ಶುಕ್ರವಾರ, ಆಗಸ್ಟ್ 19, 2022
25 °C

‘ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಶಾಲೆಯಿಂದ ಹೊರಗಳಿದ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕಾರ್ಯ ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಗ್ರಾಮ ಮತ್ತು ನಗರ ವ್ಯಾಪ್ತಿಯಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಶಾಲೆಯಿಂದ ಹೊರಗಳಿದ ಮಕ್ಕಳ ಪತ್ತೆ ಮಾಡಿ ಶಿಕ್ಷಣದಿಂದ ವಂಚಿತರಾದ ಈ ಮಕ್ಕಳನ್ನು ಸ್ಥಳೀಯ ಶಾಲೆಗಳಿಗೆ ದಾಖಲಿಸಬೇಕು’ ಎಂದು ಸೂಚನೆ ನೀಡಿದರು.

ಶಾಲೆ ತೊರೆದ ಮಕ್ಕಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಬಾಲಕಾರ್ಮಿಕರಾಗಿ ಕೆಲಸ aಮಾಡುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ಪಾಲಕರಿಗೆ ಅರಿವು ಮೂಡಿಸಿ ಶಾಲೆಗಳಿಗೆ ದಾಖಲಿಸಬೇಕು. ಒಂದೊಮ್ಮೆ ಹೊರರಾಜ್ಯದ ಮಕ್ಕಳು ಬೇರೆ ಬೇರೆ ಕೆಲಸ ಹಾಗೂ ಕಾರಣಗಳಿಗಾಗಿ ಜಿಲ್ಲೆಗೆ ವಲಸೆ ಬಂದವರ ಮಕ್ಕಳು ಶಾಲಾ ಕಲಿಕೆಯಿಂದ ಹೊರಗುಳಿದಿದ್ದರೆ, ಇಂತಹ ಮಕ್ಕಳನ್ನು ಆಯಾ ಪ್ರಾದೇಶಿಕ ಭಾಷೆಯಲ್ಲಿ ತಾತ್ಕಾಲಿಕ ಕಲಿಕೆಗಾಗಿ ಬ್ರಿಜ್‌ ಕೋರ್ಸ್‌(ಸೇತುಬಂಧ)ಗಳನ್ನು ನಡೆಸಿ ನಂತರ ಸ್ಥಳೀಯ ಶಾಲೆಗಳಿಗೆ ದಾಖಲಿಸುವುದರ ಮೂಲಕ ಮುಖ್ಯವಾಹಿನಿಗೆ ತರಲು ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಮಟ್ಟದಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಒಳಗೊಂಡ ಮೂರು ಜನರ ತಂಡ, ನಗರ ಪ್ರದೇಶದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು, ಅಂಗನವಾಡಿ ಶಿಕ್ಷಕರು, ಸ್ವಯಂ ಸೇವಾ ಸಂಘಟನೆಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರನ್ನೊಳಗೊಂಡ ಐದು ಜನರ ತಂಡಗಳನ್ನು ರಚಿಸಿಕೊಂಡು ಸರ್ವೆ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜಾಫರ ಸುತಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ, ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಲಮಾಣಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು