ಮಂಗಳವಾರ, ಸೆಪ್ಟೆಂಬರ್ 21, 2021
21 °C
ಜಿಲ್ಲೆಯಾದ್ಯಂತ ಮುಂದುವರೆದ ಮಳೆ, ಕುಸಿದ ಮನೆಗಳು, ರಸ್ತೆ ಸಂಪರ್ಕ ಕಡಿತ

ಹಾವೇರಿ ಜಿಲ್ಲೆಯಲ್ಲಿ ಮಳೆ: ತುಂಬಿ ಹರಿಯುತ್ತಿರುವ ನದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಮಳೆ ನೀರಿನಿಂದ ವರದಾ ಮತ್ತು ಕುಮದ್ವತಿ ನದಿಗಳು ತುಂಬಿ ಹರಿಯುತ್ತಿವೆ.

ಜಿಲ್ಲೆಯ ಕೆಲವೆಡೆ ಮನೆಗಳು ಕುಸಿತವಾಗಿದ್ದು, ರಸ್ತೆ ಮತ್ತು ಸೇತುವೆಗಳು ಜಲಾವೃತವಾಗಿವೆ. ಕಳಸೂರು ಅಣೆಕಟ್ಟೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ, ಹಾವೇರಿ–ಕಳಸೂರು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ನದಿ ಪಾತ್ರದ ಹಳ್ಳಿಗಳಲ್ಲಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಬಹುದು ಎಂಬ ಭೀತಿ ಜನರನ್ನು ಕಾಡುತ್ತಿದೆ. ಜಿಲ್ಲಾಡಳಿತ ಈಗಾಗಲೇ ಮುಳುಗಡೆ ಭೀತಿ ಎದುರಿಸುತ್ತಿರುವ 141 ಗ್ರಾಮಗಳನ್ನು ಗುರುತಿಸಿದ್ದು, ಅಗತ್ಯಬಿದ್ದರೆ ಜನ–ಜಾನುವಾರುಗಳ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಂಡಿದೆ. 

ಮಳೆಯ ವಿವರ (ಮಿಲಿ ಮೀಟರ್‌ಗಳಲ್ಲಿ): 

ಹಾವೇರಿ 8.0, ದೇವಿಹೊಸೂರು 5.8, ಗುತ್ತಲ 15.2, ಹೊಸರಿತ್ತಿ 18.2, ರಾಣೆಬೆನ್ನೂರು 5.8, ಅಸುಂಡಿ 15.4, ಮೆಡ್ಲೇರಿ 7.4, ಹನುಮನಮಟ್ಟಿ 4.4, ಹಿರೇಕೆರೂರು 10.6, ಹಂಸಭಾವಿ 15.0, ಶಿಗ್ಗಾವಿ 8.0, ಬಂಕಾಪುರ 15.3, ದುಂಡಶಿ 6.6, ತಡಸ 19.4, ಬ್ಯಾಡಗಿ 5.4, ಕಾಗಿನೆಲೆ 11.6, ಹಾನಗಲ್‌ 10.0, ಆಡೂರು 7.4, ತಿಳವಳ್ಳಿ 12.1, ಬಮ್ಮನಹಳ್ಳಿ 26.2, ರಟ್ಟೀಹಳ್ಳಿ 5.2, ಮಾಸೂರು 14.2, ಸವಣೂರು 5.9 ಮಿಲಿ ಮೀಟರ್‌ ಮಳೆಯಾಗಿದೆ. 

 21 ಮನೆಗಳಿಗೆ ಹಾನಿ

ಹಾನಗಲ್: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 21 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಂಪು ವಾತಾವರಣವಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ತಾಲ್ಲೂಕಿನ ನರೇಗಲ್, ಉಪ್ಪಣಶಿ, ಕೆಲವರಕೊಪ್ಪ, ಹರಳಕೊಪ್ಪ, ಸೋಮಸಾಗರ, ಕೆಲವರಕೊಪ್ಪ, ಮುಳಥಳ್ಳಿ, ಯಲಿವಾಳ, ಬಮ್ಮನಹಳ್ಳಿ ಮತ್ತು ಹಾನಗಲ್ ಭಾಗದಲ್ಲಿ ಮನೆಗಳು ಜಖಂಗೊಂಡಿವೆ ಎಂದು ತಹಶೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಹರಿಯುತ್ತಿರುವ ವರದಾ, ಧರ್ಮಾ ನದಿಗಳು ಅಪಾಯಮಟ್ಟ ತಲುಪಿಲ್ಲ. ರಸ್ತೆ, ಸೇತುವೆ ಜಲಾವೃತವಾದ ವರದಿಯಾಗಿಲ್ಲ. ನದಿ ಪಾತ್ರಗಳತ್ತ ಕಂದಾಯ ಇಲಾಖೆ ಕಣ್ಣಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ರಟ್ಟೀಹಳ್ಳಿ ವರದಿ: ಶಿವಮೊಗ್ಗ ಜಿಲ್ಲೆಯ ಗಾಜನೂರ ಡ್ಯಾಂನಿಂದ ತುಂಗಾ ನದಿಗೆ ನೀರು ಹರಿದು ಬಿಟ್ಟಿದ್ದು, ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ತಾಲ್ಲೂಕಿನ ಹಲವಾರು ಹಳ್ಳಿಗರ ಜೀವನಾಡಿಯಾಗಿರುವ ತುಂಗಾ ಮೇಲ್ದಂಡೆ ಕಾಲುವೆ ಇದೀಗ ಭರ್ತಿಯಾಗಿದ್ದು, ರೈತರಿಗೆ ಸಂತಸವಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು