ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಹಬ್ಬಕ್ಕೆ ಸಿದ್ಧತೆ

Last Updated 26 ಜನವರಿ 2020, 15:19 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ‘ಏಲಕ್ಕಿ ಕಂಪಿನ ನಗರ’ ಎಂದೇ ಹೆಸರಾಗಿರುವ ಹಾವೇರಿಯು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಜ.27 ಮತ್ತು 28ರಂದು ನಗರದ ದಾನೇಶ್ವರಿ ನಗರದಲ್ಲಿರುವ ರಜನಿ ಸಭಾಂಗಣದಲ್ಲಿ ಅದ್ಧೂರಿಯಾಗಿ ‘ಕನ್ನಡ ಹಬ್ಬ’ ನಡೆಯಲಿದ್ದು, ಭರದ ಸಿದ್ಧತೆಗಳು ನಡೆದಿವೆ.

ನಗರದ ಪಿ.ಬಿ. ರಸ್ತೆ, ಎಂ.ಜಿ.ರಸ್ತೆ, ಹಾನಗಲ್‌ ರಸ್ತೆ, ಕಾಗಿನೆಲೆ ರಸ್ತೆ,ಹೊಸಮನಿ ಸಿದ್ದಪ್ಪ ಸರ್ಕಲ್‌, ಮೈಲಾರ ಮಹದೇವಪ‍್ಪ ಸರ್ಕಲ್‌ ಸೇರಿದಂತೆ ಪ್ರಮುಖ ವೃತ್ತ ಮತ್ತು ದ್ವಾರಗಳಲ್ಲಿ ಸಾವಿರಕ್ಕೂ ಹೆಚ್ಚಿನ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. 50ಕ್ಕೂ ಹೆಚ್ಚಿನ ಸಮ್ಮೇಳನದ ಫ್ಲೆಕ್ಸ್‌ಗಳು ಸಾಹಿತ್ಯಾಸಕ್ತರನ್ನು ಸ್ವಾಗತಿಸುತ್ತಿವೆ.

5 ದ್ವಾರಗಳು:ತ್ರಿಪದಿ ಕವಿ ಸರ್ವಜ್ಞ, ಸಂತ ಶಿಶುನಾಳ ಶರೀಫ, ಸಂತಕವಿ ಕನಕದಾಸ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕ, ಆಧುನಿಕ ವಚನಕಾರ ಡಾ.ಮಹದೇವ ಬಣಕಾರ ಹೆಸರಿನ ಒಟ್ಟು ಐದು ಮಹಾದ್ವಾರಗಳು ಮತ್ತು ಕಾದಂಬರಿ ಪಿತಾಮಹ ಗಳಗನಾಥರ ಪ್ರಧಾನ ವೇದಿಕೆಯನ್ನು ನಿರ್ಮಾಣ ಮಾಡಿದ್ದು, ಸಾಹಿತ್ಯಾಸಕ್ತರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದೇವೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ. ಆಲದಕಟ್ಟಿ ತಿಳಿಸಿದರು.

‘ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾಹಿತ್ಯಾಸಕ್ತರು ಮತ್ತು ವಿದ್ಯಾರ್ಥಿಗಳಿಗೆ, ಉಪ್ಪಿಟ್ಟು ಮತ್ತು ಟೀ ವ್ಯವಸ್ಥೆಯನ್ನು ನಗರದ ಹುಕ್ಕೇರಿಮಠದಲ್ಲಿ ಮಾಡಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಕನ್ನಡ ಪ್ರೇಮಿಗಳಿಗೆಗೋಧಿ ಹುಗ್ಗಿ, ಅಕ್ಕಿ ಹುಗ್ಗಿ, ಅನ್ನ–ಸಾಂಬಾರ್‌,ಪಲ್ಯ, ಉಪ್ಪಿನಕಾಯಿ, ಬದನೆಕಾಯಿ(ಮುಳಗಾಯಿ) ಪಲ್ಯ ಸೇರಿದಂತೆ ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ರಜನಿ ಸಭಾಂಗಣದಲ್ಲಿ ಮಾಡಿಕೊಂಡಿದ್ದೇವೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುವವರಿಗೆಪಲಾವ್ ಮತ್ತು ಸಿಹಿತಿನಿಸು ನೀಡಲಿದ್ದೇವೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಮಾಹಿತಿ ನೀಡಿದರು.

ಪುಸ್ತಕ ಪ್ರದರ್ಶನ:ಒಟ್ಟು 20 ಮಳಿಗೆಗಳಿದ್ದು, ಅದರಲ್ಲಿ ಅರ್ಧಕ್ಕೂ ಹೆಚ್ಚು ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳ ಮಾರಾಟಕ್ಕೆ ಆದ್ಯತೆ ನೀಡಲಾಗಿದೆ. ಜತೆಗೆ ಬಟ್ಟೆ, ಆಯುರ್ವೇದ ಔಷಧ ಸೇರಿದಂತೆ ವಾಣಿಜ್ಯ ಮಳಿಗೆಗಳಿಗೂ ಅವಕಾಶ ಕಲ್ಪಿಸಿದ್ದೇವೆ. ವಿಶೇಷವೆಂದರೆ, ರಕ್ತದಾನ ಜಾಗೃತಿ ಮೂಡಿಸಲು ಮತ್ತು ರಕ್ತದಾನ ಮಾಡುವವರಿಗೆ ಸೌಲಭ್ಯ ಕಲ್ಪಿಸಿದ್ದೇವೆ. ಎರಡು ದಿನ ವೈವಿಧ್ಯಮಯ ಗೋಷ್ಠಿಗಳು, ಮನರಂಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸಗಳು ಸಾಹಿತ್ಯಾಸಕ್ತರ ಮನತಣಿಸಲಿವೆ. ಎರಡು ಸಾವಿರ ಆಸನಗಳು ಹಾಗೂ ಸಾಹಿತಿಗಳ ವಾಸ್ತವ್ಯಕ್ಕೆ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT