ನಿಲ್ಲದ ಮರಳು ಅಕ್ರಮ ಗಣಿಗಾರಿಕೆ

7

ನಿಲ್ಲದ ಮರಳು ಅಕ್ರಮ ಗಣಿಗಾರಿಕೆ

Published:
Updated:
ಹಾವನೂರ ಗ್ರಾಮದ ಬಳಿ ತುಂಗಭದ್ರ ನದಿಯ ದಡದಲ್ಲಿ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆ

ಗುತ್ತಲ: ಇಲ್ಲಿಗೆ ಸಮೀಪದ ಹಾವನೂರ ಗ್ರಾಮದಿಂದ ಶಾಕಾರ ಗ್ರಾಮಕ್ಕೆ ಹೋಗುವ ಮಾರ್ಗದ ತುಂಗಭದ್ರಾ ನದಿಯ ದಡದಲ್ಲಿ ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮೌನವಾಗಿರುವುದು ಗ್ರಾಮಸ್ಥರಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಜಿಲ್ಲೆಯಲ್ಲಿ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ಪ್ರತಿನಿತ್ಯ ಇಲ್ಲಿಂದ 20 ರಿಂದ 25 ಲಾರಿ ಲೋಡ್‌ ಮರಳು ವಿವಿಧ ಭಾಗಗಳಿಗೆ ನಿರಂರತವಾಗಿ ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ಹಾವನೂರ ಮತ್ತು ಹರಳಹಳ್ಳಿ ಗ್ರಾಮಗಳಲ್ಲಿ ಅತಿ ಹೆಚ್ಚು ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತದೆ ಎಂಬ ಆರೋಪ ಕೇಳಿಬಂದಿದೆ.

‘ಸುಮಾರು 20 ವರ್ಷಗಳಿಂದ ನಿರಂತರವಾಗಿ ಈ ಸ್ಥಳದಲ್ಲಿ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಈವರೆಗೂ ಒಂದರಿಂದ ಎರಡು ಬಾರಿ ಮಾತ್ರ ದಾಳಿ ಮಾಡಿದ್ದನ್ನು ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಅಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ತಡೆಗೆ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘ತುಂಗಭದ್ರಾ ನದಿಯ ದಡದಲ್ಲಿ ಪುಕ್ಕಟ್ಟೆ ಸಿಗುವ ಮರಳಿಗೆ ಹಾವೇರಿ ನಗರದಲ್ಲಿ ₹ 35 ಸಾವಿರದಿಂದ ₹ 40 ಸಾವಿರಕ್ಕೆ ಒಂದು ಲಾರಿ ಲೋಡ್‌ ಮರಳು ಮಾರಾಟವಾಗುತ್ತಿದೆ. ಹಗಲು ದರೋಡೆ ಮಾಡುವ ಮರಳು ಅಕ್ರಮ ದಂಧೆಕೋರರಿಗೆ ಅಧಿಕಾರಿಗಳು ಕಡಿವಾಣ ಹಾಕಲು ಹಿಂದೇಟು ಹಾಕಲು ಕಾರಣವೇನು ಎಂಬುದು ತಿಳಿಯದಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿದರೆ ಪ್ರತಿ ತಿಂಗಳು ಜಿಲ್ಲೆಯ ತುಂಗಭದ್ರಾ ಮತ್ತು ವರದಾ ನದಿ ದಡದಲ್ಲಿ ನಡೆಯುವ ಮರಳು ಅಕ್ರಮ ಗಣಿಗಾರಿಕೆಯಿಂದ ಜಿಲ್ಲೆಯಿಂದ ₹ 1 ಕೋಟಿಗೂ ಅಧಿಕ ಆದಾಯ ಗಳಿಸಬಹುದು’ ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !