ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಪ್ರವೇಶ ಪತ್ರ: ವಿದ್ಯಾರ್ಥಿಗಳಿಂದ ಪ್ರತಿಭಟನೆ

Last Updated 19 ಜುಲೈ 2021, 11:30 IST
ಅಕ್ಷರ ಗಾತ್ರ

ಹಾವೇರಿ: ‘ಪ್ರವೇಶ ಪತ್ರ’ ಸಿಗದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತರಾದ ಒಂದೇ ಶಾಲೆಯ 30 ವಿದ್ಯಾರ್ಥಿಗಳು, ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ರಸ್ತೆಯಲ್ಲಿ ಕುಳಿತು ‘ಅಣಕು ಪರೀಕ್ಷೆ’ ಬರೆಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಹಿರೇಕೆರೂರು ತಾಲ್ಲೂಕು ಚಿಕ್ಕೇರೂರಿನ ಸರ್ಕಾರಿ ಅನುದಾನಿತ ‘ಮಹಾತ್ಮಗಾಂಧಿ ಪ್ರೌಢಶಾಲೆ’ಯ ವಿದ್ಯಾರ್ಥಿಗಳು ತಮ್ಮ ಪೋಷಕರೊಡನೆ ನಗರಕ್ಕೆ ಆಗಮಿಸಿ, ಎಸ್‌ಎಫ್‌ಐ ಸಹಯೋಗದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.

‘ಪರೀಕ್ಷೆಗಾಗಿ ಕಷ್ಟಪಟ್ಟು ಓದಿದ್ದೆ. ಆದರೆ, ಪ್ರವೇಶ ಪತ್ರವನ್ನೇ ಕೊಡದೆ ನನಗೆ ಅನ್ಯಾಯ ಮಾಡಿದ್ದಾರೆ. ಕಾಲೇಜು ಶಿಕ್ಷಣ ಪಡೆಯುವ ಕನಸು ಕೂಡ ನುಚ್ಚು ನೂರಾಗಿದೆ. ನಮಗೆ ಆದ ಅನ್ಯಾಯವನ್ನು ಕೇಳುವವರು ಯಾರೂ ಇಲ್ಲದಂತಾಗಿದೆ’ ಎಂದು ವಿದ್ಯಾರ್ಥಿನಿ ನಿಖಿತಾ ಪಾಟೀಲ ಕಣ್ಣೀರು ಹಾಕಿದರು.

‘ನನ್ನ ಮಗ ಶಾಲೆಗೆ ರೆಗ್ಯುಲರ್‌ ಸ್ಟೂಡೆಂಟ್‌. 9ನೇ ತರಗತಿಯಲ್ಲಿ ಶೇ 76 ಫಲಿತಾಂಶ ಪಡೆದಿದ್ದ. ಪರೀಕ್ಷಾ ಶುಲ್ಕವನ್ನೂ ಶಾಲೆಗೆ ಕಟ್ಟಿದ್ದೆವು. ಆದರೆ, ಶಾಲೆಯ ಶಿಕ್ಷಕರು ಪರೀಕ್ಷಾ ಮಂಡಳಿಗೆ ಶುಲ್ಕ ಕಟ್ಟದ ಕಾರಣ ಮಗನ ಪ್ರವೇಶ ಪತ್ರ ಬಂದಿಲ್ಲ. ಶಿಕ್ಷಕರ ಯಡವಟ್ಟಿನಿಂದಾಗಿ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ’ ಎಂದು ಭುವನ ವಂಟಿಕರ್‌ ತಂದೆ ಶಂಕರ್‌ ವಂಟಿಕರ್‌ ನೋವು ತೋಡಿಕೊಂಡರು.

‘ನೀವು ದಡ್ಡರಿದ್ದೀರಿ, ಹೀಗಾಗಿ ಈ ಬಾರಿ ಪರೀಕ್ಷೆ ಬರೆಯಬೇಡಿ ಎಂದು ಕೆಲವು ವಿದ್ಯಾರ್ಥಿಗಳಿಗೆ ಶಿಕ್ಷಕರೇ ಹಣೇಪಟ್ಟಿ ಹಚ್ಚಿ, ಅವಮಾನ ಮಾಡಿದ್ದಾರೆ. ಶಾಲೆಗೆ ಕಡಿಮೆ ಫಲಿತಾಂಶ ಬರುತ್ತದೆ ಎಂಬ ಕಾರಣದಿಂದ ಪ್ರವೇಶ ಪತ್ರ ನೀಡದೆ ವಂಚಿಸಿದ್ದಾರೆ. 30 ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದ ಮುಖ್ಯಶಿಕ್ಷಕನನ್ನು ನೌಕರಿಯಿಂದ ವಜಾ ಮಾಡಬೇಕು, ಬಿಇಒ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಆಗ್ರಹಿಸಿದರು.

ಹಾಜರಾತಿ ಕೊರತೆ, ಪ್ರಾಜೆಕ್ಟ್‌ ರಿಪೋರ್ಟ್‌ ಸಲ್ಲಿಸಿಲ್ಲ ಹಾಗೂ ಪರೀಕ್ಷಾ ಶುಲ್ಕ ಕಟ್ಟಿಲ್ಲ ಮುಂತಾದ ಕಾರಣಗಳಿಗಾಗಿ ‘ಪ್ರವೇಶ ಪತ್ರ’ ಬಂದಿಲ್ಲ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ವಾದ. ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಕಟ್ಟುವ ಬಗ್ಗೆ ಶಿಕ್ಷಕರು ಮಾಹಿತಿಯನ್ನೇ ಕೊಟ್ಟಿಲ್ಲ ಹಾಗೂ ಕೆಲವರು ಶುಲ್ಕ ಕೊಟ್ಟಿದ್ದರೂ ಪ್ರವೇಶ ಪತ್ರ ಸಿಕ್ಕಿಲ್ಲ ಎಂಬುದು ಪೋಷಕರು ದೂರು.

***

ಶಾಲೆಯ ಆಡಳಿತ ಮಂಡಳಿಯವರು ಮುಖ್ಯ ಶಿಕ್ಷಕರನ್ನು ಅಮಾನತು ಮಾಡಿದ ಪತ್ರವನ್ನು ಕಳುಹಿಸಿದ್ದಾರೆ. ಅದನ್ನು ಆಯುಕ್ತರಿಗೆ ಕಳುಹಿಸಲಾಗುವುದು.
– ಅಂದಾನಪ್ಪ ವಡಗೇರಿ, ಡಿಡಿಪಿಐ, ಹಾವೇರಿ

***

ಮುಖ್ಯಶಿಕ್ಷಕರ ತಪ್ಪಿನಿಂದ ಈ ಸಮಸ್ಯೆಯಾಗಿದೆ. ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತೇವೆ.
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT