ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಸಿದ್ಧೇಶ್ವರನ ನೆಲೆವೀಡು ‘ಹಲಗೇರಿ’

ಇಲ್ಲಿನ ‘ಬೆಳ್ಳುಳ್ಳಿ ಸಂತೆ’ ರಾಜ್ಯದಲ್ಲೇ ಪ್ರಸಿದ್ಧ: ‘ಪಾಪು’ ಆಡಿ ಬೆಳೆದ ಊರು
Last Updated 14 ಆಗಸ್ಟ್ 2021, 13:08 IST
ಅಕ್ಷರ ಗಾತ್ರ

ರಾಣೆಬೆನ್ನೂರು:ಇಲ್ಲಿ ‘ಹಾಲಸಿದ್ಧೇಶ್ವರ’ ದೇವಾಲಯ ಇರುವುದರಿಂದ ಈ ಗ್ರಾಮಕ್ಕೆ ‘ಹಲಗೇರಿ’ ಎಂಬ ಹೆಸರು ಬಂದಿತು ಎಂಬ ಪ್ರತೀತಿ ಇದೆ.

ಹಾಲಸಿದ್ಧೇಶ್ವರನಿಂದ ಪ್ರಸಿದ್ಧಿ ಪಡೆದ ‘ಹಲಗೇರಿ’ 900 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಇದಕ್ಕೆ ಅನೇಕ ಪುರಾವೆಗಳಿವೆ. ಅಂದು ಹಲಗೇರಿಯು ರಟ್ಟಿಹಳ್ಳಿ ಆಡಳಿತ ಕೇಂದ್ರಕ್ಕೆ ಒಳಪಡುತ್ತಿತ್ತು. ಊರಿನಲ್ಲಿಯ ಹೊಂಡದ ಮೇಲಿರುವ ಕ್ರಿ.ಶ 1404ರ ಶಾಸನದಲ್ಲಿ ಈ ಗ್ರಾಮವನ್ನು ‘ಹಲಿಗೆರೆ’ ಎಂದು ನಮೂದಿಸಲಾಗಿದೆ. ಕೆಲವು ಬ್ರಿಟಿಷರ ದಾಖಲೆಗಳಲ್ಲಿ ‘ಹಲಗೆರೆ’ ಎಂದು ದಾಖಲಾಗಿದೆ.

ಊರ ಮಧ್ಯದಲ್ಲಿಯ ಪುರಾತನವಾದ ಹಾಲಸಿದ್ಧೇಶ್ವರ ದೇವಸ್ಥಾನವು 11-12ನೇ ಶತಮಾನದಲ್ಲಿ (ಕಲ್ಯಾಣ ಚಾಲುಕ್ಯರ ಕಾಲದಲ್ಲಿ) ನಿರ್ಮಾಣವಾಗಿದೆ. ಇಲ್ಲಿ ಪುರಾತನವಾದ ಗವಿಯೊಂದಿತ್ತು. ಈಗ ಅದನ್ನು ಮುಚ್ಚಲಾಗಿದೆ. ಇದರ ಪಕ್ಕದಲ್ಲಿರುವ ಚಿಕ್ಕ ದೇವಾಲಯವನ್ನು ‘ಉಜಿನೆಪ್ಪ ಅಥವಾ ಜೆಟ್ಟೆಪ್ಪನ ದೇವಸ್ಥಾನ’ ಎಂದು ಕರೆಯುತ್ತಾರೆ.

ಹಾಲಸಿದ್ಧೇಶ್ವರ ಜಾತ್ರೆಯು ಪ್ರತಿವರ್ಷ ಮಾರ್ಚ್‌ ತಿಂಗಳಲ್ಲಿ (ಬನದ ಹುಣ್ಣಿಮೆ) ನಡೆಯುತ್ತದೆ. ಪೇಟೆಯ ಮಧ್ಯದಲ್ಲಿಯ ಆಂಜನೇಯ ದೇವಾಸ್ಥಾನವು ಪುರಾತನ ದೇವಸ್ಥಾನವಾಗಿದ್ದು, ಅದರ ಆವರಣದಲ್ಲಿ ಗಜಲಕ್ಷ್ಮೀ ಹಾಗೂ ಶಿವ-ಪಾವ೯ತಿ ವಿಗ್ರಹಗಳಿವೆ.

ಸಂತ ಹಜರತ್ ಜಮಾಲಷಾವಲಿಯವರು ಕ್ರಿ.ಶ 1785ರಂದು ಅಜ್ಮೀರ್‌ನಿಂದ ಆಗಮಿಸಿದ್ದರು, ಇವರು ಇಲಿ, ಬೆಕ್ಕು, ನಾಯಿ, ಚಿಗರಿ ಹಾಗೂ ಹಾವುಗಳನ್ನು ಒಂದೇ ಹಗ್ಗದಲ್ಲಿ ಕಟ್ಟಿಕೊಂಡು ದೊಡ್ಡಕೆರೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಹಲಗೇರಿಯಲ್ಲಿ ಇವರ ‘ಬೈಸಾಕಿಯು’ (ಕುಳಿತ ಪವಿತ್ರ ಸ್ಥಳ) ಈಗ ಪೇಟೆಯಲ್ಲಿ ದರ್ಗಾ ರೂಪವನ್ನು ಪಡೆದಿದೆ. ‘ಗುಳಗಿ’ ಸಂತರ ದರ್ಗಾವನ್ನು ಸಹ ಊರಿನಲ್ಲಿ ನೋಡಬಹುದು.

‘ಹಲಗೇರಿಯಲ್ಲಿ ಕ್ರಿ.ಶ 1914ರಲ್ಲಿ ಬಸವ ಸ್ವಾಮೀಜಿ ಜನಿಸಿದರು. ಧಾರವಾಡದಲ್ಲಿ ವಿಧ್ಯಾಭ್ಯಾಸ ಮುಗಿಸಿ ತಮ್ಮ 18 ನೇ ವಯಸ್ಸಿನಲ್ಲಿ ಪಟ್ಟಾಧಿಕಾರವನ್ನು ವಹಿಸಿಕೊಂಡರು. ಇಲ್ಲಿ 4 ಗದ್ದುಗೆಗಳು ಅಂದು ಸ್ಥಾಪನೆಗೊಂಡವು. ದೊಡ್ಡಪೇಟೆಯ ಪುಟ್ಟಯ್ಯನ ಮಠದ ಶಾಖಾಮಠವಾದ ಹಲಗೇರಿಯ ವಿರಕ್ತಮಠವು (ಆರಾಧ್ಯ ಮಠವು) ಈಗ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ’ ಎಂದು ಸಿದ್ದಣ್ಣ ಕಡೂರ ತಿಳಿಸಿದರು.

250 ವರ್ಷಗಳ ಹಿಂದೆ ಹಲಗೇರಿಯ ‘ನಾಯಕ’ ಎಂಬ ಕುಟುಂಬದವರು ರಾಣೆಬೆನ್ನೂರಿನ ಕೋಟೆ ಭಾಗದಲ್ಲಿ ಬಂದು ನೆಲಸಿದರು. ಇವರನ್ನು ಹಲಗೇರಿ ನಾಯಕರು ಎಂದು ಜನಸಾಮಾನ್ಯರು ಕರೆಯುತ್ತಾರೆ. ಇವರ ವಂಶಸ್ಥ ತಮ್ಮಣ್ಣ ನಾಯಕ ಲೋಕ ಕಲ್ಯಾಣಕ್ಕಾಗಿ ಹಲಗೇರಿಯಲ್ಲಿ ಕೆರೆಯೊಂದನ್ನು ಕಟ್ಟಿಸಿದನು. ಅಂತರವಳ್ಳಿ ರಸ್ತೆಯಲ್ಲಿರುವ ಕೆರೆಗೆ ಈಗಲೂ ‘ತಮ್ಮಣ್ಣ ನಾಯಕನ ಕೆರೆ’ ಎಂದು ಕರೆಯುತ್ತಾರೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಪಿಡಿಒ ಚಿನ್ನಪ್ಪ ಹೊನ್ನಪ್ಪ ಕುದರಿಹಾಳ.

ಸಾಹಿತಿ, ‘ನಾಡೋಜ’ ಪ್ರಶಸ್ತಿ ಪುರಸ್ಕೃತ ದಿವಂಗತ ಡಾ.ಪಾಟೀಲ ಪುಟ್ಟಪ್ಪನವರು ಆಡಿ ಬೆಳೆದ ಗ್ರಾಮವಾಗಿದೆ ಹಲಗೇರಿ.ಈ ಗ್ರಾಮದಲ್ಲಿ ಪ್ರತಿ ಗುರುವಾರ ನಡೆಯುವ ‘ಬೆಳ್ಳುಳ್ಳಿ ಸಂತೆ’ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ.

ಖ್ಯಾತ ರಂಗನಟ ದಿ.ದೊಡ್ಡ ಜಟ್ಟೆಪ್ಪ ಮುದ್ಧಪ್ಪಳವರು ಹಲಗೇರಿಯಲ್ಲಿ ‘ಹಾಲಸಿದ್ಧೇಶ್ವರ ನಾಟ್ಯ ಸಂಘ’ ಹುಟ್ಟು ಹಾಕಿದ್ದರು. ಡೊಳ್ಳು, ಕೋಲಾಟ, ಹೆಜ್ಜೆ ಮೇಳ, ನಾಟಕ ಕಲಾವಿದರು, ಭಜನೆ, ಸೋಬಾನೆ ಪದ ಹಾಡುವ ಕಲಾವಿದರು ಇದ್ದಾರೆ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಕನ್ನಪ್ಪಳವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT