ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವೈವಿಧ್ಯ ತಾಣವಾಗಿ ಹೆಗ್ಗೇರಿ ಕೆರೆ

ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿಕೆ
Last Updated 28 ಜುಲೈ 2020, 14:23 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯ ಜೀವವೈವಿಧ್ಯ ಮಂಡಳಿಯಿಂದ ಹಾವೇರಿ ಹೆಗ್ಗೇರಿ ಕೆರೆಯನ್ನು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಿಸಿ ಅಭಿವೃದ್ಧಿ ಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ನಗರಸಭೆ ಜೀವವೈವಿಧ್ಯ ಸಮಿತಿ ಮುಖಾಂತರ ನಿರ್ಣಯ ಕೈಗೊಳ್ಳುವಂತೆ ಪೌರಾಯುಕ್ತರಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲೆಯ ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ರಚಿಸಲಾಗಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಕಾರ್ಯ ಚಟುವಟಿಕೆ, ಪರಿಸರ ರಕ್ಷಣೆ ಹಾಗೂ ಭೂಕುಸಿತ ಕುರಿತಂತೆ ಪರಿಶೀಲನೆ ನಡೆಸಿ ಮಾತನಾಡಿದರು.

ಹೆಗ್ಗೇರಿ ಕೆರೆ ಪುನಶ್ಚೇತನದ ಜೊತೆಗೆ ಪಾರಂಪರಿಕ ಜೈವಿಕ ಪ್ರವಾಸ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜೈವಿಕ ತಜ್ಞರ ಸಮಿತಿಯೊಂದನ್ನು ಕಳುಹಿಸಲಾಗುವುದು. ಕೆರೆಯ ಸುತ್ತಲೂ ಗಿಡ–ಮರಗಳ ಬೆಳೆಸುವಿಕೆ, ಪಕ್ಷಿ ಸಂಕುಲ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಬೇಕು. ಈ ಹಿನ್ನೆಲೆಯಲ್ಲಿ ನಗರಸಭೆ, ಅರಣ್ಯ ಇಲಾಖೆ ಇತರ ಇಲಾಖೆಗಳು ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.

ತಿಂಗಳಲ್ಲಿ ಸಮಿತಿ ರಚನೆ:ಜಿಲ್ಲೆಯಲ್ಲಿ 224 ಗ್ರಾಮ ಪಂಚಾಯಿತಿಗಳಿದ್ದು, 146 ಗ್ರಾಮ ಪಂಚಾಯಿತಿಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚಿಸಲಾಗಿದೆ. ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ತಿಂಗಳೊಳಗಾಗಿ ಸಮಿತಿಗಳ ರಚನೆ ಕಾರ್ಯ ಪೂರ್ಣಗೊಳ್ಳಬೇಕು. ಜನತಾ ಜೀವ ವೈವಿಧ್ಯ ದಾಖಲಾತಿ ಕಾರ್ಯಗಳನ್ನು ಅತ್ಯಂತ ಗುಣಮಟ್ಟವಾಗಿ ನಿರ್ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಪಶು, ಪಕ್ಷಿ, ಜೀವಸಂಕುಲಗಳು, ಪರಿಸರ ಪ್ರಬೇಧಗಳ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬೇಕು ಎಂದರು.

ನೈರ್ಮಲ್ಯ ತಡೆ:ಕಾರ್ಖಾನೆಯಿಂದ ನದಿಗೆ ಕಲುಷಿತ ನೀರು ಹಾಗೂ ತ್ಯಾಜ್ಯ ಹರಿದು ಮಲಿನವಾಗದಂತೆ ತಡೆಯಬೇಕು ಹಾಗೂ ಕಾರ್ಖಾನೆಯ ಸುತ್ತಲಿನ ಗ್ರಾಮಗಳಿಗೆ ವಾಯುಮಾಲಿನ್ಯದಿಂದ ತೊಂದರೆಯಾಗದಂತೆ ಕ್ರಮವಹಿಸಬೇಕು. ನಿಯಮಗಳ ಪಾಲನೆಗೆ ಕಾರ್ಖಾನೆಗಳಿಗೆ ತಾಕೀತು ಮಾಡಬೇಕು ಎಂದರು.

ತೋಟಗಾರಿಕೆ ಇಲಾಖೆಯಿಂದ ಜೇನು ಕೃಷಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ರೈತರಿಗೆ ತರಬೇತಿ ನೀಡಬೇಕು. ಯೋಜನೆಯನ್ನು ರೂಪಿಸಬೇಕು. ಹಳ್ಳಿಗಳನ್ನು ಆಯ್ಕೆಮಾಡಿ ಜೇನು ಕೃಷಿಗೆ ಕ್ಲಸ್ಟರ್‌ಗಳನ್ನಾಗಿ ರೂಪಿಸಬೇಕು. ರೈತರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಸೂಚನೆ ನೀಡಿದರು.

ಹಾಟ್‍ಸ್ಪಾಟ್:ವೈವಿಧ್ಯಮಯ ಸಸ್ಯ ಹಾಗೂ ಜೀವ ಸಂಕುಲಗಳ ಬೆಳವಣಿಗೆ ಹಾಗೂ ಜಲ ರಕ್ಷಣೆಗೆ ಪೂರಕವಾದ ತಾಣಗಳನ್ನು ಗುರುತಿಸಿ ಇವುಗಳನ್ನು ಜೀವ ವೈವಿಧ್ಯಮಯ ಹಾಟ್‍ಸ್ಪಾಟ್‍ಗಳಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ಥಳಗಳನ್ನು ಗುರುತಿಸುವಲ್ಲಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಇ. ಕ್ರಾಂತಿ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT