ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಳಿಗೆ ಕೀಟಗಳ ಕಾಟ: ರೈತನಿಗೆ ಸಂಕಷ್ಟ

ಕೋವಿಡ್‌ನಿಂದ ತತ್ತರಿಸಿದ್ದ ಅನ್ನದಾತರಿಗೆ ಗಾಯದ ಮೇಲೆ ಬರೆ: ಕೃಷಿ ಇಲಾಖೆಯಿಂದ ತಾಂತ್ರಿಕ ನೆರವು
Last Updated 23 ಸೆಪ್ಟೆಂಬರ್ 2021, 3:49 IST
ಅಕ್ಷರ ಗಾತ್ರ

ಹಾವೇರಿ:ಕೋವಿಡ್‌ ಲಾಕ್‌ಡೌನ್‌ ಮತ್ತು ಅತಿವೃಷ್ಟಿಯಿಂದ ತತ್ತರಿಸಿದ್ದ ರೈತರಿಗೆ ಮತ್ತೊಂದು ಆರ್ಥಿಕ ಸಂಕಷ್ಟ ಎದುರಾಗಿದೆ. ಬೆಳೆಗಳಿಗೆ ವಿವಿಧ ರೋಗಗಳು ತಗುಲಿ, ಇಳುವರಿ ಕುಂಠಿತವಾಗುವ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲ, ರೋಗ ನಿಯಂತ್ರಣಕ್ಕೆ ರಸಗೊಬ್ಬರ ಮತ್ತು ಕೀಟನಾಶಕಗಳಿಗೆ ಹಣ ಹೊಂದಿಸುವಲ್ಲಿ ಹೈರಾಣಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಗೋವಿನಜೋಳ, ಶೇಂಗಾ, ಸೋಯಾಬಿನ್‌, ಹತ್ತಿ, ಈರುಳ್ಳಿ, ಭತ್ತ, ಹಾಗೂ ಮೆಣಸಿನಕಾಯಿ ಬೆಳೆಗಳನ್ನು ವಿವಿಧ ರೋಗಗಳು ಬಾಧಿಸುತ್ತಿದ್ದು, ಅವುಗಳ ನಿಯಂತ್ರಣಕ್ಕಾಗಿ ಜಿಲ್ಲಾ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಕ್ರಮಗಳನ್ನು ಕೈಗೊಂಡಿದೆ.

ರೋಗ ಮತ್ತು ಕೀಟ ಬಾಧೆ ನಿಯಂತ್ರಣಕ್ಕೆ ಬೇಕಿರುವ ಔಷಧಗಳು ಮತ್ತು ಸ್ಪ್ರೇ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಸಹಾಯಧನದಲ್ಲಿ ಒದಗಿಸಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಹಿರೇಕೆರೂರು ತಾಲ್ಲೂಕಿನಲ್ಲಿ ಗೋವಿನ ಜೋಳದ ಸಸಿಯಲ್ಲಿ 45 ದಿನಗಳೊಳಗೆ ಸೈನಿಕ ಹುಳು ಬಾಧೆ ಕಾಣಿಸಿಕೊಳ್ಳುತ್ತದೆ. ಈ ವರ್ಷ ಸಾಕಷ್ಟು ಕಡೆಗಳಲ್ಲಿ ಇದು ಕಾಣಿಸಿಕೊಂಡಿತ್ತು. ಇಮಾಮೆಕ್ಟಿನ್‌ ಬೆಂಝೋಯೇಟ್‌ ಪುಡಿಯನ್ನು 2 ಲೀಟರ್‌ ನೀರಿಗೆ ಒಂದು ಗ್ರಾಂ ಬೆರೆಸಿ, ಬೆಳೆಗೆ ಸಿಂಪಡಣೆ ಮಾಡಿದರೆ ಹುಳು ಬಾಧೆ ನಿರ್ಮೂಲನೆಯಾಗುತ್ತದೆ. ಕೃಷಿ ಇಲಾಖೆಯಲ್ಲಿ ಇಮಾಮೆಕ್ಟಿನ್‌ ಬೆಂಝೋಯೇಟ್‌ ಪುಡಿ ದಾಸ್ತಾನು ಸಾಕಷ್ಟಿದೆ ಎಂದು ಕೃಷಿ ಅಧಿಕಾರಿ ಎನ್.ಬಿ. ಕಾಕೋಳ ತಿಳಿಸಿದರು.

ತಗ್ಗಿದ ರೋಗಬಾಧೆ

ಹಾನಗಲ್: ನಾಲ್ಕೈದು ವರ್ಷಗಳಿಂದ ಭತ್ತಕ್ಕೆ ಕಾಡುತ್ತಿದ್ದ ಬೆಂಕಿ ರೋಗ ಮತ್ತು ಗೋವಿನಜೋಳ ಬೆಳೆಗೆ ಬಾಧಿಸುತ್ತಿದ್ದ ಲದ್ದೆ ಹುಳು ಹಾವಳಿ ಈ ಬಾರಿ ಅಲ್ಲಲ್ಲಿ ಮಾತ್ರ ಕಂಡು ಬರುತ್ತಿದೆ.

‘ಭತ್ತ ಮತ್ತು ಗೋವಿನಜೋಳ ಬೆಳೆ ತಾಲ್ಲೂಕಿನಲ್ಲಿ ಅಧಿಕ ಬಿತ್ತನೆ ಇದೆ. ಈ ಬೆಳೆಗಳಿಗೆ ಪ್ರತಿವರ್ಷ ಕಾಡುತ್ತಿದ್ದ ರೋಗದ ಹತೋಟಿಗೆ ಮುಂಚಿತವಾಗಿ ರೈತರಿಗೆ ತಿಳಿವಳಿಕೆ ನೀಡಲಾಗಿದೆ’ ಎಂದು ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದ್ದಾರೆ.

ಪಪ್ಪಾಯ ಬೆಳೆಗೆ ಕೀಟಬಾಧೆ

ರಾಣೆಬೆನ್ನೂರು:ತಾಲ್ಲೂಕಿನಲ್ಲಿ ಪಪ್ಪಾಯಗೆ (5 ಹೆಕ್ಟೇರ್‌) ರಸ ಹೀರುವ ಕೀಟ, ಈರುಳ್ಳಿ ಬೆಳೆಗೆ (440 ಹೆ.) ರಸ ಹೀರುವ ಕೀಟ ಎಲೆಮಚ್ಚೆರೋಗ, ಟೊಮೆಟೊ ಬೆಳೆಗೆ (140 ಹೆ.) ಎಲೆ ಚುಕ್ಕೆ ರೋಗ ಲೀಪ್‌ ಮೈನರ್‌ ಹಾಗೂ ಮೆಣಸಿನಗಿಡ ಬೆಳೆಗೆ (50 ಹೆ.) ಎಲೆ ಮುರುಟ ರೋಗ, ರಸ ಹೀರುವ ಕೀಟದ ಬಾಧೆ ಕಂಡು ಬಂದಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ವಿಜಯಲಕ್ಷ್ಮೀ ಟಿ.ಎಸ್‌. ತಿಳಿಸಿದರು.

ಈರುಳ್ಳಿಗೆ 3 ಜಾತಿಯ ಶಿಲೀಂಧ್ರಗಳಾದ ಕೊಲ್ಲೆಟೋಟ್ರೈಕಮ್, ಸ್ಕ್ಲಿರೋಷಿಯಂ ಹಾಗೂ ಪ್ಯುಜೇರಿಯಂ ಶಿಲೀಂಧ್ರಗಳಿಂದ ರೋಗದ ಬಾಧೆ ತೀವ್ರವಾಗಿದೆ.

ತೋಟಗಾರಿಕಾ ಬೆಳೆಗಳಿಗೆ ತಗಲುವ ರೋಗಗಳಿಗೆ ಉಚಿತವಾಗಿ ಔಷಧ ನೀಡಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆಯಬೇಕು
– ಎಲ್‌. ಪ್ರದೀಪ್‌, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ

ನಮ್ಮ ಹೊಲದಲ್ಲಿ ಒಂದೂವರೆ ಎಕರೆ ಪಪ್ಪಾಯ ಹಾಕಿದ್ದೇನೆ. ರಸ ಹೀರುವ ಕೀಟ ಕಾಣಿಸಿಕೊಂಡಿದ್ದು, ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ
– ಶಿವಪ್ಪ ಕುರುವತ್ತಿ,ಯತ್ತಿನಹಳ್ಳಿ ರೈತ, ರಾಣೆಬೆನ್ನೂರು

‘ಇ-ಸ್ಯಾಪ್‌’ ತಂತ್ರಾಂಶದಿಂದ ಬೆಳೆಗಳ ಛಾಯಾಚಿತ್ರ ಸೆರೆ ಹಿಡಿದು, ರೈತರಿಗೆ ಅಗತ್ಯವಾದ ತಾಂತ್ರಿಕ ಸಲಹೆ ನೀಡುತ್ತಿದ್ದೇವೆ
– ಡಾ.ಅಶೋಕ ಪಿ., ಹಿರಿಯ ವಿಜ್ಞಾನಿ, ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ

ಮೆಕ್ಕೆಜೋಳಕ್ಕೆ ರೋಗ; ಇಳುವರಿಗೆ ಕೊಕ್ಕೆ

ರಟ್ಟೀಹಳ್ಳಿ: ತಾಲ್ಲೂಕಿನಲ್ಲಿ ಶೇ 75ಕ್ಕೂ ಅಧಿಕ ರೈತರು ಮೆಕ್ಕೆಜೋಳ ಬೆಳೆ ಬೆಳೆದಿರುತ್ತಾರೆ. ಇತ್ತೀಚಿನ ಅತಿವೃಷ್ಟಿಯಿಂದಾಗಿ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾಳಾಗಿರುತ್ತವೆ. ಇದೀಗ ಮೆಕ್ಕೆಜೋಳದ ಬೆಳೆ ಸುಳಿ ಮತ್ತು ತೆನೆ ಕೊರಕು ಹುಳುಗಳ ಬಾಧೆಯಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

‘ಕೃಷಿ ಅಧಿಕಾರಿಗಳ ಸಲಹೆಯಂತೆ ಎರಡು, ಮೂರು ಬಾರಿ ಔಷಧ ಸಿಂಪಡಣೆ ಮಾಡಿದರೂ ಹುಳುಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ’ ಎಂದು ತಾಲ್ಲೂಕು ರೈತ ಸಂಘ ಕಾರ್ಯಾಧ್ಯಕ್ಷ ಕರಬಸಪ್ಪ ಬಸಾಪುರ ಬೇಸರ ವ್ಯಕ್ತಪಡಿಸಿದರು.

‘ಹಿರೇಕೆರೂರು ತಾಲ್ಲೂಕಿನಲ್ಲಿ 924 ಎಕರೆ ಪ್ರದೇಶ, ರಟ್ಟೀಹಳ್ಳಿ ತಾಲ್ಲೂಕಿನಲ್ಲಿ 464 ಎಕರೆ ಪ್ರದೇಶ ಬೆಳೆನಷ್ಟ ಪರಿಹಾರ ಸಮೀಕ್ಷೆ ಮಾಡಿದ್ದಾರೆ ಈ ಸಮೀಕ್ಷೆ ಸರಿಯಾಗಿ ಆಗಿರುವುದಿಲ್ಲ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಂಕರಗೌಡ ಶಿರಗಂಬಿ ತಿಳಿಸಿದರು.

ಆರ್ಥಿಕವಾಗಿ ಕುಗ್ಗಿ ಹೋದ ರೈತ

ಶಿಗ್ಗಾವಿ:ತಾಲ್ಲೂಕಿನ ಪ್ರಮುಖ ಬೆಳೆಗಳಾದ ಶೇಂಗಾ, ಗೋವಿನಜೋಳ, ಭತ್ತ, ಹತ್ತಿ, ಸೋಯಾಬಿನ್ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಸೋಯಾಬಿನ್‌, ಗೋವಿನಜೋಳ, ಶೇಂಗಾ ಬೆಳೆಗಳಿಗೆ ವಿವಿಧ ರೋಗಗಳ ಬಾಧೆ ಹೆಚ್ಚಾಗಿ ರೈತರ ನಿರೀಕ್ಷೆ ಮಟ್ಟಿಗೆ ಇಳುವರಿ ಬರಲು ಸಾಧ್ಯವಾಗಿಲ್ಲ.

ಬೆಳೆಗಳಿಗೆ ಕಿಡಿ, ಕೋರಿ ಹುಳಗಳ ಕಾಟ, ಬೂದಿರೋಗ, ಎಲೆ ಕೊರೆತ ರೋಗ, ಬೆಂಕಿ ರೋಗಗಳು ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕಾಗಿ ತಯಾಜಿನ್ ಔಷಧಿ ಜತೆಗೆ ಹಲವು ಔಷಧಿಗಳನ್ನು ಸಿಂಪಡಣೆ ಮಾಡುವಂತೆ ರೈತರಿಗೆ ಸಲಹೆ ನೀಡಲಾಗಿದೆ. ತಾಲ್ಲೂಕಿನಲ್ಲಿ ಹಾನಿ ಪ್ರಮಾಣ ಕಡಿಮೆಯಿದೆ ಎಂದು ಕೃಷಿ ಅಧಿಕಾರಿ ಎಚ್.ಆರ್. ಮುಂದಿನಮನಿ ಹೇಳಿದರು.

‘‌ಔಷಧ ಸಿಂಪಡಿಸಿ, ರೋಗ ನಿವಾರಿಸಿ’

ಸವಣೂರ:ರೈತ ಬೆಳೆದ ಹತ್ತಿ ಬೆಳೆಗೆ ರಸ ಹೀರುವ ಕೀಟ ಬಾಧೆ, ಕಾಂಡ ಕೊರಕ, ಎಲೆ ಕೆಂಪಾಗುವಿಕೆ ರೋಗ, ಶೇಂಗಾ ಬೆಳೆಗೆ ಸುಲಿಪುಚ್ಚಿ ರೋಗ, ಮುಟಿಕೆ ರೋಗ, ಸೋಯಾಬಿನ್‌ ಬೆಳೆಗೆ ಬಂಡಾರ ರೋಗ, ಕೀಟ ಬಾಧೆ, ಗೋವಿನ ಜೋಳ ಬೆಳೆಗಳಿಗೆ ಲಡ್ಡಿ ಹುಳು ಭಾದೆ, ಸುಳಿ ಪುಕ್ಕ ರೋಗಗಳು ಬಂದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ಮಣ್ಣೂರ ಗ್ರಾಮದ ಪ್ರಗತಿಪರ ರೈತ ಶೇಖರಗೌಡ ಪಾಟೀಲ ಅಳಲು ತೋಡಿಕೊಂಡರು.

ಹತ್ತಿ ಬೆಳೆಗೆ ರಸ ಹೀರುವ ಕೀಟ ಭಾದೆ, ಕಾಂಡ ಕೊರಕರೋಗ ಕಾಣಿಸಿಕೊಳ್ಳುತ್ತದೆ. ಇದರ ಹತೋಟಿಗಾಗಿ ಪ್ರತಿ ಕ್ಯಾನಿಗೆ ಪ್ರೊಫೆನೋಪಾಸ್ 30 ಎಂ.ಎಲ್‌, ಪ್ಲೇನೋಪಿಕ್ಸ್ 5 ಎಂ.ಎಲ್‌ ಮ್ಯಾಗ್ನಿಶಿಯಂ ಸಲ್ಫೇಟ್‌ 3 ಗ್ರಾಂ ಹಾಕಿ ಸಿಂಪಡಣೆ ಮಾಡಬೇಕು. ಎಲೆ ಕೆಂಪಾಗುವಿಕೆ ರೋಗಕ್ಕೆ ನಿಮೋನಿಯಾರಿಲೇ ಔಷಧಿ ಸಿಂಪಡಣೆಯಿಂದ ರೋಗವನ್ನು ತಡೆಗಟ್ಟಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಮಾಹಿತಿ ನೀಡಿದರು.

*****

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಎಂ.ವಿ.ಗಾಡದ, ಕೆ.ಎಚ್‌.ನಾಯಕ, ಮಾರುತಿ ಪೇಟಕರ, ಪ್ರಮೀಳಾ ಹುನಗುಂದ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT