ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಹಾನಿ ದುರಸ್ತಿ ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ.ಪಾಟೀಲ

ನೆರೆ ಹಾನಿ: ತುರ್ತು ದುರಸ್ತಿಗೆ ಕೂಡಲೇ ಕ್ರಮವಹಿಸಿ– ಸಚಿವ ಬಿ.ಸಿ.ಪಾಟೀಲ ಸೂಚನೆ
Last Updated 6 ಆಗಸ್ಟ್ 2021, 13:32 IST
ಅಕ್ಷರ ಗಾತ್ರ

ಹಾವೇರಿ: ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಸಮರ್ಪಕ ಸಮೀಕ್ಷೆ ಮಾಡದೆ ಸುಳ್ಳು ವರದಿ ನೀಡಿದರೆ ಹಾಗೂ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ದೇವಗಿರಿಯಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ 2021–22ನೇ ಸಾಲಿನ ನೆರೆ ಹಾವಳಿ ಮತ್ತು ಕೋವಿಡ್‌–19 ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹಾವೇರಿ ಜಿಲ್ಲೆಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾಗಿರುವುದರಿಂದ ಸಣ್ಣ-ಪುಟ್ಟ ಆಡಳಿತ ಲೋಪಗಳಾದರೂ ರಾಜ್ಯದ ಗಮನ ಸೆಳೆಯುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಮಸ್ಯೆಗಳಿದ್ದರೆ ತಕ್ಷಣ ನಮ್ಮ ಗಮನಕ್ಕೆ ತಂದು ಸರಿಪಡಿಸಬೇಕು ಎಂದು ತಾಕೀತು ಮಾಡಿದರು.

ತೀವ್ರ ಅಸಮಾಧಾನ:ಅತಿವೃಷ್ಟಿ ಮತ್ತು ನೆರೆಯಿಂದ ಜಿಲ್ಲೆಯಲ್ಲಿ ರಸ್ತೆ, ಸೇತುವೆ, ಬಾಂದಾರಗಳು ಹಾಳಾಗಿ, ಜನರಿಗೆ ತೀವ್ರ ಸಮಸ್ಯೆಯಾಗಿದ್ದರೂ ಅಧಿಕಾರಿಗಳು ಏಕೆ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ತುರ್ತು ದುರಸ್ತಿಗೆ ಇಲಾಖೆಯ ಅನುದಾನ ಕಾಯದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್‌) ಹಣ ಬಿಡುಗಡೆ ಮಾಡಿ, ಜನರ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

ಕ್ರಿಮಿನಲ್ ಮೊಕದ್ದಮೆ:ಬೆಳೆಹಾನಿ ಹಾಗೂ ಮನೆಹಾನಿ ಸಮೀಕ್ಷೆಯಲ್ಲಿ ಹಿಂದಿನ ವರ್ಷಗಳಲ್ಲಿ ಲೋಪವೆಸಗಿದ ಸಿಬ್ಬಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಹಾನಿಯಾದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಸಮೀಕ್ಷೆ ನಡೆಸಿ ನಿಖರ ವರದಿ ಸಲ್ಲಿಸಬೇಕು. ತಹಶೀಲ್ದಾರ್‌ ಮತ್ತು ಉಪವಿಭಾಗಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳು ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಅನರ್ಹರಿಗೆ ಪರಿಹಾರ ನೀಡಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

2345 ಮನೆಗಳಿಗೆ ಹಾನಿ:ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನೆಹಾನಿ ಪರಿಹಾರ ಕಾರ್ಯಗಳ ಕುರಿತಂತೆ ಮಾಹಿತಿ ನೀಡಿ, 2345 ಮನೆಗಳು ಜೂನ್‌ನಿಂದ ಆಗಸ್ಟ್‌ವರೆಗೆ ಹಾನಿಯಾಗಿದ್ದು, ಈ ಪೈಕಿ 1028 ಮನೆಗಳನ್ನು ಅಂಗೀಕರಿಸಲಾಗಿದೆ. ಈಗಾಗಲೇ ₹2.31 ಕೋಟಿ ಯನ್ನು ಎನ್‌.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

8,134 ಹೆಕ್ಟೇರ್‌ ಬೆಳೆಹಾನಿ

ಜಿಲ್ಲೆಯಲ್ಲಿ 8,314 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದ್ದು, ₹5.8 ಕೋಟಿ ಬೆಳೆನಷ್ಟ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬೆಳೆನಷ್ಟಕ್ಕೆ ಸಂಬಂಧಿಸಿದಂತೆ ಶೇ 70ರಷ್ಟು ಜಂಟಿ ಸಮೀಕ್ಷೆ ಪೂರ್ಣಗೊಂಡಿದೆ. 1588 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದ್ದು, ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ₹2.29 ಕೋಟಿ ಪರಿಹಾರ ಪಾವತಿ ಮಾಡಬೇಕಿದೆ ಎಂದು ಕೃಷಿ ಜಂಟಿ ನಿರ್ದೇಶಕ ಮತ್ತು ತೋಟಗಾರಿಕೆ ಉಪನಿರ್ದೇಶಕ ಮಾಹಿತಿ ನೀಡಿದರು.

ಕೋವಿಡ್‌ ಪರೀಕ್ಷೆ ಹೆಚ್ಚಿಸಲು ಸೂಚನೆ

ಕೋವಿಡ್ ಮೂರನೇ ಅಲೆ ತಡೆಗಟ್ಟಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಸೋಂಕಿತರನ್ನು ಕಡ್ಡಾಯವಾಗಿ ಆಸ್ಪತ್ರೆಗಳಲ್ಲೇ ದಾಖಲಿಸಿ 10 ದಿನ ಚಿಕಿತ್ಸೆ ನೀಡಬೇಕು. ಪಾಸಿಟಿವ್ ಪ್ರಕರಣಗಳು ಕಡಿಮೆ ಇದ್ದರೂ, ನಿತ್ಯ 2,500 ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದು ಸಚಿವ ಬಿ.ಸಿ.ಪಾಟೀಲ ಸೂಚಿಸಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್‌ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT