ಕನ್ನಡ ಸಾಹಿತ್ಯ ಸಮ್ಮೇಳನ: ವ್ಯಾಪಕ ಪ್ರಚಾರಕ್ಕೆ ನಿರ್ಧಾರ

ಹಾವೇರಿ: ನಗರದಲ್ಲಿ ಜನವರಿ 6,7 ಹಾಗೂ 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣ ಒಳಗೊಂಡಂತೆ ಬಹುಮಾಧ್ಯಮಗಳ ಬಳಕೆ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ವಿ. ಸಂಕನೂರ ಸಲಹೆ ನೀಡಿದರು.
ನಗರದ ಜಿಲ್ಲಾ ವಾರ್ತಾ ಭವನದಲ್ಲಿ ಶುಕ್ರವಾರ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪತ್ರಿಕೆಗಳು, ಖಾಸಗಿ ವಾಹಿನಿಗಳು, ಆಕಾಶವಾಣಿ ಹಾಗೂ ಸ್ಥಳೀಯ ಕೇಬಲ್‍ಗಳು, ರ್‍ಯಾಲಿ, ಜಾಥಾ, ವಿವಿಧ ಕಾರ್ಯಕ್ರಮ ಆಯೋಜನೆ ಮೂಲಕ ಸಮ್ಮೇಳನದ ಮಾಹಿತಿಯನ್ನು ಪ್ರತಿ ಮನೆ– ಮನೆಗೆ ತಲುಪಿಸುವ ಕಾರ್ಯವಾಗಬೇಕು ಎಂದು ಸೂಚನೆ ನೀಡಿದರು.
ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕು ಹಾಗೂ ಹೋಬಳಿಗಳಲ್ಲಿ ಹೆದ್ದಾರಿ ಫಲಕ ಅಳವಡಿಸುವುದು. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸ್ವಚ್ಛತಾ ವಾಹನಗಳು, ಬಸ್ ನಿಲ್ದಾಣ, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಪ್ರಚಾರ ಫಲಕಗಳ ಅಳವಡಿಕೆ, ಧ್ವನಿವರ್ಧಕಗಳ ಮೂಲಕ ಸಮ್ಮೇಳನದ ಪ್ರಚಾರಕ್ಕೆ ನಿರ್ಣಯಿಸಲಾಯಿತು.
ಸೈಕಲ್ ಜಾಥಾ, ಬೈಕ್ ರ‍್ಯಾಲಿ, ರಂಗೋಲಿ ಸ್ಪರ್ಧೆ, ಕೆ.ಎಸ್.ಆರ್.ಟಿ.ಸಿ. ಬಸ್‍ಗಳಿಗೆ ವಿನೈಲ್ ಫ್ಲೆಕ್ಸ್ ಅಳವಡಿಕೆ, ವಿವಿಧ ಸೋಷಿಯಲ್ ಮೀಡಿಯಾ ಪ್ರಚಾರ, ವೆಬ್‍ಸೈಟ್ ಹಾಗೂ ಯೂಟ್ಯೂಬ್ ಮೂಲಕ ಸಾಹಿತ್ಯ ಸಮ್ಮೇಳನದ ಪ್ರಚಾರ ಹಾಗೂ ನೇರ ಪ್ರಸಾರಕ್ಕೆ ಅಗತ್ಯ ಸಿದ್ಧತೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಮ್ಮೇಳನದ ವಿಶೇಷ ಕರ್ತವ್ಯಾಧಿಕಾರಿ ಬಸವರಾಜ ಹೂಗಾರ, ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ, ನೆಹರು ಯುವ ಕೇಂದ್ರದ ಅಧಿಕಾರಿ ಸಂಜೀವ ಭುಕ್ಯಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.