ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಗೆ ಕೈಗಾರಿಕಾ ಟೌನ್‌ಶಿಪ್ ಶೀಘ್ರ: ಬಸವರಾಜ ಬೊಮ್ಮಾಯಿ

ಜನಸ್ನೇಹಿ ಆಡಳಿತಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 1 ಸೆಪ್ಟೆಂಬರ್ 2021, 15:22 IST
ಅಕ್ಷರ ಗಾತ್ರ

ಹಾವೇರಿ: ‘ರಾಜ್ಯದಲ್ಲಿ ಜನಪರ ಹಾಗೂ ಜನಸ್ನೇಹಿ ಆಡಳಿತ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಜನರ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾವಿಯಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರೆವೇರಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಹಾವೇರಿ ಜಿಲ್ಲೆಯ ಪ್ರಗತಿಯು ಎರಡು ವರ್ಷಗಳಲ್ಲಿ ಹೊಸ ಆಯಾಮವನ್ನು ಕಂಡುಕೊಂಡಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ವಿಸ್ತರಣೆ ಮಾಡಲಾಗುವುದು ಎಂದರು.

ಹಾವೇರಿ ಕೈಗಾರಿಕಾ ಟೌನ್‌ಶಿಪ್ ಅವಶ್ಯಕತೆ ಇದ್ದು, ಮುಂದಿನ ವಾರ ಈ ಕುರಿತು ಸಭೆ ಕರೆದು ಚರ್ಚಿಸಲಾಗುವುದು. ತಾಂತ್ರಿಕ ಪರಿಣತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸುವ ನಿಟ್ಟಿನಲ್ಲಿ ‘ಕೈಗಾರಿಕಾ ಟೌನ್‌ಶಿಪ್’ ಸಹಕಾರಿಯಾಗಲಿದೆ. ಹೊಸ ತಂತ್ರಜ್ಞಾನದ ಮೂಲಕ ಹೆಚ್ಚು ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದರು.

ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಯಡಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯೂ ಸೇರಿದೆ. ಪರಿಸರವಾದಿಗಳೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯ:

ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪ್ರವೇಶ ಮಾಡುವ ವಿದ್ಯಾರ್ಥಿಗಳಿಗೆ 7 ದಿನ ಕ್ವಾರಂಟೈನ್ ಕಡ್ಡಾಯ ಎಂದ ಮುಖ್ಯಮಂತ್ರಿಗಳು ಶಾಲೆಗಳು ತೆರೆಯಲಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ನೀವು ಮನೆದೇವರು ಇದ್ದಂತೆ:

ಜಗತ್ತನ್ನೆಲ್ಲಾ ಅಡ್ಡಾಡಿ ಬಂದ್ರೂ ನಾವು ಕೊನೆಗೆ ಪೂಜೆ ಸಲ್ಲಿಸವುದು ಮನೆದೇವ್ರಿಗೆ. ನಾನು ನಾಡಿಗೆ ಮುಖ್ಯಮಂತ್ರಿಯಾದರೂ ಶಿಗ್ಗಾವಿ–ಸವಣೂರ ಕ್ಷೇತ್ರದ ಜನತೆಗೆ ಪ್ರೀತಿಯ ಬಸಣ್ಣನೇ. ಕ್ಷೇತ್ರದ ಜನರು ನನ್ನ ಪಾಲಿಗೆ ಮನೆದೇವರು ಇದ್ದಂತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತದಾರರ ಗುಣಗಾನ ಮಾಡಿದರು.

ಬೊಮ್ಮಾಯಿ‘ಆಧುನಿಕ ಭಗೀರಥ’

ಹಾವೇರಿ: ಜಿಲ್ಲೆಯಲ್ಲಿರುವ ಕೆರೆಗಳನ್ನು ತುಂಬಿಸಿ, ರೈತರ ಬದುಕನ್ನು ಹಸನು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಆಧುನಿಕ ಭಗೀರಥ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮೆಚ್ಚುಗೆ ವ್ಯಕ್ತಪಡಿಸಿದರು.

ನೀರಿಗೆ ಹಾಹಾಕಾರದ ಸಂದರ್ಭದಲ್ಲಿ ಎಲ್ಲ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಸಿಗಬೇಕು, ಕೃಷಿ ಜಮೀನುಗಳಿಗೆ ಅಗತ್ಯ ನೀರು ಪೂರೈಸಬೇಕು ಎಂದು ಬೊಮ್ಮಾಯಿ ಹಟ ತೊಟ್ಟಿದ್ದಾರೆ.ರಾಜ್ಯದಲ್ಲಿ ಐದು ಸಾವಿರಕ್ಕಿಂತ ಅಧಿಕ ಕೆರೆ ತುಂಬಿಸುವ ಯೋಜನೆಗೆ ₹17 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಒಂದು ಹನಿ ನೀರು ವ್ಯರ್ಥವಾಗದಂತೆ ಬೆಳೆ ಬೆಳೆಯಬೇಕು ಎಂದು ರೈತರಲ್ಲಿ ಮನವಿ ಮಾಡಿದರು.

ಜಿಲ್ಲಾ ಪ್ರವಾಸದ ಸಂದರ್ಭಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜು, ಸಿ.ಸಿ.ಪಾಟೀಲ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT