ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲವತ್ತಾದ ಮಣ್ಣು ಅಕ್ರಮ ಸಾಗಾಟ; ರೈತ ಸಂಘದಿಂದ ಪ್ರತಿಭಟನೆ

Published 24 ಏಪ್ರಿಲ್ 2023, 2:51 IST
Last Updated 24 ಏಪ್ರಿಲ್ 2023, 2:51 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಇಟಗಿ ಕ್ರಾಸ್‌ನ ಹರಿಹರ ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ರೈತರ ಜಮೀನುಗಳಿಂದ ಫಲವತ್ತಾದ ಮಣ್ಣನ್ನು ಇಟ್ಟಿಗಿ ಭಟ್ಟಿಗಳಿಗೆ ಅಕ್ರಮವಾಗಿ ಸಾಗಿಸುತ್ತಿರುವ ಟಿಪ್ಪರ್‌ಗಳನ್ನು ಭಾನುವಾರ ರೈತ ಸಂಘದ ಪದಾಧಿಕಾರಿಗಳು ತಡೆದು ಪ್ರತಿಭಟನೆ ನಡೆಸಿದರು.

ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, 'ಅತಿವೃಷ್ಟಿ, ಅನಾವೃಷ್ಟಿ ಮತ್ತು ಬೆಂಬಲ ಬೆಲೆ ಸಿಗದೇ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಮತ್ತು ಕುಟುಂಬದ ಸಲುವಾಗಿ ಮಾಡಿದ ಸಾಲ ತೀರಿಸಲಾಗದೇ ತನ್ನ ಜಮೀನಿನ ಫಲವತ್ತಾದ ಮಣ್ಣನ್ನು 8 ರಿಂದ 10 ಅಡಿ ಆಳ ಅಗೆದು ಇಟ್ಟಿಗೆ ಭಟ್ಟಿಯವರಿಗೆ, ಒಲ್ಲದ ಮನಸ್ಸಿನಿಂದ ಮಾರಾಟ ಮಾಡುತ್ತಿದ್ದಾರೆ. ರೈತ ಅದೇ ಮಣ್ಣಿನಲ್ಲಿ ಉತ್ತಮ ಬೆಳೆ ಬೆಳೆದು ದೇಶಕ್ಕೆ ಅನ್ನ ಹಾಕುತ್ತಿದ್ದ. ಅನ್ನದಾತನ ಜಮೀನು ಈಗ ಬರಡು ಭೂಮಿಯಾಗುತ್ತಿದೆ. ಇದಕ್ಕೆಲ್ಲಾ ಡಬಲ್‌ ಎಂಜಿನ್‌ ಸರ್ಕಾರವೇ  ಕಾರಣ' ಎಂದು ದೂರಿದರು.

'ಸರ್ಕಾರದ ಬೆಳೆ ವಿಮೆ, ಬೆಳೆ ಪರಿಹಾರ, ಕಿಸಾನ್ ಸಮ್ಮಾನ್‌ನಂತಹ ಯೋಜನೆಗಳು ಕೇವಲ ಪ್ರಚಾರಕ್ಕೆ ಸೀಮಿತವಾದವು. ರೈತರು ಈ ಸ್ಥಿತಿ ತಲುಪಲಿಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳೇ ಕಾರಣವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರದಲ್ಲಿ ರೈತರ ನೆರವಿಗೆ ಬಂದಿಲ್ಲ. ಬದಲಿಗೆ ರೈತ ವಿರೋಧಿ ಕಾನೂನುಗಳನ್ನೇ ಜಾರಿಗೆ ತಂದಿದ್ದು, ರೈತರ ಈ ಪರಿಸ್ಥಿತಿಗೆ ಕಾರಣ' ಎಂದು ಆರೋಪಿಸಿದರು.

'ಅಕ್ರಮ ಮರಳು ಸಾಗಾಣಿಕೆ ಕಳ್ಳರ ಹಣದಾಹಕ್ಕೆ ತುಂಗಭದ್ರೆಯ ಒಡಲನ್ನು ಬಗೆದು ಹಣ ಸಂಪಾದಿಸಿ ಅಧಿಕಾರಿಗಳೊಂದಿಗೆ ಅಟ್ಟಹಾಸ ಮೆರೆಯುತ್ತಿದ್ದಾರೆ. ರೈತ ತಾನು ಬದುಕು ಕಟ್ಟಿಕೊಳ್ಳುವುದಕ್ಕಾಗಿ ಫಲವತ್ತಾದ ಮಣ್ಣು ಮಾರಾಟ ಮಾಡುತ್ತಿದ್ದಾನೆ. ಇದರಿಂದ ಪರಿಸರ ನಾಶವಾಗಿ ಪ್ರಕೃತಿ ಸಂಪತ್ತು ಲೂಟಿಯಾದರೆ, ಮುಂದಿನ ದಿನಗಳಲ್ಲಿ ಆಹಾರಕ್ಕಾಗಿ ಪರಿತಪಿಸಬೇಕಾಗುತ್ತದೆ. ಸರ್ಕಾರ ರೈತರ ಬಗ್ಗೆ ಗಮನ ಹರಿಸಿ ರೈತರ ಸಾಲಮನ್ನಾ ಯೋಜನೆ ಜಾರಿಗೊಳಿಸಿ, ಅನ್ನದಾತನ ಋಣ ತೀರಿಸಬೇಕು' ಎಂದು ಒತ್ತಾಯಿಸಿದರು.

ಈ ವೇಳೆ ಹರಿಹರಗೌಡ ಪಾಟೀಲ, ಪ್ರಶಾಂತರಡ್ಡಿ ಎರೆಕುಪ್ಪಿ, ತಿಪ್ಪೇಶರಡ್ಡಿ ಬಣಕಾರ, ಸುರೇಶ ಮಲ್ಲಾಪುರ, ಯಲ್ಲಪ್ಪ ಓಲೇಕಾರ, ಜಮಲಸಾಬ ಸೇತಸನದಿ, ನಾಗರಾಜ ಮಾಳಗೇರ, ಹನುಮಂತ ತಳವಾರ, ಶಂಭುನಗೌಡ ಪಾಟೀಲ, ಶಿವರಾಜ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT