ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟ್ ಕೊರತೆ: ರ‍್ಯಾಪಿಡ್‌ ಟೆಸ್ಟ್‌ ಬಂದ್‌!

ಲ್ಯಾಬ್‌ ವರದಿಗೆ ಐದಾರು ದಿನ ಕಾಯಬೇಕಾದ ಪರಿಸ್ಥಿತಿ: ಸಾರ್ವಜನಿಕರ ಪರದಾಟ
Last Updated 23 ಸೆಪ್ಟೆಂಬರ್ 2020, 16:44 IST
ಅಕ್ಷರ ಗಾತ್ರ

ಹಾವೇರಿ: ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಕಿಟ್‌ಗಳ ತೀವ್ರ ಕೊರತೆಯಿಂದ ಜಿಲ್ಲೆಯಲ್ಲಿ ‘ರ‍್ಯಾಪಿಡ್‌ ಟೆಸ್ಟ್‌’ ಅನ್ನು ಒಂದು ವಾರದಿಂದ ಬಹುತೇಕ ಬಂದ್‌ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.

ಕರ್ನಾಟಕ ರಾಜ್ಯ ಔಷಧ ಉಗ್ರಾಣ ನಿಗಮದಿಂದ ಜಿಲ್ಲೆಗೆ ಇದುವರೆಗೆ ಒಟ್ಟು 32,400 ರ‍್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌ ಕಿಟ್‌ಗಳು ಪೂರೈಕೆಯಾಗಿದ್ದವು. ಈ ಕಿಟ್‌ಗಳಿಂದ 29,879 ಪರೀಕ್ಷೆಗಳನ್ನು ನಡೆಸಿದ್ದು, 3846 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಕೆಲವು ಕಿಟ್‌ಗಳು ಸಾಗಣೆ ಸಂದರ್ಭ ಮತ್ತು ಪರೀಕ್ಷೆ ನಡೆಸುವಾಗ ಹಾಳಾಗಿವೆ. ಜಿಲ್ಲೆಯ ಔಷಧ ಉಗ್ರಾಣದಲ್ಲಿ ಸದ್ಯಕ್ಕೆ ಕಿಟ್‌ಗಳ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ.

ರಾಜ್ಯದಾದ್ಯಂತ ‘ಆರ್‌ಎಟಿ ಕಿಟ್’‌ಗಳ ಕೊರತೆ ಕಾಡುತ್ತಿದೆ. ಹೀಗಾಗಿ ಬಹುತೇಕ ಜಿಲ್ಲೆಗಳಲ್ಲಿ ‘ರ‍್ಯಾಪಿಡ್‌ ಟೆಸ್ಟ್’‌ ಸಮರ್ಪಕವಾಗಿ ನಡೆಯುತ್ತಿಲ್ಲ. ಕೊರೊನಾ ಶಂಕಿತರು ಆರ್‌ಟಿ–ಪಿಸಿಆರ್‌ ಲ್ಯಾಬ್‌ ವರದಿಯನ್ನೇ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದರು.

ವರದಿಗಾಗಿ ಪರದಾಟ:ರ‍್ಯಾಪಿಡ್‌ ಟೆಸ್ಟ್‌ ಮಾಡಿಸಿದ ಕೆಲವೇ ನಿಮಿಷಗಳಲ್ಲಿ ಕೋವಿಡ್‌ ವರದಿ ಜನರಿಗೆ ಸಿಗುತ್ತಿತ್ತು. ಈಗ ಗಂಟಲು ದ್ರವ ಕೊಟ್ಟು ಪ್ರಯೋಗಾಲಯದ ವರದಿಗೆ ವಾರಗಟ್ಟಲೆ ಕಾಯಬೇಕು. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎಂಬುದು ಸಾರ್ವಜನಿಕರ ಆತಂಕ.

ಸಿಬ್ಬಂದಿ ಮೇಲೆ ಒತ್ತಡ:ಹಾವೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆರ್‌ಟಿ–ಪಿಸಿಆರ್‌ ಲ್ಯಾಬ್‌ನಲ್ಲಿ ದಿನಕ್ಕೆ ಸರಾಸರಿ 300 ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು. ‘ರ‍್ಯಾಪಿಡ್‌ ಟೆಸ್ಟ್‌’ ನಿಂತುಹೋದ ಮೇಲೆ ದಿನಕ್ಕೆ ಸರಾಸರಿ 500 ರಿಂದ 600 ಪರೀಕ್ಷೆಗಳನ್ನು ಮಾಡಬೇಕಾದ ಕಾರ್ಯದೊತ್ತಡ ಲ್ಯಾಬ್‌ ಸಿಬ್ಬಂದಿ ಮೇಲೆ ಉಂಟಾಗಿದೆ. ಇನ್ನೂ 1200 ಪರೀಕ್ಷೆಗಳ ವರದಿ ಬಾಕಿ ಉಳಿದಿದೆ ಎಂದು ವೈದ್ಯಕೀಯ ಸಿಬ್ಬಂದಿಯೊಬ್ಬರು ಸಮಸ್ಯೆ ತೋಡಿಕೊಂಡರು.

ಸೋಂಕು ಹರಡುವ ಭಯ:‘ರ‍್ಯಾಪಿಡ್‌‌ ಟೆಸ್ಟ್‌ ಮಾಡಿಸಲು ಕೆಲಸಕ್ಕೆ ರಜೆ ಹಾಕಿ ಬಂದಿದ್ದೆ. ನಾಲ್ಕೈದು ದಿನಗಳ ನಂತರ ಲ್ಯಾಬ್‌ ವರದಿ ಬರುತ್ತದೆ ಎಂದು ವೈದ್ಯಕೀಯ ಸಿಬ್ಬಂದಿ ಹೇಳುತ್ತಿದ್ದಾರೆ. ಅಲ್ಲಿಯವರೆಗೂ ಮನೆಯಲ್ಲಿ ಇರೋಣ ಎಂದರೆ ರಜೆ ಸಿಗುವುದಿಲ್ಲ. ಕಚೇರಿಗೆ ಹೋಗೋಣ ಎಂದರೆ, ಅಕಸ್ಮಾತ್‌ ವರದಿ ಪಾಸಿಟಿವ್‌ ಬಂದರೆ ಇತರರಿಗೆ ಸೋಂಕು ಹರಡಿಬಿಡುತ್ತೇನೆ ಎಂಬ ಭಯ ಕಾಡುತ್ತಿದೆ’ ಎಂದು ಹಾವೇರಿಯ ಜ್ಯೋತಿ ಪೂಜಾರ್‌ ತೊಳಲಾಟ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT