ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳಿಗೂ ಅಕ್ಷರ ದಾಸೋಹ ನೀಡಿದ ರಾಜೇಶ್ವರಿ

ಸಾಕ್ಷರತಾ ಸ್ವಸಹಾಯ ಗುಂಪು ರಚನೆ, ಗ್ರಾಮ ಪಂಚಾಯ್ತಿ ಸದಸ್ಯರಿಗೂ ಅಕ್ಷರ ಕಲಿಕೆ
Last Updated 8 ಮಾರ್ಚ್ 2019, 11:23 IST
ಅಕ್ಷರ ಗಾತ್ರ

ಹಾವೇರಿ:ಅಂಗವಿಕಲರು, ಬಡವರು, ಪರಿಶಿಷ್ಟರು, ಆರ್ಥಿಕ ದುರ್ಬಲರು ಮಾತ್ರವಲ್ಲ ಕೈದಿಗಳಿಗೂ ಅಕ್ಷರ ಕಲಿಸಿದ ಹಾವೇರಿಯ ರಾಜೇಶ್ವರಿ ರವಿ ಸಾರಂಗಮಠ, ಅಕ್ಷರಶಃ ಅಶಕ್ತ ಅನಕ್ಷರಸ್ಥರ ಪಾಲಿಗೆ ಅಕ್ಷರ ದಾಸೋಹಿಗಳಾಗಿದ್ದಾರೆ.

ಪಿಯುಸಿ ಓದಿದ ರಾಜೇಶ್ವರಿ ಅವರು, 1998–99ರಲ್ಲಿ ಮುಂದುವರಿಕೆ ಶಿಕ್ಷಣ ಯೋಜನೆಯಲ್ಲಿ ಗುತ್ತಲ ಬಳಿಯ ಬಾಳೂರ ತಾಂಡಾದಲ್ಲಿ ಪ್ರೇರಕಿಯಾಗಿ ಕೆಲಸ ನಿರ್ವಹಿಸಿದ್ದರು. ಆಗ, ವಲಸೆ ಹಾಗೂ ಕೂಲಿ ಮೂಲಕ ಬದುಕು ಸಾಗಿಸುತ್ತಿದ್ದ ತಾಂಡಾದ ಬಡ ಕೂಲಿಕಾರ್ಮಿಕರಿಗೆ ಅಕ್ಷರ ಕಲಿಸಿದರು. ಅನಕ್ಷರಸ್ಥರಿಗೆ ‘ಸಹಿ’ ಹಾಕುವಷ್ಟು ಜ್ಞಾನ ನೀಡುವುದೇ ‘ಸಾಕ್ಷರತೆ’ ಎಂದು ಹಲವರು ಪರಿಗಣಿಸಿದರೆ, ರಾಜೇಶ್ವರಿ ಮಾತ್ರ, ಓದು–ಬರಹ ಬರುವ ತನಕ ಕಲಿಕೆಯನ್ನು ಮುಂದುವರಿಸಿದ್ದರು. ಕಲಿಕೆಯ ಮುಂದುವರಿಕೆಗಾಗಿ ಐದು ಸಾಕ್ಷರತಾ ಸ್ವಸಹಾಯ ಗುಂಪುಗಳನ್ನು ರಚಿಸಿದ್ದರು.

2009–10ರಲ್ಲಿ ನಡೆದ ಸಾಕ್ಷರ ಭಾರತ ಕಾರ್ಯಕ್ರಮದಲ್ಲಿ ಅವರನ್ನು ಮತ್ತೆ ಪ್ರೇರಕಿಯಾಗಿ ನೇಮಿಸಲಾಯಿತು. 2011ರ ಸೆಪ್ಟೆಂಬರ್‌ನಲ್ಲಿ ಗುತ್ತಲದ ವಿಜಯಾ ಕಳ್ಳಿಹಾಳ ಎಂಬ ಅಂಗವಿಕಲೆಯ ಮನೆಗೆ ಭೇಟಿ ನೀಡಿದ ಅವರು, ಆಕೆಯ ಬದುಕಿನಲ್ಲಿ ಪರಿವರ್ತನೆ ಹಾಡಿದರು. ಪೋಲಿಯೋ ಹಾಗೂ ತೀವ್ರ ಬಡತನದಿಂದ ಮನೆಯ ಮೂಲೆ ಸೇರಿದ್ದ ವಿಜಯಾಗೆ ಅಕ್ಷರಭ್ಯಾಸ ಆರಂಭಿಸಿದರು.

ವಿಜಯಾ, ಅದೇ ವರ್ಷ ಡಿಸೆಂಬರ್‌ನಲ್ಲೇ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆಯ ಪರೀಕ್ಷೆ (ಎನ್‌.ಐ.ಓ.ಎಸ್‌) ಬರೆದು ‘ಎ’ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. ಅನಂತರ ಎಸ್‌ಟಿಡಿ ಬೂತ್‌ ಹಾಗೂ ಕಿರಾಣಿ ಅಂಗಡಿ ತೆರೆಯುವ ಮೂಲಕ ಸ್ವಾವಲಂಬಿ ಬದುಕಿಗೆ ಕಾಲಿಟ್ಟರು. ಮೂಲೆ ಸೇರಿದ್ದ ವಿಜಯಾ, ಅಕ್ಷರ ಜ್ಞಾನದಿಂದ ಕುಟುಂಬಕ್ಕೆ ಆಸರೆಯಾದರು.

ವಿಜಯಾ ಚಿತ್ರಕಲೆ, ರಂಗೋಲಿ, ಕವಿತೆ ರಚನೆಗಳಲ್ಲಿ ತೊಡಗಿದ್ದು ಮಾತ್ರವಲ್ಲ, 2016ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಲ್ಲಿಯೂ ರಾಜೇಶ್ವರಿ ಪ್ರಮುಖ ಪಾತ್ರ ವಹಿಸಿದರು. ದೆಹಲಿಯಲ್ಲಿ ಸಾಕ್ಷರತಾ ದಿನಾಚರಣೆಯಲ್ಲಿ ಸನ್ಮಾನ ಪಡೆದರು. ಸಾರಂಗಮಠ ಅವರೂ ಗೌರವಕ್ಕೆ ಪಾತ್ರರಾದರು.

ವಯಸ್ಕರ ಶಿಕ್ಷಣ ಇಲಾಖೆಯ ಯೋಜನೆಯ ಮೂಲಕ ಗ್ರಾಮ ಪಂಚಾಯ್ತಿಯ ಅನಕ್ಷರಸ್ಥ ಮಹಿಳಾ ಸದಸ್ಯರಿಗೆ ಅಕ್ಷರ ಕಲಿಕೆ ಸೇರಿದಂತೆ ಹಲವಾರು ಯೋಜನೆಗಳಲ್ಲಿ ತರಬೇತಿಯಲ್ಲಿ ನೀಡಿ ದ್ದಾರೆ. ಅಲ್ಲದೇ, ಸ್ವಯಂ ಪ್ರೇರಿತರಾಗಿ ಹಲವಾರು ಬಡ ಅನಕ್ಷರಸ್ಥರಿಗೆ ಅಕ್ಷರ ಕಲಿಸುತ್ತಿದ್ದಾರೆ.

ಕೈದಿಗಳಿಗೆ ಕಲಿಕೆ: ಹಾವೇರಿ ಜಿಲ್ಲಾ ಕೇಂದ್ರ ಕಾರಾಗೃಹದ ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಕಲಿಸುವ ಪ್ರಯತ್ನಕ್ಕೆ ಅಧೀಕ್ಷಕ ತಿಮ್ಮಣ್ಣ ಭಜಂತ್ರಿ ಮುಂದಾದಾಗ, ಕೈ ಜೋಡಿಸಿದವರು ಸಾರಂಮಠ. ಕಳೆದ ಆರು ತಿಂಗಳಿನಿಂದ ಜೈಲಿನಲ್ಲಿ ಸುಮಾರು 30 ಅನಕ್ಷರಸ್ಥ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ.

‘ಜೈಲಿನಲ್ಲಿ 30 ಅನಕ್ಷರಸ್ಥ ಕೈದಿಗಳ ಪೈಕಿ 22 ಮಂದಿ ಓದಲು ಹಾಗೂ ಬರೆಯಲು ಕಲಿತ್ತಿದ್ದಾರೆ. ಉಳಿದ ಕೆಲವರು ಅರ್ಧದಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡರು’ ಎಂದು ರಾಜೇಶ್ವರಿ ಸಾರಂಗಮಠ ವಿವರಿಸಿದರು.

‘ಈ ಪೈಕಿ 26 ವರ್ಷದ ಯುವಕ ಕೈದಿಯೊಬ್ಬ ಓದು– ಬರಹ ಕಲಿತಿರುವುದಲ್ಲದೇ, ಬಿಡುಗಡೆಯ ಬಳಿಕ ಎಸ್ಸೆಸ್ಸೆಲ್ಸಿ– ಪಿಯುಸಿ ಪರೀಕ್ಷೆ ಬರೆದು ಸ್ವಯಂ ಉದ್ಯೋಗ ಮಾಡುತ್ತೇನೆ. ಇನ್ನು ಮುಂದೆ ತಪ್ಪುಗಳನ್ನು ಮಾಡುವುದಿಲ್ಲ ಎಂದು ಸ್ವಯಂ ಪ್ರೇರಣೆಯಿಂದ ಮಾತು ನೀಡಿದ್ದನು’ ಎಂದು ಸಂತಸ ಹಂಚಿಕೊಂಡರು.

ತಮ್ಮ 36ನೇ ವಯಸ್ಸಿನಲ್ಲೇ ಹಲವಾರು ಕಾರ್ಮಿಕರು, ಬಡವರು, ಅಂಗವಿಕಲರು, ಅಶಕ್ತರು, ಕೈದಿಗಳಿಗೆ ಅಕ್ಷರ ಕಲಿಸಿದ ಸಾರಂಗಮಠ, ಅಶಕ್ತರ ಪಾಲಿನ ಅಕ್ಷರ ದಾಸೋಹಿಯಾಗಿದ್ದಾರೆ. ಪತಿ ರವಿ ಸಾರಂಗಮಠ ಹಾವೇರಿ ಸಂಚಾರ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದಾರೆ.

ಅಕ್ಷರ ಕಲಿಸುವ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ಮನಪೂರ್ವಕವಾಗಿ ತೊಡಗಿಸಿಕೊಳ್ಳುವ ರಾಜೇಶ್ವರಿ ಅವರಂತಹ ನಿಷ್ಠಾವಂತರಿದ್ದರೆ ಮಾತ್ರ ದೇಶವು ಸಂಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯ ಎನ್ನುತ್ತಾರೆ ಸಾಹಿತಿ ಸತೀಶ ಕುಲಕರ್ಣಿ ಹಾಗೂ ಹಿರಿಯ ಅಧಿಕಾರಿಗಳು.

*
ಅಕ್ಷರ ದಾನ ಮಾಡಿದಷ್ಟು, ನಮ್ಮ ಜ್ಞಾನದ ಶ್ರೀಮಂತಿಕೆ ಹೆಚ್ಚಾಗುತ್ತದೆ. ಅಕ್ಷರ ಜ್ಞಾನವೇ ಸರ್ವ ಪರಿವರ್ತನೆಯ ಮೂಲ.
–ರಾಜೇಶ್ವರಿ ಸಾರಂಗಮಠ,ಸಾಕ್ಷರತಾ ಪ್ರೇರಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT