ಪನಾಮ ರೋಗ ನಿಯಂತ್ರಣಕ್ಕೆ ಬಾಳೆ ಗಿಡಕ್ಕೂ ಚುಚ್ಚುಮದ್ದು

7
ಹನುಮನಮಟ್ಟಿಯ ಕೃಷಿ ವಿಜ್ಞಾನಿ ಪ್ರಯೋಗ

ಪನಾಮ ರೋಗ ನಿಯಂತ್ರಣಕ್ಕೆ ಬಾಳೆ ಗಿಡಕ್ಕೂ ಚುಚ್ಚುಮದ್ದು

Published:
Updated:
Deccan Herald

ಹಾವೇರಿ: ಜನ–ಜಾನುವಾರುಗಳಿಗೆ ಚುಚ್ಚುಮದ್ದು ನೀಡುವುದು ಸಾಮಾನ್ಯ. ಆದರೆ, ಬಾಳೆಗಿಡಗಳಿಗೂ ಚುಚ್ಚುಮದ್ದು ನೀಡಿ ಚಿಕಿತ್ಸೆ ನೀಡುವಲ್ಲಿ ಹನುಮನಮಟ್ಟಿಯ ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಬಾಳೆಗಿಡಗಳಿಗೆ ಚುಚ್ಚುಮದ್ದು ನೀಡುವ ಮೂಲಕ ಪನಾಮ ರೋಗ ನಿಯಂತ್ರಣ ಮಾಡುವುದಲ್ಲದೇ, ಅವುಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಸ್ಯರೋಗಶಾಸ್ತ್ರ ಪ್ರಾಧ್ಯಾಪಕ, ಕೃಷಿ ವಿಜ್ಞಾನಿ ಡಾ.ರವಿಕುಮಾರ ಎಂ.ಆರ್. ಅವರ ಪ್ರಯೋಗವು ಫಲ ನೀಡಿದೆ. ಇದನ್ನು ರೈತರ ಹೊಲದಲ್ಲಿ ಪ್ರಯೋಗಿಸುವಲ್ಲಿ ತೋಟಗಾರಿಕಾ ವಿಜ್ಞಾನಿ ಡಾ. ಹರೀಶ ಡಿ.ಕೆ ಮತ್ತು ಮಣ್ಣು ವಿಜ್ಞಾನಿ ಡಾ. ಕುಮಾರ್ ಬಿ.ಎಚ್ ಸಾಥ್ ನೀಡಿದ್ದಾರೆ.

ಪನಾಮ ಸೊರಗು ರೋಗ 
ಪನಾಮ ರೋಗವು ಮಣ್ಣಿನಲ್ಲಿರುವ ಪ್ಯುಜೇರಿಯಂ ಅಕ್ಸಿಸ್ಟೋರಿಯಂ ಕ್ಯುಬೆನ್ಸ್ ಎಂಬ ಶಿಲೀಂದ್ರದಿಂದ ಮತ್ತು ರೋಗ ತಗುಲಿದ ಕಂದುಗಳಿಂದ ಹರಡುತ್ತದೆ. ಶಿಲೀಂದ್ರಗಳು ಬೇರುಗಳ ಮೂಲಕ ಗಿಡಕ್ಕೆ ಸೇರುತ್ತವೆ. ರೋಗ ತಗುಲಿದ ಕಂದುಗಳ ಕೋಶಗಳನ್ನು ಆವರಿಸಿಕೊಂಡು, ಪೋಷಕಾಂಶಗಳ ಮತ್ತು ನೀರಿನ ಚಲನೆಯಲ್ಲಿ ತಡೆ ಉಂಟಾಗುತ್ತದೆ. ಇದರಿಂದ ಗಿಡದ ಬುಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ತೊಟ್ಟು ಮುರಿದು ಜೋತು ಬೀಳುತ್ತದೆ. ಎಲೆಗಳು ಬಾಡಿ, ಗಿಡ ಶಕ್ತಿ ಇಲ್ಲದೇ ಸೊರಗಿದಂತಾಗುತ್ತದೆ. ಹಣ್ಣಿನ ಗೊಂಚಲು ಹೊರಗಡೆ ಬಾರದಂತೆ ತಡೆಹಿಡಿಯುತ್ತದೆ. ಗೊಂಚಲು ಚಿಕ್ಕದಾಗಿರುತ್ತದೆ. ಕಾಂಡವು ಸೀಳಿದಂತಾಗುತ್ತದೆ. ಕಾಂಡದಲ್ಲಿ ತಿಳಿಗೆಂಪಿನ ಕಂದು ಬಣ್ಣ ಇರುತ್ತದೆ. ಬೇರುಗಳು ಕೊಳೆಯಲು ಪ್ರಾರಂಭವಾಗುತ್ತದೆ

ಚುಚ್ಚುಮದ್ದು:
ಕಾರ್ಬನ್ ಡೈಜಮ್ 3 ಗ್ರಾಂ, ತಾಮ್ರದ ಆಕ್ಸಿಕ್ಲೋರೈಡ್ 3 ಗ್ರಾಂ, ಬೋರಿಕ್ಸಿಡ್ 3 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ, ದ್ರಾವಣ ಸಿದ್ಧಪಡಿಸಿಕೊಳ್ಳಬೇಕು. ಐದು ತಿಂಗಳಿಗಿಂತ ಮೇಲ್ಪಟ್ಟ ಗಿಡಕ್ಕೆ 30 ಮಿ.ಲೀ ದ್ರಾವಣವನ್ನು ಚುಚ್ಚುಮದ್ದಿನ ಮೂಲಕ ನೀಡಬೇಕು. ಭೂಮಿಯಿಂದ ಒಂದು ಅಡಿ ಮೇಲೆ ಕಾಂಡಕ್ಕೆ ಚುಚ್ಚಬೇಕು. ಸುಮಾರು 2ರಿಂದ 3 ತಿಂಗಳ ಗಿಡವಾಗಿದ್ದರೆ, 15ರಿಂದ 20 ಮಿ.ಲೀ. ದ್ರಾವಣ ಸಾಕು. ಮಿತಿಯೂ ಹೆಚ್ಚಬಾರದು. ಆದರೆ, 20 ದಿನಗಳ ಅಂತರದಲ್ಲಿ ಮತ್ತೊಮ್ಮೆ ನೀಡಬೇಕು. ಚುಚ್ಚು ಮದ್ದು ನೀಡಿದ ಒಂದು ದಿನ ಗಿಡಗಳಿಗೆ ನೀರನ್ನು ಕೊಡಬಾರದು. 10ರಿಂದ 15 ದಿನಗಳೊಳಗೆ ರೋಗ ಹತೋಟಿಗೆ ಬರುತ್ತದೆ. ರೋಗ ಗುಣವಾಗಿ ಉತ್ತಮ ಫಸಲು ಬರುತ್ತದೆ ಎನ್ನುತ್ತಾರೆ ಪ್ರಾಧ್ಯಾಪಕ ಡಾ.ರವಿಕುಮಾರ ಎಂ.ಆರ್.

ಮುನ್ನೆಚ್ಚರಿಕೆ ಕ್ರಮ:
ರೋಗ ರಹಿತ ತೋಟಗಳಿಂದ ಕಂದುಗಳನ್ನು ಆಯ್ಕೆ ಮಾಡಬೇಕು. ಕಂದುಗಳನ್ನು ನಾಟಿ ಮಾಡುವ ಮುನ್ನ 10 ಗ್ರಾಂ ಕಾರ್ಬನ್ ಡೈಜಮ್ ಶಿಲೀಂದ್ರ ನಾಶಕವನ್ನು 10 ಲೀಟರ್ ನೀರಿನಲ್ಲಿ ಬೆರೆಸಿ, ಈ ದ್ರಾವಣದಲ್ಲಿ ಗಡ್ಡೆಗಳನ್ನು 10 ನಿಮಿಷಗಳ ಕಾಲ ಅದ್ದಿ ನೆಡಬೇಕು. ಕಂದುಗಳನ್ನು ನಾಟಿ ಮಾಡುವ ಸಮಯದಲ್ಲಿ ಟ್ರೈಕೊಡರ್ಮಾ ಜೈವಿಕ ಶಿಲೀಂದ್ರವನ್ನು 10 ಗ್ರಾಂ ಮತ್ತು 500ಗ್ರಾಂ ಬೇವಿನ ಹಿಂಡಿಯನ್ನು ಬೆರೆಸಿ ಹಾಕಬೇಕು ಆ ಮೂಲಕವೂ ರೋಗ ನಿಯಂತ್ರಣ ಮಾಡಬಹುದು ಎನ್ನುತ್ತಾರೆ ಅವರು.

ಜಿಲ್ಲೆಯಲ್ಲಿ ಬಾಳೆ: 

ಜಿಲ್ಲೆಯಲ್ಲಿ ಸುಮಾರು ಐದು ಸಾವಿರ ಹೆಕ್ಟೇರ್‌ ವ್ಯಾಪ್ತಿಯಲ್ಲಿ ಬಾಳೆ ಬೆಳೆದಿದ್ದಾರೆ. ರೈತರು ಅಂಗಾಂಶ ಪದ್ಧತಿಯ ಜಿ–9 ಬಾಳೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಪಿ. ಭೋಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !