ಭಾನುವಾರ, ಜೂನ್ 26, 2022
22 °C

ಇತರ ಭಾಷೆಗಳು ಚಿಕ್ಕಮ್ಮ, ದೊಡ್ಡಮ್ಮ ಇದ್ದ ಹಾಗೆ: ಕಸಾಪ ಅಧ್ಯಕ್ಷ ಮಹೇಶ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕನ್ನಡ ನಮ್ಮ ತಾಯಿ ಭಾಷೆ. ಇತರ ಭಾಷೆಗಳು ನಮಗೆ ಚಿಕ್ಕಮ್ಮ, ದೊಡ್ಡಮ್ಮ ಇದ್ದ ಹಾಗೆ. ಚಿಕ್ಕಮ್ಮ ಮತ್ತು ದೊಡ್ಡಮ್ಮ ಅವರು ಎಂದಿಗೂ ತಾಯಿಯಾಗಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದರು. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪುಸ್ತಕ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಜತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳ ಮಾರಾಟಕ್ಕೆ ಆದ್ಯತೆ ನೀಡುತ್ತೇವೆ’ ಎಂದರು. 

ಮಳೆಯ ಅಡ್ಡಿ: ಸೆಪ್ಟೆಂಬರ್‌ ತಿಂಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಮಳೆ ಅಡ್ಡಿಯಾಗುವ ಆತಂಕವಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ‘ಸಮ್ಮೇಳನದ ದಿನಾಂಕ ನಿಗದಿ ಮಾಡಿರುವುದು ರಾಜ್ಯ ಸರ್ಕಾರ. ಸಾಹಿತ್ಯ ಚಟುವಟಿಕೆ ನೋಡಿಕೊಳ್ಳುವುದು ಕಸಾಪ ಜವಾಬ್ದಾರಿ. ಮಳೆಯ ಬಗ್ಗೆ ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆಯಾಗಿದೆ. ನಗೆಪಾಟಲಿಗೆ ಈಡಾಗದಂತೆ ಸಮ್ಮೇಳನವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುವುದು’ ಎಂದು ತಿಳಿಸಿದರು. 

ಸ್ವೇಚ್ಛಾಚಾರಕ್ಕೆ ಕಡಿವಾಣ: ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಕಲ್ಪಿಸಲು ಬೈಲಾ ತಿದ್ದುಪಡಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ‘ಆರೋಪಗಳು ಆಧಾರರಹಿತವಾಗಿದ್ದು, ಯಾವುದೇ ಸತ್ಯಾಂಶವಿಲ್ಲ. ನಾವು ಹೊಸದಾಗಿ ಏನನ್ನೂ ಸೇರಿಸುತ್ತಿಲ್ಲ. ಹಳೆಯ ನಿಬಂಧನೆಗಳನ್ನೇ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುತ್ತಿದ್ದೇವೆ. ಕೆಲವು ಜಿಲ್ಲಾ ಘಟಕದ ಅಧ್ಯಕ್ಷರು ಹಣ ದುರುಪಯೋಗ ಮಾಡಿಕೊಂಡ ಆರೋಪಗಳಿವೆ. ಹೀಗಾಗಿ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು. 

ಸದಸ್ಯತ್ವದಿಂದ ತೆಗೆಯಲ್ಲ: ಕಸಾಪ ಸದಸ್ಯರಾಗಲು ಕನ್ನಡ ಓದು–ಬರಹ ಬಲ್ಲವರಾಗಿರಬೇಕು ಎಂಬ ನಿಯಮವಿದೆ. ಓದಲು ಬಾರದೇ ಇರುವವರು ಕೂಡ ಸದಸ್ಯತ್ವ ಪಡೆದಿದ್ದಾರೆ. ಅವರಿಗೆ ‘ಸರಳ ಕನ್ನಡ’ ಕಾರ್ಯಕ್ರಮದ ಮೂಲಕ ಓದು–ಬರಹ ಕಲಿಸುತ್ತೇವೆ. ಕ್ರಿಮಿನಲ್‌ ಹಿನ್ನೆಲ ಇರುವವರಿಗೆ ಸದಸ್ಯತ್ವ ನೀಡುವುದಿಲ್ಲ. ಯಾರನ್ನೂ ಸದಸ್ಯತ್ವದಿಂದ ತೆಗೆದು ಹಾಕುವುದಿಲ್ಲ. 1 ಕೋಟಿ ಸದಸ್ಯತ್ವದ ಗುರಿಯಿದ್ದು, ಅದು ಈಡೇರಿದರೆ ಕಸಾಪಕ್ಕೆ ₹399 ಕೋಟಿ ಹಣ ದೊರೆಯುತ್ತದೆ. ಇದರಿಂದ ಸರ್ಕಾರದ ಮೇಲಿನ ಆರ್ಥಿಕ ಅವಲಂಬನೆ ತಪ್ಪಿಸಬಹುದು ಎಂದರು. 

‘ಕನ್ನಡ ನುಡಿ’ ಮಾಸ ಪತ್ರಿಕೆಯು ಇನ್ನು ಮುಂದೆ ಆ್ಯಪ್‌ ಮೂಲಕ ದೊರೆಯುತ್ತದೆ. ಇದರಿಂದ 3.40 ಲಕ್ಷ ಪ್ರತಿಗಳನ್ನು ಪ್ರಕಟಿಸುವುದಕ್ಕೆ ತಗಲುವ ಖರ್ಚು ₹23 ಲಕ್ಷ ಉಳಿಸಬಹುದು. ಆಜೀವ ಸದಸ್ಯರಿಗೆ ಅಂಚೆ ಮೂಲಕ ಕಳುಹಿಸಿದರೆ, ಅಪೂರ್ಣ ವಿಳಾಸದ ಕಾರಣ ಸುಮಾರು 50 ಸಾವಿರ ಪ್ರತಿಗಳು ವಾಪಸ್‌ ಬರುತ್ತಿದ್ದವು’ ಎಂದು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು