ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರೋತ್ಪನ್ನದಲ್ಲಿ ಯಶಸ್ಸು ಕಂಡ ಕಮದೋಡ ಸಹೋದರರು

Last Updated 27 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ರಾಣೆಬೆನ್ನೂರು:ಮಳೆ ಹಾಗೂ ನೀರಾವರಿಯ ಕೊರತೆಯ ಕಾರಣ ಕೃಷಿ ಕೈ ಹಿಡಿಯಲಿಲ್ಲ. ಬರದ ಇನ್ನಷ್ಟು ಬವಣೆ ಹೆಚ್ಚಿಸಿತು. ಕೆಲಸ ಅರಸಿ ಬೇರೆಡೆ ಹೋಗಲೂ ಮನಸ್ಸಾಗಲಿಲ್ಲ. ಆಗ, ಅಮ್ಮ ಹೇಳಿಕೊಟ್ಟ ವಿದ್ಯೆಯನ್ನೇ ಬಳಸಿಕೊಂಡ ಇಲ್ಲಿನ ಗಾಂಧಿಗಲ್ಲಿಯ ಕಮದೋಡ ಸಹೋದರರು, ‘ಶ್ರೀ ಗುರು ಕೊಟ್ಟೂರೇಶ್ವರ ಹೋಂ ಇಂಡಸ್ಟ್ರೀಸ್‌’ ಆರಂಭಿಸುವ ಮೂಲಕ ಸ್ವಯಂ ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ.

ತಮ್ಮ ಕೃಷಿ, ಹೈನುಗಾರಿಕೆಯ ಜೊತೆಗೆ ಆಹಾರೋತ್ಪನ್ನಗಳ ಉದ್ಯಮದಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಶ್ಯಾವಿಗೆ, ಖಾರಪುಡಿ ಮತ್ತು ಮಸಾಲೆ ಪುಡಿ, ಹಿಟ್ಟಿನ್ನು ಕೆ.ಜಿ, ಅರ್ಧ ಕೆ.ಜಿ.ಯ ಪ್ಯಾಕೇಟ್ ಮಾಡಿ ಮಾರಾಟ ಮಾಡುತ್ತಾರೆ. ಮನೆ ಮಂದಿಗೆಲ್ಲ ಕೆಲಸ ಮಾತ್ರವಲ್ಲ, ಇತರ ನಾಲ್ಕು ಜನರಿಗೂ ಉದ್ಯೋಗದಾತರಾಗಿದ್ದಾರೆ.

ಬಸಯ್ಯ ಎಂ. ಕಮದೋಡ (ವಾಲೋಜಿಮಠ), ಚನ್ನಬಸಯ್ಯ ಎಂ. ಕಮದೋಡ (ವಾಲೋಜಿಮಠ) ಮತ್ತು ರುದ್ರಯ್ಯ ಎಂ. ಕಮದೋಡ (ವಾಲೋಜಿಮಠ) ಸಹೋದರರೆಲ್ಲ ಎಸ್ಸೆಸ್ಸೆಲ್ಸಿ ತನಕ ಓದಿದ್ದು, ಉದ್ಯಮದಲ್ಲಿ ತೇರ್ಗಡೆ ಹೊಂದಿದ್ದಾರೆ.

ತಮ್ಮ ಹಿರಿಯರಿಂದ ಬಂದ ತಲಾ ಏಳು ಎಕರೆ ಜಮೀನು ಇದೆ. ಆದರೆ, ಮಳೆಯಾಶ್ರಿತ ಕೃಷಿಯ ಕಾರಣ ಬರ ಕಾಡಿದೆ.ಕೃಷಿಯಲ್ಲಿ ಸಮಸ್ಯೆಗಳು ಕಾಡಿದಾಗ ತಾಯಿ ‘ಗೌರಮ್ಮ’ ಮಾರ್ಗದರ್ಶನದಲ್ಲಿ ‘ಶ್ರೀ ಗುರು ಕೊಟ್ಟೂರೇಶ್ವರ ಹೋಂ ಇಂಡಸ್ಟ್ರೀಸ್’ ಆರಂಭಿಸಿದ್ದರು. ಬ್ಯಾಂಕಿನಿಂದ ಸಾಲ ಪಡೆದ ಸಹೋದರರು, ಸ್ವಯಂ ಉದ್ಯಮವಾಗಿ ಆರಂಭಿಸಿದ್ದರು. ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ, ನಿಧಾನವಾಗಿ ಆಹಾರೋತ್ಪನ್ನಗಳ ತಯಾರಿಯು ಕೈ ಹಿಡಿದಿದೆ.

ಉತ್ತಮ ಮಳೆ ಬಂದಾಗ, ಹಸನಾಗಿಯೇ ಕೃಷಿ ಮಾಡುತ್ತಾರೆ. ಆದರೆ, ನೀರಿನ ಸಮಸ್ಯೆಯು ಬಹುವಾಗಿ ಕಾಡಿದೆ. ಅಲ್ಲದೇ, ಆಳಿನ ಕೊರತೆ, ರೋಗ ಬಾಧೆ ಮತ್ತಿತರ ಸಮಸ್ಯೆಗಳಿಂದ ಕೃಷಿ ಕೈ ಕೊಡುತ್ತಿತ್ತು. ಹೀಗಾಗಿ, ಹೈನುಗಾರಿಕ ಹಾಗೂ ‘ಇಂಡಸ್ಟ್ರೀಸ್’ ಆರಂಭಿಸಿದೆವು ಎಂದು ಸಹೋದರರು ತಿಳಿಸುತ್ತಾರೆ.

ಕ್ರಮೇಣ ವ್ಯಾಪಾರ ವಹಿವಾಟು ಎಲ್ಲ ಸರಿಯಾಯಿತು. ಈಗ ಕೃಷಿ ಹಾಗೂ ‘‌ಹೋಂ ಇಂಡಸ್ಟ್ರೀಸ್‌’ ನಿಂದ ಮನೆ ಮಂದಿಗೆಲ್ಲ ವರ್ಷಪೂರ್ತಿ ಕೆಲಸ ಸಿಕ್ಕಿದೆ. ಮಕ್ಕಳ ಶಿಕ್ಷಣಕ್ಕೂ ಅನುಕೂಲವಾಗಿದೆ. ನಾವೂ ತೃಪ್ತಿ ಕಂಡುಕೊಂಡಿದ್ದೇವೆ ಎನ್ನುತ್ತಾರೆ ಬಸಯ್ಯ ಎಂ. ಕಮದೋಡ.

ಶ್ಯಾವಿಗೆ: ಬೇಡಿಕೆಯ ಋತುವಿನಲ್ಲಿ ಶ್ಯಾವಿಗೆ ತಯಾರು ಮಾಡಿ ಮಾರಾಟ ಮಾಡುತ್ತೇವೆ. ಶ್ಯಾವಿಗೆ ತಯಾರು ಮತ್ತು ಮಾರಾಟದಲ್ಲಿ ಉತ್ತಮ ಆದಾಯ ಇದೆ. ಒಂದು ತಾಸಿಗೆ 50 ಕೆಜಿ ಶ್ಯಾವಿಗೆ ತಯಾರಿಸುತ್ತೇವೆ. ಕೆಲವೊಂದು ಗ್ರಾಹಕರು ತಾವೇ ರವಾ ಹಿಟ್ಟು ಕೊಡುತ್ತಾರೆ. ಅವರಿಗೆ, ₹1 ಕೆಜಿಗೆ ₹15 ತೆಗೆದುಕೊಂಡು ಶ್ಯಾವಿಗೆ ಮಾಡಿಕೊಡುತ್ತೇವೆ. ಉಳಿದಂತೆ, ನಾವೇ ರವಾ ಹಿಟ್ಟಿನಿಂದ ಶ್ಯಾವಿಗೆ ತಯಾರಿಸಿ, ಕೆ.ಜಿ. ಪ್ಯಾಕ್‌ಗೆ ₨45 ಕೆಜಿ ಮಾರಾಟ ಮಾಡುತ್ತೇವೆ. ಒಂದು ದಿನಕ್ಕೆ ಸುಮಾರು ಒಂದು ಕ್ವಿಂಟಲ್‌ ಶ್ಯಾವಿಗೆ ತಯಾರಿಸಿ, ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ಸಹೋದರರು ವಿವರಿಸಿದರು.

ಇದರ ಜೊತೆಗೆ ಜೊತೆಗೆ ಖಾರದಪುಡಿ, ಹಿಟ್ಟು ಮತ್ತಿತರ ಉತ್ಪನ್ನಗಳೂ ಇವೆ. ಅಕ್ಕಾಗಿ ಹಿಟ್ಟಿನ ಗಿರಣಿ, ಖಾರ ಪುಡಿ ಮತ್ತು ಮಸಾಲೆ ರುಬ್ಬುವ ಮೆಷಿನ್‌, ಮೆಣಸಿನಕಾಯಿ ಕುಟ್ಟುವ ಮೆಷಿನ್‌ಗಳನ್ನು ಇಟ್ಟುಕೊಂಡಿದ್ದೇವೆ. ನಮ್ಮ ಕೆಲವು ಕಾಯಂ ಗ್ರಾಹಕರ ಬೇಕಾದ ಖಾರದಪುಡಿ, ಹಿಟ್ಟು ಇತ್ಯಾದಿಗಳನ್ನೂ ಸಿದ್ಧ ಮಾಡಿ ಕೊಡುತ್ತೇವೆ. ಅವುಗಳನ್ನು ಅರ್ಧ ಕೆ.ಜಿ., ಕೆ.ಜಿಯ ಪ್ಯಾಕೆಟ್ ಮಾಡಿ ಮಾರುಕಟ್ಟೆಗೂ ನೀಡುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT