ಜಿಲ್ಲಾದ್ಯಂತ ಇಂಧ್ರಧನುಷ್ ನಾಳೆಯಿಂದ

7
ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಸಿದ್ಧತೆ

ಜಿಲ್ಲಾದ್ಯಂತ ಇಂಧ್ರಧನುಷ್ ನಾಳೆಯಿಂದ

Published:
Updated:

ಹಾವೇರಿ:  ಪ್ರತಿ ಮಗು ಮತ್ತು ತಾಯಂದಿರಿಗೆ ಗ್ರಾಮ ಸ್ವರಾಜ್ ಅಭಿಯಾನದ ‘ಮಿಷನ್ ಇಂದ್ರಧನುಷ್’ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಆ.13 ರಿಂದ ನಡೆಯಲಿದೆ. ವಿಶೇಷ ಕಾಳಜಿ ಮತ್ತು ಜವಾಬ್ದಾರಿಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆದ ಗ್ರಾಮ ಸ್ವರಾಜ್ ಅಭಿಯಾನದಡಿ ಸಂಪೂರ್ಣ ಲಸಿಕಾ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಮಕ್ಕಳು ಹಾಗೂ ತಾಯಂದಿರು ನಿಯಮಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ವಂಚಿತರನ್ನು ಗುರುತಿಸಿ ಲಸಿಕೆ ಹಾಕಲು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಅಭಿಯಾನವನ್ನು ಎಲ್ಲ ಜಿಲ್ಲೆಗಳಿಗೂ ಸರ್ಕಾರ ವಿಸ್ತರಿಸಿದೆ’ ಎಂದರು.

ಲಸಿಕೆ ಪ್ರತಿ ಮಗುವಿನ ಹಕ್ಕು. ಐದು ವರ್ಷಗಳಲ್ಲಿ ಏಳು ಬಾರಿ ಲಸಿಕೆ ಹಾಕಿಸಿಕೊಳ್ಳಬೇಕು. ಕರಪತ್ರಗಳ ಮೂಲಕ ಜಾಗೃತಿ ಮೂಡಿಸಬೇಕು. ವ್ಯಾಕ್ಸಿನೇಟರ್ ಕೊರತೆ ಇದ್ದರೆ ಖಾಸಗಿ ಆರೋಗ್ಯ ಸಹಾಯಕರ ಸೇವೆಯನ್ನು ಪಡೆಯಬೇಕು. ಇದರ ಜೊತೆ ಶೌಚಾಲಯಗಳ ಬಳಕೆ, ಅಂಗನವಾಡಿ, ಆಸ್ಪತ್ರೆ ಸೇರಿದಂತೆ ಗ್ರಾಮಗಳ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಆಸ್ಪತ್ರೆಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಲೇಬರ್ ವಾರ್ಡ್‌ಗಳನ್ನು ಹೈಟೆಕ್ ಮಾಡಬೇಕು. ಅತ್ಯುತ್ತಮ ನಿರ್ವಹಣೆಯ ಮೂರು ಆಸ್ಪತ್ರೆಗಳ ಲೇಬರ್ ವಾರ್ಡ್‌ಗಳಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

ತಾಯಂದಿರು ಹಾಗೂ ಮಕ್ಕಳ ಮರಣ ಪ್ರಮಾಣ ತಗ್ಗಿಸಬೇಕು. ಎಚ್.ಐ.ವಿ.ಸೋಂಕು ಹಾಗೂ ಕ್ಷಯ ಬಗ್ಗೆಯೂ ಗಮನಹರಿಸಬೇಕು ಎಂದರು.

ಜಿಲ್ಲೆಯಲ್ಲಿ ಆ. 13,14, 17 ಮತ್ತು 18ರಂದು ಮೊದಲ ಹಂತ, ಸೆಪ್ಟೆಂಬರ್ 10, 11, 14 ಮತ್ತು 15ರಂದು ಎರಡನೇ ಹಂತ ಹಾಗೂ ಅಕ್ಟೋಬರ್ 9, 10,12 ಮತ್ತು 15 ರಂದು ಮೂರನೇ ಹಂತದಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ ವಿವರಿಸಿದರು.

ಪ್ರಸವಪೂರ್ವ ಆರೈಕೆ, ಗರ್ಭಿಣಿಯರಿಗೆ ಅನಿಮಿಯ, ಎಚ್.ಐ.ವಿ. ಪರೀಕ್ಷೆ, ಅಪೌಷ್ಠಿಕತೆ, ವಿಕಲತೆ, ಸಾಂಕ್ರಾಮಿಕ ರೋಗಗಳ ನಿರ್ಮೂಲನೆ, ಮಕ್ಕಳಿಗೆ ಜಂತು ಹುಳು ನಿರ್ಮೂಲನೆ, ಲಕ್ಷ್ಯ ಯೋಜನೆಯಡಿ ಲೇಬರ್ ಕೊಠಡಿಗಳ ಸ್ವಚ್ಛತೆ, ಸ್ತನ್ಯಪಾನದ ಬಗ್ಗೆ ಜಾಗೃತಿ, ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ನೆರವು ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಬೆಳಗಾವಿ ವಿಭಾಗದ ಅಧಿಕಾರಿ ಡಾ.ಸಿದ್ಧಲಿಂಗಯ್ಯ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !