ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ನಿರಂತರ ಮಳೆ- ಕೊಚ್ಚಿ ಹೋದ ಬೆಳೆ

9062 ಹೆಕ್ಟೇರ್‌ ಕೃಷಿ ಬೆಳೆ, 685 ಹೆಕ್ಟೇರ್‌ ತೋಟಗಾರಿಕಾ ಬೆಳೆ ನೀರುಪಾಲು
Last Updated 23 ಜುಲೈ 2022, 6:51 IST
ಅಕ್ಷರ ಗಾತ್ರ

ಹಾವೇರಿ:ಜುಲೈ ತಿಂಗಳಲ್ಲಿ 15 ದಿನಗಳು ನಿರಂತರವಾಗಿ ಸುರಿದ ಮಳೆಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನೀರುಪಾಲಾಗಿ ರೈತರು ಕಣ್ಣೀರು ಸುರಿಸುವಂತಾಗಿದೆ. ಜಿಲ್ಲೆಯಲ್ಲಿ 9,062 ಹೆಕ್ಟೇರ್‌ ಕೃಷಿ ಬೆಳೆ ಮತ್ತು 685 ಹೆಕ್ಟೇರ್‌ ತೋಟಗಾ
ರಿಕಾ ಬೆಳೆಗಳು ಹಾನಿಯಾಗಿವೆ.

ನಿರಂತರ ಮಳೆ ಮತ್ತು ನೆರೆಯಿಂದ ಜಿಲ್ಲೆಯಲ್ಲಿ ಮೆಕ್ಕೆಜೋಳ 1740 ಹೆಕ್ಟೇರ್‌, ಶೇಂಗಾ 22 ಹೆಕ್ಟೇರ್‌, ಸೋಯಾಬಿನ್‌ 192 ಹೆಕ್ಟೇರ್‌, ಹತ್ತಿ 151 ಹೆಕ್ಟೇರ್‌ ಸೇರಿದಂತೆ ಒಟ್ಟು 9062 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿದೆ. 19,867 ರೈತರಿಗೆ ಸುಮಾರು ₹15 ಕೋಟಿಯಷ್ಟು ಪರಿಹಾರ ನೀಡಬೇಕಿದೆ.

ಮೆಣಸಿನಕಾಯಿ 177 ಹೆಕ್ಟೇರ್‌, ಎಲೆಕೋಸು 152 ಹೆಕ್ಟೇರ್‌, ಟೊಮೆಟೊ 59 ಹೆಕ್ಟೇರ್‌, ಈರುಳ್ಳಿ 49 ಹೆಕ್ಟೇರ್‌ ಸೇರಿ
ದಂತೆ ಒಟ್ಟು 685 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಈ ಹಾನಿಯಿಂದ ಒಟ್ಟು ₹7.52 ಕೋಟಿ ನಷ್ಟವಾಗಿದ್ದು, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ₹93 ಲಕ್ಷವನ್ನು ರೈತರಿಗೆ ಪರಿಹಾರ ನೀಡಬೇಕಿದೆ.

ವರದಾ, ತುಂಗಭದ್ರಾ ಮತ್ತು ಕುಮದ್ವತಿ ನದಿಗಳು ಉಕ್ಕಿ ಹರಿದ ಪರಿಣಾಮ ನದಿ ಅಕ್ಕಪಕ್ಕದ ಜಮೀನು
ಗಳು ಜಲಾವೃತಗೊಂಡಿವೆ. ಕೃಷಿ ಜಮೀನು ಸವಳಾಗುವ ಆತಂಕ ರೈತರಿಗೆ ಕಾಡುತ್ತಿದೆ.

ಗಾಯದ ಮೇಲೆ ಬರೆ

2019ರಲ್ಲಿ ಅತಿವೃಷ್ಟಿ ಮತ್ತು ನೆರೆ, ನಂತರ 2020 ಮತ್ತು 2021ರಲ್ಲಿ ಕೋವಿಡ್‌ ಲಾಕ್‌ಡೌನ್‌ನಿಂದ ಮಾರುಕಟ್ಟೆ ಸೌಲಭ್ಯ ಸಿಗದೆ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ, ನಿರಂತರವಾಗಿ ಸುರಿದ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಿ, ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂಬುದು ರೈತರ ಒಕ್ಕೊರಲ ಆಗ್ರಹವಾಗಿದೆ.

ಭಾರಿ ಮಳೆ

ಜುಲೈ 1ರಿಂದ ಜುಲೈ 17ರವರೆಗೆ 9.2 ಸೆಂ.ಮೀ. ವಾಡಿಕೆ ಮಳೆ ಬದಲಾಗಿ ಬರೋಬ್ಬರಿ 13.4 ಸೆಂ.ಮೀ. ಮಳೆ ಸುರಿಯಿತು. ಅಂದರೆ ಶೇ 45ರಷ್ಟು ಹೆಚ್ಚುವರಿ ಮಳೆಯಾಯಿತು. ಜೂನ್‌ ತಿಂಗಳಲ್ಲಿ 11.9 ಸೆಂ.ಮೀ. ವಾಡಿಕೆ ಮಳೆಯ ಬದಲಾಗಿ ಕೇವಲ 6.1 ಸೆಂ.ಮೀ. ಮಾತ್ರ ಮಳೆಯಾಗಿತ್ತು. ಈ ವರ್ಷ ಜನವರಿಯಿಂದ ಜುಲೈ 17ರವರೆಗೆ 33.3 ಸೆಂ.ಮೀ ವಾಡಿಕೆ ಮಳೆಯ ಬದಲಾಗಿ 49.4 ಸೆಂ.ಮೀ. ಹೆಚ್ಚುವರಿ ಮಳೆ ಸುರಿದಿದೆ.

ಕಂದು ಬಣ್ಣಕ್ಕೆ ತಿರುಗಿದ ಬೆಳೆ

‘ತಗ್ಗು ಪ್ರದೇಶದಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ಕಂದು ಬಣ್ಣಕ್ಕೆ ತಿರುಗಿವೆ. ಈರುಳ್ಳಿ, ಬೆಳ್ಳುಳ್ಳಿ ಬೆಳೆಯಲ್ಲಿ ಕಳೆ ಹೆಚ್ಚಾಗಿದೆ. ಮೇಲುಗೊಬ್ಬರವಾಗಿ ಯೂರಿಯಾ ನೀಡುತ್ತಿದ್ದೇವೆ. ಯೂರಿಯಾ ಗೊಬ್ಬರ ಸಮರ್ಪಕವಾಗಿ ಸಿಗದ ಕಾರಣ ರೈತರಿಗೆ ತೊಂದರೆಯಾಗಿದೆ’ ಎನ್ನುತ್ತಾರೆ ಯತ್ತಿನಹಳ್ಳಿಯ ರೈತ ಚನ್ನಬಸಪ್ಪ ಭರಮಪ್ಪ ಮಾಚೇನಹಳ್ಳಿ.

ಹೊಲಗಳಿಗೆ ಅಧಿಕಾರಿಗಳೇ ಬಂದಿಲ್ಲ!

‘ಮಳೆಯಿಂದ ಹಾನಿಯಾದ ರೈತರ ಬಹುತೇಕ ಹೊಲಗಳಿಗೆ ಅಧಿಕಾರಿಗಳು ಸಮೀಕ್ಷೆ ಮಾಡಲು ಬಂದೇ ಇಲ್ಲ. ಬಂದಿದ್ದರೆ ಬೆಳೆಹಾನಿಯ ಸ್ಪಷ್ಟ ಚಿತ್ರಣ ಗೊತ್ತಾಗುತ್ತಿತ್ತು. ಕಂದು ಬಣ್ಣಕ್ಕೆ ತಿರುಗಿದ ಬೆಳೆ ನೋಡಿದ್ದರೆ ಅದು ಉಳಿಯುತ್ತಿದೆಯೋ ಅಳಿಯುತ್ತದೆಯೇ ಎಂಬುದು ತಿಳಿಯುತ್ತಿತ್ತು. ಕಚೇರಿಯಲ್ಲಿ ಕುಳಿತು ಸರ್ವೆ ನಂಬರ್ ನೋಡಿಕೊಂಡು ಅಂದಾಜು ಪಟ್ಟಿ ತಯಾರಿಸುತ್ತಿದ್ದಾರೆ. ಇದಕ್ಕೆ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಕಾರಣವಿರಬಹುದು.ನಿಖರ ಸಮೀಕ್ಷೆ ಮಾಡಿ, ಸೂಕ್ತ ಪರಿಹಾರ ಕೊಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಒತ್ತಾಯಿಸಿದರು.

***

ಜಂಟಿ ಸಮೀಕ್ಷೆ ಕಾರ್ಯ ಅಂತಿಮ ಹಂತದಲ್ಲಿದ್ದು, ಪರಿಹಾರ ತಂತ್ರಾಂಶದಲ್ಲಿ ಡೇಟಾ ಎಂಟ್ರಿಯಾದ ನಂತರ ರೈತರ ಖಾತೆಗೆ ಹಣ ಜಮೆಯಾಗಲಿದೆ
– ಪ್ರದೀಪ ಎಲ್‌, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ, ಹಾವೇರಿ

***

ಕಳೆದ ವರ್ಷ ರಾಜ್ಯ ಸರ್ಕಾರ ಬೆಳೆ ಹಾನಿಗೆ ಎನ್‌ಡಿಆರ್‌ಎಫ್‌ ಪರಿಹಾರದ ಜತೆಗೆ ಹೆಚ್ಚುವರಿ ದರ ಘೋಷಿಸಿತ್ತು. ಆದರೆ, ಹೆಚ್ಚುವರಿ ದರ ರೈತರಿಗೆ ಸಿಗಲೇ ಇಲ್ಲ.
– ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT