ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರುಗದ್ದೆಯಲ್ಲ, ಇದು ಗ್ರಾಮದ ರಸ್ತೆ!

ಮೂಲಸೌಕರ್ಯ ವಂಚಿತ ಇನಾಂಯಲ್ಲಾಪುರ ಶಾಲೆ: ಬಸ್‌ಗಳ ಕೊರತೆ– ಜನರ ಪರದಾಟ
Last Updated 26 ಜುಲೈ 2022, 19:30 IST
ಅಕ್ಷರ ಗಾತ್ರ

ಅಕ್ಕಿಆಲೂರ: ಹಾವೇರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಪ್ರದೇಶ, ಹೋಬಳಿ ಕೇಂದ್ರ ಸ್ಥಾನ ಅಕ್ಕಿಆಲೂರಿನಿಂದ ಕೂಗಳತೆಯ ದೂರದಲ್ಲಿರುವ ಇನಾಂಯಲ್ಲಾಪುರ ಗ್ರಾಮ ಸಮಸ್ಯೆಗಳನ್ನೇ ಹೊದ್ದು ಮಲಗಿದ್ದರೂ ಜವಾಬ್ದಾರಿ ಸ್ಥಾನದಲ್ಲಿರುವವರು ಮಾತ್ರ ಕಣ್ತೆರೆಯುತ್ತಿಲ್ಲ. ಗ್ರಾಮಸ್ಥರ ಗೋಳು ಹೇಳತೀರದ್ದಾಗಿದೆ.

ಇನಾಂಯಲ್ಲಾಪುರ ಗ್ರಾಮದಲ್ಲಿ 231 ಮನೆಗಳಿದ್ದು, 1050ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮಸ್ಥರ ನೆಮ್ಮದಿಯ ಜೀವನಕ್ಕೆ ಮಾತ್ರ ಇಲ್ಲಿ ಮೂಲತ ಸೌಲಭ್ಯಗಳಿಲ್ಲ. ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ನೋವು ಗ್ರಾಮಸ್ಥರನ್ನು ಕಾಡುತ್ತಿದೆ.

ಗ್ರಾಮದ ಒಳಗಿನ ಬಹುತೇಕ ಎಲ್ಲ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಸುಗಮ ಸಂಚಾರಕ್ಕೆ ಸರ್ಕಸ್ ಮಾಡಬೇಕಾಗಿದೆ. ಬಸವೇಶ್ವರ ಓಣಿಯೊಂದನ್ನು ಹೊರತು ಪಡಿಸಿದರೆ ಮಾಯವ್ವನ ಗುಡಿ ಓಣಿ, ಕಲಕೇರಿ ಮನೆಯವರ ಓಣಿ, ಹಿರೇಮಠ ಓಣಿ, ಹಣ್ಣಿ ಮನೆಯವರ ಓಣಿಗಳಲ್ಲಿ ಸಂಚಾರಕ್ಕೆ ಪ್ರಯಾಸ ಪಡುವಂಥ ಸ್ಥಿತಿ ಇದೆ.

ಮಳೆ ಸುರಿದಾಗಲೆಲ್ಲ ಇಲ್ಲಿನ ರಸ್ತೆಗಳಲ್ಲಿ ಸಂಚಾರ ಕಷ್ಟಸಾಧ್ಯ. ದ್ವಿಚಕ್ರ ವಾಹನ ಸವಾರರು ಹರಸಾಹಸ ಮಾಡಬೇಕಿದ್ದು, ಕಾರು, ಟಂಟಂ, ಟಾಟಾ ಏಸ್ ಸೇರಿದಂತೆ ಇತರ ವಾಹನಗಳ ಪ್ರಯಾಣ ಇಲ್ಲಿ ಅಘೋಷಿತ ನಿಷಿದ್ಧ.

ಕಳೆದ ವರ್ಷ ಮಳೆಗಾಲದಲ್ಲಿ ರಸ್ತೆಗಳಲ್ಲಿ ಭತ್ತದ ನಾಟಿ ಕೈಗೊಂಡು ಗ್ರಾಮಸ್ಥರು ಪ್ರತಿಭಟಿಸಿದರೂ ಕೂಡ ಯಾವ ಪ್ರಯೋಜನವಾಗಿಲ್ಲ ಎನ್ನುವುದು ಗಮನಾರ್ಹ. ರಸ್ತೆಗಳಲ್ಲಿ ಹಿಡಿಶಾಪ ಹಾಕುತ್ತಲೇ ಸಂಚರಿಸುವಂಥ ಸ್ಥಿತಿ ಇದೆ.

ಇನ್ನು ಗ್ರಾಮದ ಮಧ್ಯ ಭಾಗದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಇಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇಲ್ಲ. ಗೌಜು, ಗದ್ದಲದ ಮಧ್ಯೆ ವಿದ್ಯಾರ್ಥಿಗಳು ಪಾಠ ಪ್ರವಚನದಲ್ಲಿ ತೊಡಗುವಂತಾಗಿದೆ. ಶಾಲೆಯನ್ನು ಬೇರೊಂದು ಪ್ರದೇಶಕ್ಕೆ ಸ್ಥಳಾಂತರಿಸಿ, ಮಕ್ಕಳಿಗೆ ಮೈದಾನ ಸೇರಿದಂತೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಕೆಲಸವೂ ಇಂದಿಗೂ‌ ನನಸಾಗಿಲ್ಲ.

ಗ್ರಾಮದಲ್ಲಿ ಸಾರಿಗೆ ಸಂಪರ್ಕವೂ ಸರಿ ಇಲ್ಲ. ಬೆಳಗ್ಗೆ ಒಂದು ಬಸ್ಸು ಬರುವುದನ್ನು ಬಿಟ್ಟರೆ ಮತ್ತಿನ್ಯಾವ ಬಸ್ಸುಗಳೂ ಇಲ್ಲಿ‌ ಬರದಿರುವುದರಿಂದ ಖಾಸಗಿ ಸಾರಿಗೆಯನ್ನೇ ಅವಲಂಬಿಸುವಂತಾಗಿರುವುದು ಸೋಜಿಗ.

***

ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆಗಳ ಸುಧಾರಣೆಗೆ ಕ್ರಮ‌ ಕೈಗೊಳ್ಳಲಾಗುವುದು. ಮೂಲ ಸೌಲಭ್ಯ ಕಲ್ಪಿಸಲು ಗಮನ ನೀಡಲಾಗುವುದು
– ಬಾಯಕ್ಕ ಕೋಳಿ, ಕಲ್ಲಾಪುರ ಪಿಡಿಒ

***

ಗ್ರಾಮದ ರಸ್ತೆಗಳ ಸುಧಾರಣೆ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಪ್ರತಿಭಟಿಸಿದ್ದೇವೆ. ಆದರೂ ಸಹ ಉಪಯೋಗವಾಗಿಲ್ಲ
– ಶಿವಕುಮಾರ ಹಣ್ಣಿ, ಗ್ರಾಮಸ್ಥ, ಇನಾಂಯಲ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT