ಹಾವೇರಿ: ರಾಜ್ಯದ ವಿವಿಧ ಸರ್ಕಾರಿ ಶುಶ್ರೂಷಾ ಶಾಲೆಗಳಲ್ಲಿನ ಸಾವಿರಾರು ನರ್ಸಿಂಗ್ ವಿದ್ಯಾರ್ಥಿಗಳು ಶಿಷ್ಯವೇತನ (ಸ್ಟೈಪೆಂಡ್) ಸಿಗದೆ ಕಂಗಾಲಾಗಿದ್ದಾರೆ. ಪುಸ್ತಕ ಖರೀದಿ ಮತ್ತು ಕಾಲೇಜು ಶುಲ್ಕ ಕಟ್ಟಲು ಹಣವಿಲ್ಲದೆ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಹಾವೇರಿ, ವಿಜಯಪುರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸರ್ಕಾರಿ ಶುಶ್ರೂಷಾ ಶಾಲೆಗಳಲ್ಲಿ ಜಿಎನ್‌ಎಂ (ಜನರಲ್ ನರ್ಸಿಂಗ್ ಅಂಡ್ ಮಿಡ್‌ವೈಫರಿ) ಕೋರ್ಸ್ ಓದುತ್ತಿರುವ ನರ್ಸಿಂಗ್ ವಿದ್ಯಾರ್ಥಿಗಳಿಗೆ ಐದಾರು ವರ್ಷಗಳಿಂದ ಸಮರ್ಪಕವಾಗಿ ಶಿಷ್ಯವೇತನ ಸಿಕ್ಕಿಲ್ಲ ಎಂಬ ದೂರುಗಳು ಇವೆ.
₹2 ಕೋಟಿ ಬಾಕಿ: ಹಾವೇರಿ ಜಿಲ್ಲೆಯ ಸರ್ಕಾರಿ ಶುಶ್ರೂಷಾ ಶಾಲೆಯಲ್ಲಿ 2019ರಿಂದ 2023ರ ಆಗಸ್ಟ್‌ವರೆಗೆ ವ್ಯಾಸಂಗ ಮಾಡಿದ 421 ವಿದ್ಯಾರ್ಥಿಗಳಿಗೆ ₹66.23 ಲಕ್ಷ ಮೊತ್ತದ ಶಿಷ್ಯವೇತನ ಕೊಡುವುದು ಬಾಕಿ ಇದೆ. ದಾವಣಗೆರೆ ನರ್ಸಿಂಗ್ ಕಾಲೇಜಿಗೆ ₹12 ಲಕ್ಷ, ಮಂಗಳೂರಿನ ನರ್ಸಿಂಗ್ ಕಾಲೇಜಿಗೆ ₹48 ಲಕ್ಷ, ಚಿತ್ರದುರ್ಗ ನರ್ಸಿಂಗ್ ಕಾಲೇಜಿಗೆ ₹28 ಲಕ್ಷ ಸೇರಿ ಒಟ್ಟು 7 ಕಾಲೇಜುಗಳಿಗೆ ಅಂದಾಜು ₹2 ಕೋಟಿ ಬಿಡುಗಡೆಯಾಗಬೇಕಿದೆ.
‘ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಪೂರ್ಣಪ್ರಮಾಣದ ಅನುದಾನ ಬಿಡುಗಡೆ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಶಿಷ್ಯವೇತನ ನೀಡುವಂತೆ ವಿದ್ಯಾರ್ಥಿಗಳ ಪೋಷಕರ ಒತ್ತಡವೂ ಹೆಚ್ಚುತ್ತಿದೆ. ಅದಕ್ಕೆ ಬಾಕಿ ಉಳಿದ ಅನುದಾನ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ನರ್ಸಿಂಗ್ ಕಾಲೇಜುಗಳ ಪ್ರಾಂಶುಪಾಲರು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಅನುದಾನ ವಾಪಸ್!: ‘ಹಾವೇರಿ ನರ್ಸಿಂಗ್ ಕಾಲೇಜಿಗೆ 2021ರ ಜುಲೈನಲ್ಲಿ ₹5.70 ಲಕ್ಷ ಮತ್ತು 2022ರ ಫೆಬ್ರುವರಿಯಲ್ಲಿ ₹5.71 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಈ ಶಿಷ್ಯವೇತನ ಅನುದಾನವನ್ನು ಸಂಬಂಧಿಸಿದ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟುಗಳಿಗೆ ಜಮಾ ಮಾಡಲಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ₹9.85 ಲಕ್ಷ ಅನುದಾನವು ‘ಮ್ಯಾಪಿಂಗ್’ ಆಗಿಲ್ಲ ಎಂಬ ತಾಂತ್ರಿಕ ಕಾರಣದಿಂದ ಡಿ.ಎಂ.ಇ (ಡೈರೆಕ್ಟರ್ ಆಫ್ ಮೆಡಿಕಲ್ ಎಜುಕೇಷನ್) ಅಕೌಂಟಿಗೆ ವಾಪಸ್ ಹೋಗಿದೆ’ ಎಂದು ಪ್ರಾಂಶುಪಾಲರಾದ ಸರಸ್ವತಿ ವೈ.ಎಚ್. ತಿಳಿಸಿದರು.
ವಿದ್ಯಾರ್ಥಿನಿಯರ ಕಣ್ಣೀರು: ‘ಪ್ರವೇಶ ಶುಲ್ಕ ₹11 ಸಾವಿರ, ಪುಸ್ತಕ ಖರೀದಿಗೆ ₹4 ಸಾವಿರ, ಪರೀಕ್ಷೆ ಶುಲ್ಕ ₹4 ಸಾವಿರ ಸೇರಿ ಇತರ ಶೈಕ್ಷಣಿಕ ಖರ್ಚುಗಳನ್ನು ಭರಿಸಲು ಪೋಷಕರು ಸಾಲ ಮಾಡಿ, ನಮ್ಮನ್ನು ಓದಿಸುತ್ತಿದ್ದಾರೆ. ಸರ್ಕಾರ ಪ್ರತಿ ತಿಂಗಳು ನೀಡಬೇಕಿದ್ದ ₹1,500ರಿಂದ ₹1,900 ಶಿಷ್ಯವೇತನ ಸಿಗದೆ ಪರದಾಡುತ್ತಿದ್ದೇವೆ’ ಎಂದು ನರ್ಸಿಂಗ್ ವಿದ್ಯಾರ್ಥಿನಿಯರು ತಿಳಿಸಿದರು
‘ಸೇವಾಸಿಂಧು’ ಮೂಲಕ ಶಿಷ್ಯವೇತನ ಶೀಘ್ರ ‘ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್’ (ಎಸ್‌ಎಸ್‌ಪಿ)ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಕಾರಣ ‘ಸೇವಾಸಿಂಧು’ ಪೋರ್ಟಲ್ ಮೂಲಕ ನರ್ಸಿಂಗ್ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಶಿಷ್ಯವೇತನ ಜಮಾ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಅನುದಾನದ ಕೊರತೆಯಿಲ್ಲ. ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಇನ್ನೆರಡು ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಿಗಲಿದೆ. ಡಾ.ಸುಜಾತಾ ರಾಥೋಡ್ ನಿರ್ದೇಶಕರು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.