4
ದೂರದೃಷ್ಟಿತ್ವ ಯೋಜನೆಗಳಿಗೆ ಶಾಸಕ ನೆಹರು ಓಲೇಕಾರ ಶ್ಲಾಘನೆ

ಬೆಂಗಳೂರು ನಿರ್ಮಿಸಿದ ಕೆಂಪೇಗೌಡರು

Published:
Updated:
ಹಾವೇರಿಯ ಡಿ.ದೇವರಾಜ ಅರಸು ಭವನದಲ್ಲಿ ನಡೆದ ‘ನಾಡಪ್ರಭು ಕೆಂಪೇಗೌಡರ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ನೆಹರು ಓಲೇಕಾರ ಮಾತನಾಡಿದರು

ಹಾವೇರಿ:  ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಚಿಂತನೆಗಳು, ನಾಡು ಕಟ್ಟಿ –ಬೆಳೆಸಿದ ಕಾರ್ಯಗಳನ್ನು ಯುವ ಜನರಿಗೆ ಪರಿಚಯಿಸಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ‘ನಾಡಪ್ರಭು ಕೆಂಪೇಗೌಡರ ಜಯಂತಿ’ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬೆಂಗಳೂರು ನಗರವನ್ನು ಕೆಂಪೇಗೌಡರು ಅಂದೇ ನಿರ್ಮಿಸಿದ್ದರು. ಅನೇಕ ಹಳ್ಳಿ ಹಾಗೂ ಪಟ್ಟಣಗಳನ್ನು ಒಗ್ಗೂಡಿಸಿ ನಿರ್ಮಿಸಿದ ಅಂದಿನ ‘ಬೆಂದಕಾಳೂರು’ ಇಂದು ‘ಬೃಹತ್ ಬೆಂಗಳೂರು’ ಆಗಿ ಬೆಳೆದಿದೆ. ಉದ್ಯಾನನಗರಿ, ನಿವೃತ್ತರ ಸ್ವರ್ಗ, ವಾಣಿಜ್ಯ ನಗರಿ, ಶೈಕ್ಷಣಿಕ ಕೇಂದ್ರ, ಐಟಿ-ಬಿಟಿ ರಾಜಧಾನಿ, ನವೋದ್ಯಮಗಳ ನಗರ, ಅತ್ಯಂತ ಕ್ರಿಯಾಶೀಲ ನಗರ ಎಂಬಿತ್ಯಾದಿ ವಿಶೇಷತೆಗಳಿಂದ ಗುರುತಿಸಿಕೊಂಡಿದೆ ಎಂದು ಹೇಳಿದರು.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಂಶೋಧಕ ಡಾ.ಜಗನ್ನಾಥ ಗೇನಣ್ಣನವರ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು, 480 ವರ್ಷಗಳ ಹಿಂದೆ ಸ್ಥಾಪಿಸಿದ್ದ ನಗರವು ಇಂದು ಜಾಗತಿಕ ನಕ್ಷೆಯಲ್ಲಿ ಪ್ರಮುಖ ನಗರವಾಗಿದೆ ಎಂದರು.

ದೂರದೃಷ್ಟಿಯಿಂದ ವೃತ್ತಿ, ವ್ಯಾಪಾರ, ಕಸುಬುಗಳಿಗೆ ಅನುಗುಣವಾಗಿ ಅರಳೇಪೆಟೆ, ಅಕ್ಕಿಪೇಟೆ, ಬಳೆಪೇಟೆ, ಕುಂಬಾರ ಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ ಸೇರಿದಂತೆ 64 ಪೇಟೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದರು. ಈ ಪೈಕಿ 54 ಪೇಟೆಗಳನ್ನು ಇತಿಹಾಸಕಾರರು ಗುರುತಿಸಿದ್ದಾರೆ ಎಂದರು.

ಅವರು, ಬೆಂಗಳೂರಿನಲ್ಲಿ ವೈಜ್ಞಾನಿಕವಾಗಿ ನೀರಾವರಿ ವ್ಯವಸ್ಥೆಯನ್ನು ರೂಪಿಸಿದ್ದರು. ಒಂದು ಕೆರೆ ತುಂಬಿದ ನಂತರ ಮತ್ತೊಂದು ಕೆರೆಗೆ ನೀರು ಹೋಗುವಂತೆ ನೀರಾವರಿ ಜಾಲದ ವ್ಯವಸ್ಥೆಯಲ್ಲಿ ಕೆರೆಗಳನ್ನು ನಿರ್ಮಿಸಿದ್ದರು. ಪತ್ನಿ ಚೆನ್ನಮ್ಮನ ಹೆಸರಿನಲ್ಲಿ ಚೆನ್ನಮ್ಮನ ಕೆರೆ ಹಾಗೂ ಕೆಂಪಾಂಬುದಿ, ಧರ್ಮಾಂಬುದಿ, ಸಂಪಂಗಿ ಕೆರೆ, ಜಕ್ಕರಾಯನ ಕೆರೆ, ಕಾರಂಜಿ ಕೆರೆ, ಕೆಂಪಾಪುರ ಅಗ್ರಹಾರ ಕೆರೆ, ಹಕ್ಕಿತಿಮ್ಮನಹಳ್ಳಿ ಕೆರೆ, ಯಡಿಯೂರು ಕೆರೆ ಹೀಗೆ ಸಾಲುಸಾಲಾಗಿ ಕೆರೆಗಳನ್ನು ನಿರ್ಮಾಣ ಮಾಡಿದ್ದರು ಎಂದರು.

ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ಉಪ ತಹಶೀಲ್ದಾರ್ ಕುಂಬಾರ, ಸರ್ಕಲ್‌ ಇನ್‌ಸ್ಪೆಕ್ಟರ್ ಎಂ.ವಿ.ಗೌಡಪ್ಪಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ನಾಗರಾಜ, ಜಿ.ಎಂ.ದೊಡ್ಡಮನಿ ವಂದಿಸಿದರು.

ಬೆಂಗಳೂರು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಇತಿಹಾಸವನ್ನು ಕೇವಲ ಪಠ್ಯದ ಪುಟಗಳಲ್ಲಿ ಮಾತ್ರವಲ್ಲ ನಾಡಿನ ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು
ನೆಹರು ಓಲೇಕಾರ, ಶಾಸಕ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !