ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.11ರಿಂದ 13ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ: ಮಹೇಶ ಜೋಶಿ ಹೇಳಿಕೆ 

ಸಮ್ಮೇಳನಕ್ಕೆ ಕಿಟೆಲ್‌ ಮೊಮ್ಮಗಳ ಆಗಮನ
Last Updated 6 ಆಗಸ್ಟ್ 2022, 12:01 IST
ಅಕ್ಷರ ಗಾತ್ರ

ಹಾವೇರಿ: ‘86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ನವೆಂಬರ್‌ 11, 12 ಮತ್ತು 13ರಂದು ನಡೆಸಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಯವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ನಗರದಲ್ಲಿ ಶನಿವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿಯ ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನವೆಂಬರ್‌ 11ರಂದು ಕನಕದಾಸ ಜಯಂತಿ ಇದ್ದು, ಅಂದು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಲಿದೆ. ನ.12ರಂದು ಎರಡನೇ ಶನಿವಾರ ಮತ್ತು ನ.13ರಂದು ಭಾನುವಾರವಿದ್ದು, ಮೂರು ದಿನ ಸರ್ಕಾರಿ ರಜೆಗಳಿರುತ್ತವೆ. ಹೀಗಾಗಿ ಸರ್ಕಾರಿ ನೌಕರರು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದರು.

107 ವರ್ಷಗಳ ನಂತರ ಕಸಾಪ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿದ್ದು, ಕನ್ನಡ ಕೆಲಸ ಮಾಡಲು ‘ಭೀಮಬಲ’ ಸಿಕ್ಕಂತಾಗಿದೆ. ಜರ್ಮನಿಯಲ್ಲಿ ವಾಸವಾಗಿರುವ ಕನ್ನಡದ ಮೊದಲ ನಿಘಂಟು ತಜ್ಞ ಫರ್ಡಿನೆಂಡ್‌ ಕಿಟೆಲ್‌ ಅವರ ಮೊಮ್ಮಗಳು ಮತ್ತು ಕೆನಡಾ ಸಂಸದ ಚಂದ್ರ ಆರ್ಯ ಕರ್ನಾಟಕದವರಾಗಿದ್ದು, ಈ ಇಬ್ಬರೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದ್ದಾರೆ ಎಂದರು.

ವಿಧೇಯಕ ಜಾರಿಯಾಗಲಿ:

‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ’ವು ಕಾನೂನಾಗಿ ಜಾರಿಗೊಳ್ಳುವ ಅಗತ್ಯವಿದೆ. ಈ ಬಗ್ಗೆ ಎಲ್ಲ ಶಾಸಕರ ಜೊತೆ ಚರ್ಚಿಸುತ್ತಿದ್ದೇವೆ. ಶಿಕ್ಷಣದಲ್ಲಿ ಕನ್ನಡ, ಆಡಳಿತದಲ್ಲಿ ಕನ್ನಡ, ಉದ್ಯೋಗದಲ್ಲಿ ಕನ್ನಡ, ನಾಮಫಲಕದಲ್ಲಿ ಕನ್ನಡ ಎಂಬ ನಿಯಮಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕಿದೆ ಎಂದರು.

ಸರ್ಕಾರಕ್ಕೆ ಮಾರ್ಗದರ್ಶಿ ಸೂತ್ರ:

ಕನ್ನಡ ಶಾಲೆಗಳು ಮುಚ್ಚಬಾರದು ಎಂಬ ವಿಷಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮ್ಮೇಳನದಲ್ಲಿ ಗುಣಾತ್ಮಕ ಚರ್ಚೆ ನಡೆಸಿ, ಸರ್ಕಾರಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಕೊಡಲಾಗುವುದು. ಈ ಸಮ್ಮೇಳನ ಐತಿಹಾಸಿಕವಾಗಲಿದ್ದು, ನಾಡು–ನುಡಿ ರಕ್ಷಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT