ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ಲಿಂಗಯ್ಯ ಹಿರೇಮಠ ಪುನರಾಯ್ಕೆ; ಬೆಂಬಲಿಗರಿಂದ ವಿಜಯೋತ್ಸವ

ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆ
Last Updated 21 ನವೆಂಬರ್ 2021, 16:13 IST
ಅಕ್ಷರ ಗಾತ್ರ

ಹಾವೇರಿ: ಲಿಂಗಯ್ಯ ಬಿ.ಹಿರೇಮಠ ಅವರು ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನೂತನ ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾದರು. ಜಿಲ್ಲೆಯಾದ್ಯಂತ ಭಾನುವಾರ ಅವರ ಬೆಂಬಲಿಗರು, ಕನ್ನಡಾಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಭಾನುವಾರ ನಡೆದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 2991 ಮತಗಳನ್ನು ಪಡೆದ ಲಿಂಗಯ್ಯ ಹಿರೇಮಠ ಅವರು ಸಮೀಪ ಸ್ಪರ್ಧಿ ಮಾರುತಿ ಶಿಡ್ಲಾಪುರ (1325) ಅವರಿಗಿಂತ 1666 ಮತಗಳ ಭಾರಿ ಅಂತರದಿಂದ ಗೆಲುವಿನ ನಗೆ ಬೀರಿದರು. ಪ್ರಭುಲಿಂಗಪ್ಪ ಹಲಗೇರಿ, ಈಡಿಗರ ವೆಂಕಟೇಶ ಸೇರಿದಂತೆ ಕಣದಲ್ಲಿ ಒಟ್ಟು ನಾಲ್ವರು ಅಭ್ಯರ್ಥಿಗಳಿದ್ದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ‘ಏಲಕ್ಕಿ ಕಂಪಿನ ನಗರಿ’ ಹಾವೇರಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. 2015ರಿಂದ 2021ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಲಿಂಗಯ್ಯ ಹಿರೇಮಠ ಅವರು ಎರಡನೇ ಬಾರಿಗೆ ಕಸಾಪ ಜಿಲ್ಲಾ ಘಟಕದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿರುಸಿನ ಮತದಾನ:

ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಭಾನುವಾರ ನಡೆದ ಮತದಾನ ಬೆಳಿಗ್ಗೆಯಿಂದಲೇ ಚುರುಕುಗೊಂಡಿತು. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಜಿಲ್ಲೆಯ 13 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಮಳೆ ಬಿಡುವು ಕೊಟ್ಟ ಕಾರಣ ಮತದಾರರು ನಿರಾತಂಕವಾಗಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಮತದಾರರು ಮತಗಟ್ಟೆ ಪ್ರವೇಶಿಸುವ ಮುನ್ನ,ಆಶಾ ಕಾರ್ಯಕರ್ತೆಯರು ಮತದಾರರ ಕೈಗಳಿಗೆ ಸ್ಯಾನಿಟೈಸರ್‌ ಹಾಕಿದರು.

ಹಾವೇರಿ, ರಾಣೆಬೆನ್ನೂರಿನಲ್ಲಿ ತಲಾ 3 ಮತಗಟ್ಟೆ, ಹಾನಗಲ್‍ನಲ್ಲಿ 2 ಹಾಗೂ ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ, ಶಿಗ್ಗಾವಿ ಹಾಗೂ ಸವಣೂರಿನಲ್ಲಿ ತಲಾ 1 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಶೇ 67.96 ಮತದಾನ:

ಒಟ್ಟು 8495 ಮತದಾರರಲ್ಲಿ 5775 ಮತದಾರರು ತಮ್ಮ ಹಕ್ಕು ಚಲಾಯಿಸಿದರು. 6692 ಪುರುಷರ ಪೈಕಿ 4517 ಪುರುಷರು ಮತ್ತು 1803 ಮಹಿಳೆಯರ ಪೈಕಿ 1258 ಮಹಿಳೆಯರು ಮತ ಚಲಾಯಿಸುವ ಮೂಲಕ ಶೇ 67.96 ಮತದಾನವಾಯಿತು.

ಮತದಾನ ಮುಕ್ತಾಯವಾದ ನಂತರ ಜಿಲ್ಲೆಯ ಎಲ್ಲ ಮತಗಟ್ಟೆಗಳ ಅಂಕಿ ಅಂಶಗಳನ್ನು ಕ್ರೋಡೀಕರಿಸಿ, ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿಯಾದ ಹಾವೇರಿ ತಾಲ್ಲೂಕು ತಹಶೀಲ್ದಾರ್‌ ಗಿರೀಶ ಸ್ವಾದಿ ಘೋಷಿಸಿದರು.ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗಾಗಿ ಮತದಾನದ ವಿವರಗಳನ್ನು ಬೆಂಗಳೂರು ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಯಿತು.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಹಾವೇರಿ ನಗರದ ತಹಶೀಲ್ದಾರ್‌ ಕಚೇರಿ ಬಳಿ ನೆರೆದಿದ್ದ ಕನ್ನಡಾಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಜಯಘೋಷ ಹಾಕಿದರು. ಪೊಲೀಸರು ಬಿಗಿ ಬಂದೋಬಸ್ತ್‌ ಒದಗಿಸಿದ್ದರು.

‘ಸಾಹಿತ್ಯ ಸಮ್ಮೇಳನ ಆಯೋಜನೆಗೆ ಕ್ರಮ’

‘ನನಗೆ ಮತ ನೀಡಿ, ಗೆಲುವಿಗೆ ಕಾರಣರಾದ ಸರ್ವ ಮತದಾರರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಳೆದ ಬಾರಿ ಮಾಡಿದ ಸಾಹಿತ್ಯಿಕ ಚಟುವಟಿಕೆಗಳು ಮತ್ತು ಕನ್ನಡಪರ ಕೆಲಸಗಳನ್ನು ಕನ್ನಡಾಭಿಮಾನಿಗಳು ಗುರುತಿಸಿ ಬೆಂಬಲಿಸಿದ್ದಾರೆ’ ಎಂದು ಕಸಾಪ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.

‘ಯುವ ಕವಿ, ಲೇಖಕ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ, ರಚನಾತ್ಮಕ ಕಾರ್ಯಕ್ರಮ ರೂಪಿಸುತ್ತೇನೆ.86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಜಿಲ್ಲೆಗೆ ತರಲು ಹೋರಾಟ ನಡೆಸಿ ಯಶಸ್ವಿಯಾಗಿದ್ದೆ. ಹಾವೇರಿ ನಗರದಲ್ಲಿ ಶೀಘ್ರದಲ್ಲೇ ಸಮ್ಮೇಳನ ನಡೆಸಲುಮುಖ್ಯಮಂತ್ರಿ ಮತ್ತು ಸಚಿವರ ಜತೆ ಸಮಾಲೋಚನೆ ನಡೆಸುತ್ತೇನೆ’ ಎಂದು ಹೇಳಿದರು.

ಅಭ್ಯರ್ಥಿವಾರು ಮತಗಳ ವಿವರ

ಲಿಂಗಯ್ಯ ಹಿರೇಮಠ; 2991

ಮಾರುತಿ ಶಿಡ್ಲಾಪುರ; 1325

ಪ್ರಭುಲಿಂಗಪ್ಪ ಹಲಗೇರಿ; 1319

ಈಡಿಗರ ವೆಂಕಟೇಶ; 87

======

ಮತದಾನದ ವಿವರ

8495;ಒಟ್ಟು ಮತದಾರರು

5775;ಚಲಾವಣೆಗೊಂಡ ಮತಗಳು

53;ತಿರಸ್ಕೃತಗೊಂಡ ಮತಗಳು

5722;ಕ್ರಮಬದ್ಧ ಮತಗಳು

ಶೇ 67.96; ಶೇಕಡಾವಾರು ಮತದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT