ಶನಿವಾರ, ಜುಲೈ 2, 2022
27 °C
ಕೆಲವು ಅಧ್ಯಕ್ಷರ ಒತ್ತಾಯದಿಂದ ಯಡವಟ್ಟು: ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿಕೆ

ಕಸಾಪ ಸದಸ್ಯರಲ್ಲಿ 30 ಸಾವಿರ ಹೆಬ್ಬೆಟ್ಟುಗಳು: ಡಾ. ಮಹೇಶ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಲ್ಲಿ ಸುಮಾರು 30 ಸಾವಿರ ಹೆಬ್ಬೆಟ್ಟುಗಳಿದ್ದು, ಇವರಿಗೆ ಓದಲು ಮತ್ತು ಬರೆಯಲು ಬರುವುದಿಲ್ಲ. ಇವರಿಗೆ ಕನ್ನಡ ಕಲಿಸುವ ಜತೆಗೆ ‘ಸರಳ ಕನ್ನಡ ಪರೀಕ್ಷೆ’ಯನ್ನು ನಡೆಸುತ್ತೇವೆ’ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು. 

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 18 ವರ್ಷ ಮೇಲ್ಪಟ್ಟ ವಯಸ್ಸಿನ ಕನ್ನಡ ಓದು–ಬರಹ ಬಲ್ಲವರು ಸದಸ್ಯತ್ವನ್ನು ಪಡೆಯಬಹುದು ಎಂಬ ನಿಬಂಧನೆ ಇದ್ದರೂ, ಕೆಲವು ಅಧ್ಯಕ್ಷರ ಒತ್ತಾಯದ ಹಿನ್ನೆಲೆಯಲ್ಲಿ ಹೆಬ್ಬೆಟ್ಟುಗಳನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ. ಈ ಹಿಂದೆ, ಕೇಂದ್ರ ಕಚೇರಿಯಲ್ಲಿರುವ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡುವ ಸನ್ನಿವೇಶ ಸೃಷ್ಟಿಸಲಾಗಿತ್ತು ಎಂದು ಆರೋಪಿಸಿದರು. 

ಒಬ್ಬರಿಗೆ ಒಂದೇ ಬಾರಿ ಅವಕಾಶ:

ರಾಜ್ಯ ಘಟಕ, ಜಿಲ್ಲಾ ಘಟಕ, ತಾಲ್ಲೂಕು ಘಟಕಗಳಿಗೆ ಅಧ್ಯಕ್ಷರಾದವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲದಂತೆ ಒಬ್ಬರಿಗೆ ಒಂದೇ ಬಾರಿ ಅವಕಾಶ ಕಲ್ಪಿಸಲು ನಿಬಂಧನೆಯಲ್ಲಿ ತಿದ್ದುಪಡಿ ತರಲಾಗುವುದು. ಸದಸ್ಯತ್ವ ಶುಲ್ಕವನ್ನು ₹250ಕ್ಕೆ ಇಳಿಕೆ ಮಾಡುವುದು ಸೇರಿದಂತೆ 1915ರ ನಿಬಂಧನೆಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗುವುದು. ಕಸಾಪವನ್ನು ಜನಸಾಮಾನ್ಯ ಪರಿಷತ್‌ ಆಗಿ ರೂಪಿಸಲಾಗುವುದು ಎಂದರು. 

ಆ್ಯಪ್‌ ಮೂಲಕ ಚುನಾವಣೆ:

ಹಿಂದಿನ ಚುನಾವಣೆಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಕೆಲವರು ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಮೊಬೈಲ್‌ ಆ್ಯಪ್‌ ಮೂಲಕ ಪಾರದರ್ಶಕ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಕನ್ನಡದ ಅಂಕಿಗಳನ್ನು ಬಳಸದಿದ್ದರೆ ಮುಂದಿನ 10 ವರ್ಷಗಳಲ್ಲಿ ಮಾಯವಾಗುವ ಆತಂಕವಿದೆ. ಹೀಗಾಗಿ ಎಲ್ಲರೂ ಕನ್ನಡ ಅಂಕಿಗಳನ್ನೇ ಬಳಸುತ್ತಾ, ಕನ್ನಡದಲ್ಲೇ ವ್ಯವಹರಿಸಲು ಕೋರುತ್ತೇನೆ ಎಂದರು. 

1 ಕೋಟಿ ಸದಸ್ಯತ್ವದ ಗುರಿ:

ಕಸಾಪದಲ್ಲಿ ಪ್ರಸ್ತುತ 3.40 ಲಕ್ಷ ಸದಸ್ಯರು ಇದ್ದಾರೆ. 2022–23ನೇ ಸಾಲಿನಲ್ಲಿ ಪ್ರತಿ ಜಿಲ್ಲೆಯಲ್ಲಿ 1 ಲಕ್ಷ ಸದಸ್ಯತ್ವದ ಗುರಿಯನ್ನು ಹಾಕಿಕೊಳ್ಳಲಾಗಿದೆ. ಒಟ್ಟಾರೆ 1 ಕೋಟಿ ಸದಸ್ಯರನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಸಾಪ ಸದಸ್ಯತ್ವ ಪಡೆಯಲು ಪ್ರಸ್ತುತ ಇರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯ ಮಾನದಂಡವನ್ನು 7ನೇ ತರಗತಿಗೆ ಇಳಿಕೆ ಮಾಡುತ್ತೇವೆ. ಹೊಸದಾಗಿ ಸದಸ್ಯತ್ವ ಪಡೆಯುವವರು ಕನ್ನಡ ಸರಳ ಪರೀಕ್ಷೆಯಲ್ಲಿ ಪಾಸಾಗಬೇಕು ಎಂದರು.

ಸಾಹಿತಿ ಪ್ರೊ.ಚಂಪಾ ಅವರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಣೆಗಾಗಿ ₹1 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು. 

ಜಿಲ್ಲೆಗೊಂದು ಕನ್ನಡ ಭವನ

ಪ್ರತಿ ಜಿಲ್ಲೆಯಲ್ಲಿ ‘ಕನ್ನಡ ಭವನ’ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ. ಈ ಸಂಬಂಧ ಪಾದಯಾತ್ರೆಯನ್ನೂ ನಡೆಸುತ್ತೇನೆ. ಗುಂಪುಗಾರಿಕೆಗೆ ಅವಕಾಶ ನೀಡದೇ ಎಲ್ಲರನ್ನು ಒಗ್ಗೂಡಿಸಿಕೊಂಡು ಕನ್ನಡ ಕೆಲಸವನ್ನು ಮಾಡುತ್ತೇನೆ. ಫೆ.24,25ರಂದು ಬೆಂಗಳೂರಿನಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ನಂತರ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ‘ಸರ್ವಸದಸ್ಯರ ವಿಶೇಷ ಸಭೆ’ಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

**
ಕೋವಿಡ್‌ ನಿರ್ಬಂಧಗಳು ತೆರವಾದ ಕೂಡಲೇ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುತ್ತೇನೆ
– ಮಹೇಶ ಜೋಶಿ, ಕಸಾಪ ಅಧ್ಯಕ್ಷ   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು