ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಸಮ್ಮೇಳನ: ಸಾಹಿತ್ಯಾಸಕ್ತರಿಗೆ ಶೇಂಗಾ ಹೋಳಿಗೆ, ಮೈಸೂರು ಪಾಕ್‌!

35 ಎಕರೆಯಲ್ಲಿ ಕಿಚನ್‌ ಮತ್ತು ಡೈನಿಂಗ್‌ ವ್ಯವಸ್ಥೆ: ನಿತ್ಯ 1.50 ಲಕ್ಷ ಮಂದಿಗೆ ಊಟ
Last Updated 27 ಡಿಸೆಂಬರ್ 2022, 16:25 IST
ಅಕ್ಷರ ಗಾತ್ರ

ಹಾವೇರಿ:ನಗರದಲ್ಲಿ ಜ.6,7 ಮತ್ತು 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಘಮಘಮಿಸುವ ‘ಬಿರಂಜಿ ರೈಸ್‌’ ಹಾಗೂ ಶೇಂಗಾ ಹೋಳಿಗೆ ಸೇರಿದಂತೆ ಭಾರಿ ಭೋಜನ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯಗಳಾದ ಕೇಸರಿಬಾತ್‌, ಹೆಸರುಬೇಳೆ ಪಾಯಸ, ಶ್ಯಾವಿಗೆ ಕೀರು, ಗೋಧಿ ಹುಗ್ಗಿ, ಮೈಸೂರ್‌ ಪಾಕ್‌, ಮೋತಿಚೂರು ಲಡ್ಡು ಸೇರಿದಂತೆ ವಿಶೇಷ ಊಟ ತಯಾರು ಮಾಡಲು ಸಮ್ಮೇಳನದ ಆಹಾರ ಉಪಸಮಿತಿ ತೀರ್ಮಾನಿಸಿದೆ.

ಮೊದಲ ದಿನ ಉಪಾಹಾರಕ್ಕೆ ಉಪ್ಪಿಟ್ಟು-ಕೇಸರಿಬಾತ್‌, ಎರಡನೇ ದಿನ ವೆಜಿಟೆಬಲ್‌ ಪುಲಾವ್‌- ರವೆ ಉಂಡೆ, ಮೂರನೇ ದಿನ ವಾಂಗೀಬಾತ್-ಮೈಸೂರು ಪಾಕ್ ಸಿದ್ಧಪಡಿಸಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಜೋಳದ ರೊಟ್ಟಿ, ಚಪಾತಿ, ಪಲ್ಯ, ಶೇಂಗಾ ಚಟ್ನಿ, ಅನ್ನಸಾರು, ಉಪ್ಪಿನಕಾಯಿ, ಮೊಸರು ಕೊಡಲಾಗುತ್ತದೆ.ರಾತ್ರಿ ಊಟಕ್ಕೆ ನಿತ್ಯ ಒಂದೊಂದು ರೀತಿಯ ಪಾಯಸ, ಜತೆಗೆ ಪುಳಿಯೊಗತೆ, ಬಿಸಿಬೇಳೆ ಬಾತ್‌, ಚಿತ್ರಾನ್ನ ಹಾಗೂ ಅನ್ನ ಸಾಂಬಾರ್‌ ಬಡಿಸಲಾಗುತ್ತದೆ.

ನಿತ್ಯ 1.50 ಲಕ್ಷ ಮಂದಿಗೆ ಊಟ:

ಮೊದಲ ದಿನ 1.50 ಲಕ್ಷ, ಎರಡನೇ ದಿನ 1 ಲಕ್ಷ ಹಾಗೂ 3ನೇ ದಿನ 1.5 ಲಕ್ಷ ಮಂದಿಗೆ ಊಟ ಮತ್ತು ಉಪಾಹಾರ ವ್ಯವಸ್ಥೆ ಮಾಡಲಾಗುವುದು.ಸಾಮಾನ್ಯ ವರ್ಗ, ಗಣ್ಯರು, ಅತಿಗಣ್ಯರು ಮೂರು ಶ್ರೇಣಿಯಲ್ಲಿ ಊಟದ ವ್ಯವಸ್ಥೆ ಕೈಗೊಳ್ಳಬೇಕಾಗಿದೆ.ಸಮ್ಮೇಳನದ ಮೂರೂ ದಿನ ನಿಗದಿತ ಅವಧಿಯಲ್ಲಿ ಸಾವಯವ ಬೆಲ್ಲದ ಕಾಫಿ, ಟೀ ಪೂರೈಸಲು ನಿರ್ಧರಿಸಲಾಗಿದೆ ಎಂದುಆಹಾರ ಸಮಿತಿಯ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮಾಹಿತಿ ನೀಡಿದರು.

35 ಎಕರೆಯಲ್ಲಿ ಕಿಚನ್‌:

ಸಮ್ಮೇಳನ ನಡೆಯುವ 128 ಎಕರೆ ವಿಶಾಲವಾದ ಜಾಗದಲ್ಲಿ 35 ಎಕರೆಯಲ್ಲಿ ಕಿಚನ್ ಮತ್ತು ಡೈನಿಂಗ್ ವ್ಯವಸ್ಥೆ ಮಾಡಲಾಗುವುದು. 250 ಕೌಂಟರ್‌ಗಳನ್ನು ತೆರೆಯಲಾಗುವುದು. ಪ್ರತಿ ಕೌಂಟರ್ ಉಸ್ತುವಾರಿಗೆ ಒಬ್ಬ ಅಧಿಕಾರಿ, ಮತ್ತು ಸಿಬ್ಬಂದಿ ಹಾಗೂ 20 ಸ್ವಯಂಸೇವಕರನ್ನು ನೇಮಿಸಲಾಗುವುದು. ಮಹಿಳೆಯರಿಗೆ, ಅಂಗವಿಕಲರಿಗೆ, 70 ವರ್ಷ ಮೇಲ್ಪಟ್ಟ ವೃದ್ಧರಿಗೆ, ಸಮ್ಮೇಳನದ ಸೇವಾ ನಿರತರಿಗೆ ಪ್ರತ್ಯೇಕ ಊಟದ ಕೌಂಟರ್ ವ್ಯವಸ್ಥೆ ಮಾಡಲಾಗುವುದು ಎಂದು ರೋಶನ್‌ ತಿಳಿಸಿದರು.

ಸಮ್ಮೇಳನದ ಮುಂಚಿನ ದಿನ ಜ.5ರ ರಾತ್ರಿ ಬರುವ ನೋಂದಾಯಿತ ಪ್ರತಿನಿಧಿಗಳು, ಸೇವಾನಿರತ ಸಿಬ್ಬಂದಿಗೆ ಭೋಜನ ಶಾಲೆಯಲ್ಲಿ ಸರಳ ಊಟದ ವ್ಯವಸ್ಥೆ ಮಾಡಲಾಗುವುದು. ಮೆರವಣಿಗೆ ಕಲಾವಿದರಿಗೆ ಹುಕ್ಕೇರಿಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಆಹಾರ ಉಪಸಮಿತಿ ಪದಾಧಿಕಾರಿಗಳು ತಿಳಿಸಿದರು.

600 ಬಾಣಸಿಗರಿಂದ ಅಡುಗೆ ಸಿದ್ಧತೆ

‘ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಅಡುಗೆ ಸಿದ್ಧಪಡಿಸಲು ಹುಬ್ಬಳ್ಳಿಯ ಕ್ಯಾಟರರ್ಸ್‌ ಸಂಸ್ಥೆಯೊಂದಕ್ಕೆ ಜವಾಬ್ದಾರಿ ನೀಡಲಾಗಿದೆ. ಸುಮಾರು 600 ಬಾಣಸಿಗರು ಶುಚಿಯಾದ ಮತ್ತು ರುಚಿಯಾದ ಅಡುಗೆ ತಯಾರಿಸಲಿದ್ದಾರೆ’ ಎಂದು ಸಿಇಒ ಮೊಹಮ್ಮದ್‌ ರೋಶನ್‌ ತಿಳಿಸಿದರು.

ಊಟದ ವ್ಯವಸ್ಥೆ ನಿರ್ವಹಣೆಗಾಗಿ 35 ಅಧಿಕಾರಿಗಳು, 75 ಜನ ಪಿಡಿಒಗಳು, 200 ಜನ ಬಿಲ್ ಕಲೆಕ್ಟರ್‌ಗಳು ಸೇರಿದಂತೆ 350 ಜನ ಅಧಿಕಾರಿಗಳನ್ನು ತೆಗೆದುಕೊಳ್ಳಲಾಗಿದೆ. ಎನ್.ಸಿ.ಸಿ., ಎನ್.ಎಸ್.ಎಸ್. ಸೇರಿದಂತೆ 1500 ಜನರು ಹಾಗೂ ಸಂಘ-ಸಂಸ್ಥೆಯವರು ಸ್ವಯಂಪ್ರೇರಣೆಯಿಂದ ಮುಂದೆ 1500 ಜನರು ಸೇರಿದಂತೆ 3000 ಜನರನ್ನು ಸ್ವಯಂ ಸೇವಕರಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ವಿವರ ನೀಡಿದರು.

***

ಹುಕ್ಕೇರಿಮಠದಿಂದ 40 ಸಾವಿರ ರೊಟ್ಟಿ ದೇಣಿಗೆ

ಹಾವೇರಿ ನಗರದ ಹುಕ್ಕೇರಿಮಠದಲ್ಲಿ ಡಿ.28ರಿಂದ ಜನವರಿ 2ರವರೆಗೆ‘ನಮ್ಮೂರ ಜಾತ್ರೆ’ ನಡೆಯಲಿದೆ. ಜಾತ್ರೆಗಾಗಿ ಭಕ್ತರು ಕೊಡುವ ಜೋಳದ ರೊಟ್ಟಿಗಳಲ್ಲಿ 40 ಸಾವಿರ ರೊಟ್ಟಿಗಳನ್ನು ‘ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ’ ನೀಡಲು ತೀರ್ಮಾನಿಸಿದ್ದೇವೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ತಿಳಿಸಿದ್ದಾರೆ.

***

86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಠಗಳು, ದಾನಿಗಳು ಸ್ವಯಂಪ್ರೇರಣೆಯಿಂದ ನೆರವು ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ
– ಮೊಹಮ್ಮದ್‌ ರೋಶನ್‌, ಸಿಇಒ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT