣ, ಕಲ್ಮೇಶ್ವರ, ಹಾಲಶಂಕರ, ಬಸವಣ್ಣ ಸೇರಿದಂತೆ ವಿವಿಧ ಉದ್ಭವ ಮೂರ್ತಿ ಲಿಂಗುಗಳ ದೇವಸ್ಥಾಗಳಿವೆ. ಎಲ್ಲ ಗುಡಿಗಳು ಹಾಳು ಕೊಂಪೆಯಾಗಿದ್ದು ಜೂಜು ಕೋರರ ಅಡ್ಡೆಯಾಗಿವೆ. ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಸುತ್ತಲೂ ಮುಳ್ಳಿನ ಕಂಠಿಗಳು ಬೆಳೆದಿವೆ. ಪುರಾತತ್ವ ಇಲಾಖೆ ಜೀರ್ಣೋದ್ದಾರಕ್ಕೆ ಮುಂದಾಗಿಲ್ಲ. ಕಾವಲುಗಾರರು ಇಲ್ಲ ಎಂಬುದು ಗ್ರಾಮಸ್ಥರ ದೂರು.

ಸೋರುತಿಹುದು ಕದಂಬೇಶ್ವರ ದೇವಾಲಯ

ರಟ್ಟೀಹಳ್ಳಿ: ಪಟ್ಟಣದ ಕೋಟೆ ಭಾಗದಲ್ಲಿರುವ ಕದಂಬೇಶ್ವರ ದೇವಾಲಯವು ಕ್ರಿ.ಶ. 11ನೇ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿತಗೊಂಡ ಸುಂದರ ತ್ರಿಕೂಟಾಚಲವಾಗಿದೆ. ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.

ಕದಂಬೇಶ್ವರ ದೇವಸ್ಥಾನ ಮಳೆ ಬಂದಿತೆಂದರೆ ಗರ್ಭಗೃಹ ಸೇರಿದಂತೆ ಒಳಗಡೆ ನೀರು ನಿಲ್ಲುತ್ತದೆ. ದೇವಸ್ಥಾನದ ಒಳಗಡೆ ವಿದ್ಯುತ್ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಕತ್ತಲೆ ಆವರಿಸಿರುತ್ತದೆ. ಇದರಿಂದ ದೇಗುಲ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ, ಭಕ್ತರಿಗೆ ತೊಂದರೆಯಾಗಿದೆ.

ಕದಂಬೇಶ್ವರ ದೇವಸ್ಥಾನದ 100 ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ ನಿರ್ಬಂಧ ಹೇರಿರುವುದರಿಂದ ದೇವಸ್ಥಾನದ ಅಕ್ಕ-ಪಕ್ಕದಲ್ಲಿನ ಹಳೆಯ ಮನೆಯ ದುರಸ್ತಿ ಕಾರ್ಯಕೈಗೊಳ್ಳಲು ಸಾಧ್ಯವಾಗದೇ ಅನೇಕ ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಲಾಖೆಯವರು ಈ ಬಗ್ಗೆ ಗಮನಹರಿಸಬೇಕು ಎಂದು ಕೋಟೆ ನಿವಾಸಿ ಸುಶೀಲ ನಾಡಗೇರ ಒತ್ತಾಯಿಸುತ್ತಾರೆ.

ಸ್ಮಾರಕ ರಕ್ಷಣೆ; ಇಲಾಖೆ ಹೊಣೆ

ಶಿಗ್ಗಾವಿ: ಬಂಕಾಪುರಕೋಟೆ ಆವರಣದಲ್ಲಿರುವ 66 ಕಂಬಗಳ ನಗರೇಶ್ವರ ದೇವಾಲಯ ಕ್ರಿ.ಶ.1090ರಲ್ಲಿ ಕಲ್ಯಾಣ ಚಾಲುಕ್ಯರ 6ನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣವಾಗಿದ್ದು, ಜಕಣಾಚಾರ್ಯರು ಅದನ್ನು ಕಟ್ಟಿದ್ದಾರೆ.

ಈ ದೇವಸ್ಥಾನದ ಸುತ್ತ ಉದ್ಯಾನ ನಿರ್ಮಿಸಬೇಕು. ಕುಡಿಯುವ ನೀರು, ಶೌಚಾಲಯ, ಆಸನ ಸೇರಿದಂತೆ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಕೋಟೆ ಆವರಣದಲ್ಲಿರುವ ಸ್ಮಾರಕಗಳ ರಕ್ಷಣೆ ಕಾರ್ಯ ಮಾಡಬೇಕು. ಅವುಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸುವಂತಾಗಬೇಕು ಎಂದು ಸಮಾಜ ಸೇವಕ ಮಂಜುನಾಥ ಕೂಲಿ ಒತ್ತಾಯಿಸುತ್ತಾರೆ.

ಉತ್ಖನನದಿಂದ ಹೊರಬರಲಿ ಪ್ರಾಚೀನ ನಿಧಿ!

ಹಾನಗಲ್: ಈ ಪಟ್ಟಣವನ್ನು ರಾಜಧಾನಿ ಮಾಡಿಕೊಂಡು ಹಾನಗಲ್ ಕದಂಬರು ಸುಮಾರು 4 ಶತಮಾನ ವೈಭವದ ಆಡಳಿತ ನಡೆಸಿದ್ದರು ಎಂಬುದು ಶಾಸನಗಳ ಉಲ್ಲೇಖ.ತಾರಕೇಶ್ವರ, ಬಿಲ್ಲೇಶ್ವರ ದೇವಸ್ಥಾನ ಪ್ರಾಚ್ಯವಸ್ತು ಇಲಾಖೆ ಅಡಿಯಲ್ಲಿ ಸಂರಕ್ಷಣೆಗೆ ಒಳಪಟ್ಟಿವೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ.

ಪ್ರಾಚೀನ ಸ್ಮಾರಕಗಳು, ಅಪರೂಪದ ಕಲಾ ಕುಸುರಿಯ ದೇವಸ್ಥಾನಗಳು ನಮ್ಮ ಸಂಸ್ಕೃತಿಕ ಪ್ರತೀಕ. ಇವುಗಳ ರಕ್ಷಣೆ ನಮ್ಮ ಜವಾಬ್ದಾರಿ. ಬಿಲ್ಲೇಶ್ವರ ದೇವಸ್ಥಾನ ಮುಂಭಾಗದ ಹಳೆಕೋಟಿ ಎನ್ನಿಸಿಕೊಳ್ಳುವ ಪ್ರದೇಶದಲ್ಲಿ ವ್ಯವಸ್ಥಿತ ಉತ್ಖನನದ ಮೂಲಕ ಹುದುಗಿಹೋದ ದೇವಸ್ಥಾನಗಳು, ಸ್ಮಾರಕಗಳನ್ನು ರಕ್ಷಿಸಬೇಕು ಎಂದು ಇಲ್ಲಿನ ನಿವಾಸಿ ಮಾರ್ತಾಂಡರಾವ್‌ ಪಾರಗಾವಕರ ಆಗ್ರಹಿಸುತ್ತಾರೆ.

ಆಮೆಗತಿಯಲ್ಲಿ ಅಭಿವೃದ್ಧಿ ಕಾರ್ಯ

ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದ ಗವಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ₹15 ಲಕ್ಷ ಬಿಡುಗಡೆಯಾಗಿದ್ದು, ಪ್ರಾಚೀನ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಗ್ರಾಮದ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಾಜು ರುದ್ರದೇವರಮಠ ಹೇಳಿದರು.

ತಾಲ್ಲೂಕಿನಲ್ಲಿ ಶಿಡೇನೂರ, ಹಿರೇಹಳ್ಳಿ ಗ್ರಾಮದ ಪ್ರಾಚೀನ ದೇವಸ್ಥಾನಗಳನ್ನು ಪ್ರಾಚ್ಯವಸ್ತು ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿದೆ. ಶಿಡೇನೂರ ಗ್ರಾಮದ ಹೊರವಲಯದಲ್ಲಿರುವ ವೀರಭದ್ರೇಶ್ವರ ದೇವಸ್ಥಾನವನ್ನು ₹1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು ಕಾಂಪೌಂಡ್‌ ಮತ್ತಿತರ ಕೆಲಸ ಬಾಕಿ ಇದೆ. ಪ್ರಾಚ್ಯವಸ್ತು ಇಲಾಖೆಯಲ್ಲಿ ಹುದ್ದೆಗಳು ಪ್ರಭಾರಿಯಲ್ಲಿ ನಡೆಯುತ್ತಿವೆ. ಹೀಗಾಗಿ ಕೆಲಸ ನಿಧಾನಗತಿಯಲ್ಲಿ ಸಾಗಿದೆ ಎಂದು ಸಂಶೋಧಕ ಷಡಕ್ಷರಿಮಠ ಮಾಹಿತಿ ನೀಡಿದರು.

ಗ್ರಾಮಸ್ಥರೇ ದಾನಿಗಳಿಂದ ಮತ್ತು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಸೂರ್ಯ ನಾರಾಯಣ (ಪದ್ಮನಾಭ) ದೇವಾಲಯ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ.

ಹೊಸ ನೇಮಕಾತಿಯಾಗದ ಕಾರಣ ಸಿಬ್ಬಂದಿ ಕೊರತೆಯಿದೆ. ಮೂಲ ಕಲಾತ್ಮಕತೆಗೆ ಧಕ್ಕೆಯಾಗದಂತೆ ಸ್ಮಾರಕಗಳನ್ನು ಸಂರಕ್ಷಿಸುತ್ತಿದ್ದೇವೆ
– ವಿ.ಎಸ್‌.ಬಡಿಗೇರ, ಅಧೀಕ್ಷಕರು, ಧಾರವಾಡ ವಲಯ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ

ಭೀಮನು ಗದೆಯಿಂದ ಗುದ್ದಿ ನೀರು ತೆಗೆದ ಸ್ಥಳ ಭೀಮನದೋಣಿ. ಸರ್ಕಾರ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕಿದೆ
– ಸುಧೀರ ಕುರುವತ್ತಿ, ಜಿ.ಜಿ.ಹೊಟ್ಟಿಗೌಡ್ರ, ವರ್ತಕರು

ಬಂಕಾಪುರದ ನಗರೇಶ್ವರ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆಗೆ ಅವಕಾಶ ಕಲ್ಪಿಸಬೇಕು. ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕು
– ಎ.ಕೆ.ಆದವಾನಿಮಠ, ಸಾಹಿತಿ

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಎಂ.ವಿ.ಗಾಡದ, ಕೆ.ಎಚ್‌.ನಾಯಕ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT