ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂ ಟ್ಯೂಬ್‌ನಲ್ಲಿ ‘ನಮ್ಮೂರ ಜಾತ್ರೆ’

ಹುಕ್ಕೇರಿಮಠದ ಲಿಂಗೈಕ್ಯ ಶ್ರೀಗಳ ಭಾವಚಿತ್ರಗಳಮೆರವಣಿಗೆ ಇಂದು
Last Updated 16 ಜನವರಿ 2019, 12:00 IST
ಅಕ್ಷರ ಗಾತ್ರ

ಹಾವೇರಿ: ನೀವು ವಿಶ್ವದ ಎಲ್ಲೇ ಇದ್ದರೂ ನಗರದ ಹುಕ್ಕೇರಿಮಠದ ‘ನಮ್ಮೂರ ಜಾತ್ರೆ’ಯನ್ನು ‘ಲೈವ್’ ಆಗಿ ವೀಕ್ಷಿಸಬಹುದು. ಇಲ್ಲಿನ ಶಿವಲಿಂಗೇಶ್ವರ ಕಂಪ್ಯೂಟರ್ಸ್‌ ಸತತ ನಾಲ್ಕನೇ ವರ್ಷವೂ ಜಾತ್ರೆಯನ್ನು ‘ಯೂ ಟ್ಯೂಬ್‌’ ಮೂಲಕ ನೇರ ಪ್ರಸಾರ ಮಾಡುತ್ತಿದ್ದು, ಎಲ್ಲಿದ್ದರೂ ನೋಡಿ ಪುನೀತರಾಗಬಹುದು.

ನೀವು ‘ಯೂ ಟ್ಯೂಬ್‌’ಗೆ ಹೋಗಿ HUKKERIMATHHAVERI live’ ಎಂದು ಟೈಪಿಸಿದರೆ ಸಾಕು, ಜಾತ್ರೆಯ ನೇರ ಪ್ರಸಾರವು ತೆರೆದುಕೊಳ್ಳುತ್ತದೆ. ಇದರಲ್ಲಿ ಈ ಹಿಂದಿನ ವರ್ಷಗಳ ಜಾತ್ರೆಯ ಕಾರ್ಯಕ್ರಮಗಳೂ ಲಭ್ಯ ಇವೆ.

ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಊರವರೆಲ್ಲ ಸೇರಿ ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಆದರೆ, ಉದ್ಯೋಗ, ತುರ್ತು ಕೆಲಸ, ಪರ ಊರಿನಲ್ಲಿನಲ್ಲಿರುವ ಭಕ್ತರು ಜಾತ್ರೆಗೆ ಬರುವುದು ಕಷ್ಟಸಾಧ್ಯ. ಅವರಿಗಾಗಿ ‘ಯೂ ಟ್ಯೂಬ್’ ಮೂಲಕ ಅವಕಾಶ ಕಲ್ಪಿಸಲಾಗಿದೆ. ಮೊಬೈಲ್, ಕಂಪ್ಯೂಟರ್, ಟ್ಯಾಬ್ ಮೂಲಕ ಜಾತ್ರಾ ದರ್ಶನ ಸಾಧ್ಯವಾಗಿದೆ.

‘2015ರಲ್ಲಿ ಮೊದಲ ಬಾರಿಗೆ ‘ಎಬಿ ಲೈವ್‌ ಸ್ಟ್ರೀಮ್‌’ ನಲ್ಲಿ ನೋಂದಾಯಿಸಿಕೊಂಡು, ನೇರ ಪ್ರಸಾರ ಆರಂಭಿಸಿದ್ದೆವು. ಆ ಬಳಿಕ ‘ಯು ಟ್ಯೂಬ್’ ಜನಪ್ರಿಯತೆಗೊಂಡಿದ್ದು, ಅದರಲ್ಲೇ ಪ್ರಸಾರ ನೀಡುತ್ತಿದ್ದೇವೆ’ ಎನ್ನುತ್ತಾರೆ ಕಂಪ್ಯೂಟರ್ಸ್‌ನ ಸುರೇಶ ಚ. ಮುರುಡಣ್ಣನವರ

‘1998ರಲ್ಲಿ ಅಂದಿನ ಪೀಠಾಧಿಪತಿ ಶಿವಲಿಂಗೇಶ್ವರ ಸ್ವಾಮೀಜಿ ಶಿವಲಿಂಗೇಶ್ವರ ಕಂಪ್ಯೂಟರ್ಸ್ ಅನ್ನು ಉದ್ಘಾಟಿಸಿದ್ದರು. ಅನಂತರ ಪ್ರತಿ ವರ್ಷವೂ ನಾವು ಸೇವೆ ನೀಡುತ್ತಾ ಬಂದಿದ್ದೇವೆ. 2015ರ ಬಳಿಕ ಲೈವ್ ಸ್ಟ್ರೀಮ್ ಮೂಲಕ ಮಠದ ಪ್ರತಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಈಚೆಗೆ ಜಾತ್ರೆ ನಡೆಯುತ್ತಿದ್ದ ವೇಳೆಯಲ್ಲಿ ಕಲ್ಬುರ್ಗಿ, ಗುಜರಾತ್, ವಿದೇಶಗಳು ಸೇರಿದಂತೆ ವಿವಿಧೆಡೆಯ ಭಕ್ತರು ಕಾರ್ಯಕ್ರಮವನ್ನು ವೀಕ್ಷಿಸಿ, ಕರೆ ಮಾಡಿದ್ದಾರೆ. ಭಕ್ತಿಯಿಂದ ನಡೆದುಕೊಳ್ಳುವ ಮಠದ ಕಾರ್ಯಕ್ರಮದ ವೀಕ್ಷಣೆಗೆ ಕಲ್ಪಿಸಿದ ಅವಕಾಶಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.ಅಂತರ್ಜಾಲ ಸಂಪರ್ಕ, ವೆಬ್‌ ಕ್ಯಾಮ್, ಲ್ಯಾಪ್‌ ಟಾಪ್ ಬಳಸಿಕೊಂಡು ನಾವು ನೇರ ಪ್ರಸಾರ ನೀಡುತ್ತಿದ್ದೇವೆ’ ಎಂದರು.

hukkerimathhaveri.com ವೆಬ್‌ಸೈಟ್‌ ಅನ್ನು 2010ರಲ್ಲಿ ಆರಂಭಿಸಲಾಗಿದೆ. 2017ರಲ್ಲಿ ಅದನ್ನು ಮರುಬಿಡುಗಡೆ ಮಾಡಿದ್ದು, ಇದರಲ್ಲಿ ಮಠದ ಆಡಿಯೊ, ವಿಡಿಯೊ, ಚಿತ್ರಗಳು, ಸಂಗೀತ ಕಾರ್ಯಕ್ರಮಗಳಿವೆ. ಹಾವೇರಿ ವೈಶಿಷ್ಟ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆ, ಪೀಠದ ಪರಂಪರೆ, ಆಚರಣೆಗಳು, ಶೈಕ್ಷಣಿಕ, ಸಾಮಾಜಿಕ ಸೇವೆಗಳ ಮಾಹಿತಿಯೂ ಇವೆ.ಇದರಿಂದಾಗಿ ಮಠದ ಮಾಹಿತಿ, ಸಂಪರ್ಕ ವಿಳಾಸ ಮಾತ್ರವಲ್ಲ, ಚಿತ್ರ– ವರದಿಗಳೂ ಆಸಕ್ತರಿಗೆ 24x7 ನೋಡಲು ಸಾಧ್ಯವಾಗಿದೆ.

ಊರಲಿದ್ದವರು ಬೆಂಡಾಸು, ಬತ್ತಾಸು, ಬಳೆ, ಜೋಕಾಲಿ, ಸಾಂಸ್ಕೃತಿಕ ಕಾರ್ಯಕ್ರಮ, ದಾಸೋಹ ಸೇರಿದಂತೆ ಜಾತ್ರೆಯ ವೈವಿಧ್ಯವನ್ನು ಸವಿದರೆ, ದೂರದಲ್ಲಿರುವ ಭಕ್ತರೂ ನಿರಾಶರಾಗದಂತೆ ನೇರ ಪ್ರಸಾರ ನೀಡಲಾಗಿದೆ. ಮಠದ ಬಗ್ಗೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸುತ್ತಿದ್ದು, ಸಮಗ್ರ ಪರಂಪರೆಯನ್ನು ತೆರೆದಿಡುವ ಪ್ರಯತ್ನವೂ ಸಾಗಿದೆ.

ಮಠದ ಪೀಠಾಧಿಪತಿಗಳಾಗಿದ್ದ ಲಿಂ. ಶಿವಬಸವ ಸ್ವಾಮೀಜಿ ಮತ್ತು ಶಿವಲಿಂಗ ಸ್ವಾಮೀಜಿ ಭಾವಚಿತ್ರಗಳ ಮೆರವಣಿಗೆಯ ರಥೋತ್ಸವ ಗುರುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT