ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಮನೆ ಹಾನಿ: ₹ 38 ಕೋಟಿ ಬಿಡುಗಡೆ

ನೆರೆ ಪೀಡಿತ ಪ್ರದೇಶ ಕೂಡಲ, ಕುಣಿಮೆಳ್ಳಿಹಳ್ಳಿಗೆ ಸಚಿವ ಬಸವರಾಜ ಬೊಮ್ಮಾಯಿ ಭೇಟಿ
Last Updated 8 ಆಗಸ್ಟ್ 2020, 15:53 IST
ಅಕ್ಷರ ಗಾತ್ರ

ಹಾವೇರಿ: ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಜಿಲ್ಲೆಗೆ ₹38 ಕೋಟಿ ಬಿಡುಗಡೆಯಾಗಿದ್ದು, ಮನೆ ಕಟ್ಟಿಕೊಳ್ಳುತ್ತಿರುವ ನೆರೆ ಸಂತ್ರಸ್ತರಿಗೆ ಸೋಮವಾರದಿಂದ 2 ಮತ್ತು 3ನೇ ಕಂತಿನ ಹಣವನ್ನು ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನೆರೆ ಪರಿಸ್ಥಿತಿ ಪರಿಶೀಲಿಸಲು ಶನಿವಾರ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿ, ಮನೆ ಕಟ್ಟಿಕೊಳ್ಳಲು ಕೆಲವು ಕಡೆ ಸ್ಥಳದ ಸಮಸ್ಯೆ ಇದೆ. ಸ್ಥಳ ಸಮಸ್ಯೆ ನಿವಾರಣೆಯಾದ ತಕ್ಷಣ ಮನೆ ನಿರ್ಮಾಣದ ಪ್ರಗತಿ ತೋರಿಸಿದರೆ, ಅಂಥ ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ನೆರೆ ಪ್ರದೇಶ ವೀಕ್ಷಣೆ:ಮೊದಲಿಗೆ ಹಾನಗಲ್‌ ತಾಲ್ಲೂಕಿನ ನರೇಗಲ್‌ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮಳೆಯಿಂದ ಹಾನಿಯಾದ ಮನೆಯೊಂದನ್ನು ವೀಕ್ಷಿಸಿದರು. ನಂತರ ಕೂಡಲ ಗ್ರಾಮದ ಸಮೀಪವಿರುವ ವರದಾ ಮತ್ತು ಧರ್ಮ ನದಿಯ ಸಂಗಮ ಸ್ಥಳಕ್ಕೆ ಭೇಟಿ ನೀಡಿದರು. ಬಾಂದಾರ ಮತ್ತು ಸೇತುವೆ ಮುಳುಗಿ ಕೂಡಲ ಮತ್ತು ನಾಗನೂರ ರಸ್ತೆ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬೆಳೆ ಹಾನಿ:ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ವಾಸ್ತವ ಮಳೆಗಿಂತ ಅಧಿಕ ಮಳೆಯಾಗಿದೆ. ಕರಾವಳಿಯಲ್ಲಿ ಮೂರು ಪಟ್ಟು ಗಾಳಿಯ ವೇಗ ಹೆಚ್ಚಿರುವುದರಿಂದ ಇಲ್ಲಿಯೂ ಗಾಳಿಯ ವೇಗ ಹೆಚ್ಚಾಗಿದೆ. ಇದರಿಂದ ಹುಲುಸಾಗಿ ಬೆಳೆದಿದ್ದ 1830 ಹೆಕ್ಟೇರ್‌ ಮುಸುಕಿನ ಜೋಳ ನೆಲಕ್ಕೆ ಬಿದ್ದು, ಹಾಳಾಗಿದೆ. ಬೆಳೆ ಹಾನಿಯ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಬೇಕು. ಕೃಷಿ ಅಧಿಕಾರಿಗಳ ಜತೆಗೆ, ಕಂದಾಯ ಅಧಿಕಾರಿಗಳು ಮತ್ತು ಪಿಡಿಒಗಳು ಜಂಟಿಯಾಗಿ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯಲ್ಲಿ ಮೇ ಮತ್ತು ಆಗಸ್ಟ್‌ನಲ್ಲಿ 1987 ಹೆಕ್ಟೇರ್‌ ಬೆಳೆಹಾನಿಯಾಗಿದ್ದು, ₹1.35 ಕೋಟಿ ಸಹಾಯಧನ ನೀಡಲಾಗುವುದು ಎಂದರು.

144 ಪ್ರದೇಶ ಗುರುತು:ಜಿಲ್ಲೆಯಲ್ಲಿ 144 ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 151 ಪರಿಹಾರ ಕೇಂದ್ರಗಳನ್ನು ಶಾಲೆ, ಸಮುದಾಯ ಭವನ ಮತ್ತು ಇತರ ಕಡೆ ತೆರೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಕಳೆದ ಬಾರಿ ಪ್ರವಾಹಕ್ಕೆ ತುತ್ತಾಗಿದ್ದ ವರದಾ ನದಿಯ ಅಕ್ಕಪಕ್ಕದ ಗ್ರಾಮಗಳಾದ ನಾಗನೂರ, ಕೂಡಲ, ಕುಣಿಮೆಳ್ಳಿಹಳ್ಳಿ ಮುಂತಾದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ಗ್ರಾಮಸ್ಥರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಯೂರಿಯಾ ಸಮಸ್ಯೆ:ಯೂರಿಯಾ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರ ರಸಗೊಬ್ಬರ ಸಚಿವ ಸದಾನಂದಗೌಡ ಅವರೊಂದಿಗೆ ಮಾತನಾಡಿದ್ದಾರೆ. ಕೂಡಲೇ 15 ರೇಕ್‌ ರಸಗೊಬ್ಬರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸೋಮವಾರದಿಂದ ದಾವಣಗೆರೆಗೆ ದಾಸ್ತಾನು ಬರಲಿದೆ.ಪ್ರತಿ ಜಿಲ್ಲೆಗೆ 5 ಸಾವಿರ ಟನ್‌ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಕೋವಿಡ್‌ ಕಾರಣದಿಂದ ‘ಎಂಸಿಎಫ್’‌ನಲ್ಲಿ ತಯಾರಾದ ರಸಗೊಬ್ಬರ ಸಾಗಣೆಗೆ ತೊಡಕಾಗಿದೆ. ರಸ್ತೆ ಮಾರ್ಗ ಮತ್ತು ರೈಲು ಮಾರ್ಗ ಈ ಎರಡೂ ಕಡೆಯಿಂದ ರಸಗೊಬ್ಬರ ದಾಸ್ತಾನು ಬಂದರೆ, ಮುಂದಿನ 15 ದಿನಗಳಲ್ಲಿ ಯೂರಿಯಾ ಸಮಸ್ಯೆ ನಿವಾರಣೆಯಾಗುತ್ತದೆ. ಮಾರುಕಟ್ಟೆ ಫೆಡರೇಷನ್‌ನಿಂದ ಬಂದ ಗೊಬ್ಬರವನ್ನು ಸಹಕಾರ ಸಂಘಗಳಿಗೇ ನೀಡಿ, ಅವರ ಮೂಲಕ ಮಾರಾಟ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT